ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗಂಗಾಧರಪುರ ಸರ್ವೇ ನಂಬರ್ 111ರ ಪೊಲೀಸ್ ವಸತಿ ಗೃಹ ಜಾಗವನ್ನು ಭೂ ಕಬಳಿಕೆ ದಾರರು ಕಬಳಿಸಲು ಪ್ರಯತ್ನಿಸಿದ್ದು ಈ ಬಗ್ಗೆ ನಮ್ಮ ಸಂಘಟನೆ ಹೋರಾಟ ನಡೆಸಿದ್ದು ಇದಕ್ಕೆ ತಾಲೂಕು ಆಡಳಿತ ಯಾವುದೇ ಸ್ಪಂದನೆ ನೀಡದಿದ್ದನ್ನು ಖಂಡಿಸಿ ಗಣ ರಾಜ್ಯೋತ್ಸವದಂದು ಕಪ್ಪು ಬಾವುಟ ಪ್ರದರ್ಶನ ನಡೆಸಿ ಮೌನ ಪ್ರತಿಭಟನೆ ಮಾಡಲು ಕರವೇ ಕನ್ನಡಿಗರ ವೇದಿಕೆ ಚಿಂತನೆ ನಡೆಸಿದೆ ಎಂದು ವೇದಿಕೆ ಸ್ಥಾಪಕ ಅಧ್ಯಕ್ಷ ಬಿ. ಎಸ್. ಚಂದ್ರಶೇಖರ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಕರವೇ ಕನ್ನಡಿಗರ ಬಣದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಮಾತನಾಡಿ ಗಂಗಾಧರಪುರ ಸರ್ವೇ ನಂಬರ್ 111ರ ಪೊಲೀಸ್ ವಸತಿ ಗೃಹವಿದ್ದ ಸುಮಾರು ಮೂರು ಎಕರೆ ಜಾಗದಲ್ಲಿ ಒಂದು ಎಕರೆಯಷ್ಟು ಜಾಗವನ್ನು ಆಟದಬಯಲಿಗೆ ಮಂಜೂರಾಗಿದ್ದು ಉಳಿದ ಎರಡು ಎಕರೆ ಜಾಗವನ್ನು ಇತ್ತೀಚೆಗೆ ಕೆಲವು ಭೂ ಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಮುಂದಾಗಿದ್ದರು. ಸರ್ಕಾರಿ ಜಾಗವನ್ನು ಉಳಿಸುವ ಉದ್ದೇಶದಿಂದ ನಮ್ಮ ಸಂಘಟನೆ ಸುಮಾರು ನಾಲ್ಕು ತಿಂಗಳಿಂದ ಹೋರಾಟ ನಡೆಸಿದೆ.
ಪೊಲೀಸ್ ವಸತಿ ಗೃಹವಿದ್ದ ಜಾಗ ಏಕಾ ಏಕಿ ಅಲಿ ಬಶೀರ್ ಎಂಬ ದೇವರ ಹೆಸರಲ್ಲಿ ಪಾಣಿಯಲ್ಲಿ ನೋಂದಾಯಿಸಲ್ಪಡುತ್ತೆ. ಸಾಲದ್ದಕ್ಕೆ ವಖ್ಫ್ ಮಂಡಳಿಯವರು ಈ ಜಾಗ ಮುಸ್ಲಿಂ ಸಮುದಾಯದ ಖಬರ್ ಸ್ಥಾನದ ಜಾಗ ವೆಂದು ಖಾತೆಗಾಗಿ ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸುತ್ತಾರೆ. 1988ರಲ್ಲಿ ಪೊಲೀಸ್ ವಸತಿ ಗೃಹವಿದ್ದು ಸರ್ವಕಾಲಿಕ ಸತ್ಯ. ಆದರೆ ಇದೇ ಸಂದರ್ಭದಲ್ಲಿ ವಖ್ಫ್ ಮಂಡಳಿಯವರು ಸ್ಮಶಾನದ ಜಾಗವೆಂದು ಅರ್ಜಿ ಸಲ್ಲಿಸುತ್ತಾರೆ ಇದನ್ನು ಭೂ ನ್ಯಾಯ ಮಂಡಳಿ ಗಂಗಾಧರಪುರ ಸರ್ವೇ ನಂಬರ್ 111ರ ಜಮೀನು ಯಾರದೇ ಹಕ್ಕುದಾರಿಕೆಗೆ ಸೇರಿಲ್ಲವೆಂದು ವಖ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಅದನ್ನು ಭೂ ಸ್ವಾಧೀನ ಪಡಿಸಿಕೊಂಡು ಆ ಸಂದರ್ಭದಲ್ಲಿ ಮನೆಗಳಲ್ಲಿ ವಾಸವಿದ್ದವರನ್ನೇ ಆದಿ ಬೋಗಿದಾರರನ್ನಾಗಿ ಆದೇಶ ಹೊರಡಿಸುತ್ತದೆ. ಜೊತೆಗೆ ಪೊಲೀಸ್ ವಸತಿ ಗೃಹದವರು ನಗರಸಭೆಗೆ ಕಂದಾಯ ಕಟ್ಟಿರುತ್ತಾರೆ. ಕರೆಂಟ್ ಬಿಲ್ ಸಹ ಕಟ್ಟಿರುವ ದಾಖಲೆಗಳು ನಮ್ಮ ಬಳಿ ಇದೆ.
