ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ(ಬೆಂ.ಗ್ರಾ.) :
ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಅಧಿಕಾರಿಗಳು ವರ್ತನೆ ವಿರುದ್ಧ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗದ ಹಿನ್ನಲೆಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಕೆರೆ ನೀರು ಕಲುಷಿತವಾಗಿದೆ, ಅಂತರ್ಜಲ ವಿಷವಾಗಿದೆ, ಶುದ್ಧೀಕರಣ ಘಟಕ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ವರದಿ ಬಂದಿದ್ದು ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 17 ಗ್ರಾಮಗಳ ಜನರು ಶುದ್ಧ ನೀರಿಗಾಗಿ ಹೋರಾಟ ಮಾಡುತ್ತಿದ್ದು ಮುಂದುವರೆದ ಭಾಗವಾಗಿ ಕಪ್ಪು ಬಾವುಟ ಹಾರಿಸಲು ಮುಂದಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಕೆರೆ ಏರಿ ಮೇಲೆ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯಿಂದ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಗೌರವಾಧ್ಯಕ್ಷ ಡಾ.ಟಿ.ಹೆಚ್.ಆಂಜಿನಪ್ಪ, ಶುದ್ಧ ನೀರಿಗಾಗಿ ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿರುವುದು ದುಃಖದ ವಿಷಯ. ಇದು ನಮ್ಮ ಕೊನೆಯ ಹೋರಾಟ, ರಾಷ್ಟ್ರ ಧ್ವಜ್ವದ ಮೇಲೆ ಗೌರವವಿದೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಆಗಸ್ಟ್ 15ರ ಸ್ವಾತಂತ್ರ್ಯ ದಿನ ಸಂತ್ರಸ್ತ ಕುಟುಂಬಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವುದಾಗಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮಸ್ಥ ರಾಮಕೃಷ್ಣಪ್ಪ ಮಾತನಾಡಿ, ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಕೈಗಾರಿಕಾ ತ್ಯಾಜ್ಯ ನೀರು ಸೇರುತ್ತಿದೆ. ಇದರಿಂದ ಎರಡು ಪಂಚಾಯಿತಿಯ 36 ಕೊಳವೆ ಬಾವಿಗಳಲ್ಲಿ 34 ಕೊಳವೆ ಬಾವಿಗಳ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಸಾಲದಕ್ಕೆ ಕೊಳವೆ ಬಾವಿಯಲ್ಲಿ ಕಪ್ಪು ಬಣ್ಣದ ನೀರು ಬಂದಿದೆ. ಇಂತಹ ನೀರನ್ನೇ ಕುಡಿಯಬೇಕಿದ್ದು ಸಾವು ಬದುಕಿನ ಹೋರಾಟವಾಗಿದ್ದು ಬದುಕಲು ಬೇರೆ ಆಯ್ಕೆ ಇಲ್ಲದೆ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುತ್ತಿದ್ದೇವೆ, ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ನೊಂದು ನುಡಿದ್ದಾರೆ.
ಮುಖಂಡ ಮಂಜುನಾಥ್ ಮಾತನಾಡಿ, ಶುದ್ಧ ಕುಡಿಯುವ ನೀರು ನೀಡದ ಅಧಿಕಾರಿಗಳಿಗೆ ಪ್ರಾರಂಭದಲ್ಲಿ ಸಿಹಿ ನೀಡುವ ಮೂಲಕ ಹೋರಾಟ ಮಾಡಿದ್ದೆವು. ಅನಂತರ ಚುನಾವಣೆಗಳನ್ನ ಬಹಿಷ್ಕಾರ ಹಾಕುವ ಮೂಲಕ ಎಚ್ಚರಿಕೆ ನೀಡಿದ್ದೆವು. ನಾಲ್ಕು ವರ್ಷಗಳ ನಿರಂತರ ಹೋರಾಟದಲ್ಲಿ ಅಧಿಕಾರಿಗಳ ಕಡೆಯಿಂದ ಸಣ್ಣ ಕೆಲಸವೂ ಸಹ ಆಗಿಲ್ಲ, ಅಂದಿನ ಜಿಲ್ಲಾಧಿಕಾರಿ ಶಿವಶಂಕರ್ ನಾಲ್ಕು ತಿಂಗಳಲ್ಲಿ STP ಘಟಕ ಮಾಡುವುದಾಗಿ ಹೇಳಿದ್ದರು. 2 ವರ್ಷವಾದರೂ ಅದಕ್ಕೆ ಬೇಕಾದ ಜಮೀನು ಸಹ ತೆಗೆದುಕೊಂಡಿಲ್ಲ, ವಿಧಿ ಇಲ್ಲದೆ ನಾವು ಕಪ್ಪು ಬಾವುಟ ಹಾರಾಟಕ್ಕೆ ಮುಂದಾಗಿದ್ದೇವೆ ಎಂದರು.
ಒತ್ತಾಯಗಳು:
1. ಪ್ರತಿ ಮನೆಗೂ ಮಳೆ ನೀರು ಕೊಯ್ಲು ಮಾಡಬೇಕು. 2. ಮೂರನೇ ಹಂತದ ಶುದ್ಧೀಕರಣ ಘಟಕ ಮಾಡಬೇಕು. 3. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಚಿಕ್ಕತುಮಕೂರು ಕೆರೆಯಲ್ಲಿರುವ STP ಘಟಕ ತೆರವು ಮಾಡಬೇಕು.
- ಬೇರೆ ಪಂಚಾಯಿತಿಯಿಂದ ನೀರು ಕೊಡುವುದನ್ನ ಕಾರ್ಯರೂಪಕ್ಕೆ ತರಬೇಕು. 5. ರಾಸಾಯನಿಕ ನೀರು ಬಿಡುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