ಇಷ್ಟಿದ್ದರು ಸಹ ಅಲ್ಲಿಬಶೀರ್ ದೇವರ ಹೆಸರಲ್ಲಿ ಪಾಣಿ ಹೇಗೆ ಬಂತು ಎಂದು ಪ್ರಶ್ನಿಸಿದ ಚಂದ್ರು ಈ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ್ದ ಭೂ ಗಳ್ಳನ ಬಳಿ ಖುದ್ದು ನಾವೇ ವ್ಯಾಪಾರದ ಸೋಗಿನಲ್ಲಿ ಹೋಗಿ ಅವನಲ್ಲಿದ್ದ ನಕಲಿ ದಾಖಲೆಗಳನ್ನು ಪಡೆದು ಕೊಂಡು ಬಂದು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ತಾಲೂಕು ಹಾಗು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೆವು ಆದರೆ ಪ್ರಯೋಜನವಾಗಲಿಲ್ಲ. ಇದರ ಮದ್ಯೆ ಪೊಲೀಸ್ ವರಿಷ್ಟರಿಗೆ ಇಲಾಖೆಗೆ ಸೇರಿದ ಜಾಗವನ್ನು ಉಳಿಸಲು ಮನವಿ ಮಾಡಿದ್ದೆವು. ಪೊಲೀಸ್ ಇಲಾಖೆಯ ವರಿಷ್ಟರು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ತಾಲೂಕು ಆಡಳಿತಕ್ಕೆ ಸೂಚಿಸಿದ್ದರು.
ಆದರೂ ಕಂದಾಯ ವಿಭಾಗ ಇದರ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿದ್ದನ್ನು ವಿರೋಧಿಸಿ ನಾವು ಪೊಲೀಸ್ ವೇಷದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತ, ಜಿಲ್ಲಾಡಳಿತ ಕ್ಕೆ ಮತ್ತೊಮ್ಮೆ ಮನವಿ ಮಾಡಿದೆವು. ಇದಕ್ಕೆ ಜಿಲ್ಲಾಡಳಿತ ಸೂಕ್ತ ಸ್ಪಂದನೆ ಕೊಟ್ಟರು ಸಹ ತಾಲೂಕು ಆಡಳಿತ ಇಲ್ಲದ ಸಾಬೂಬು ಹೇಳಿ ಕಾಲಹರಣ ಮಾಡುತ್ತಿದೆ ಎಂದರೆ ಈ ಭೂ ಗಳ್ಳರಪ್ರಭಾವ ತಾಲೂಕು ಕಚೇರಿಯಲ್ಲಿ ಎಷ್ಟು ಕೆಲಸ ಮಾಡಿದೆ ಎಂದು ಅರ್ಥವಾಗುತ್ತದೆ. ಸರ್ಕಾರಿ ಜಾಗ ಉಳಿಸಲು ಸರ್ಕಾರದವರು ಪ್ರಯತ್ನಿಸಬೇಕು.
ಆದರೆ ನಾವೇ ಪೂರಕವಾದ ದಾಖಲೆಗಳನ್ನು ಒದಗಿಸಿ ತಾಲೂಕು ಆಡಳಿತಕ್ಕೆ ಮನವಿ ಮಾಡಿ ನಾಲ್ಕು ತಿಂಗಳಿಂದ ಹೋರಾಟ ಮಾಡುತ್ತಿದ್ದರು ತಹಶೀಲ್ದಾರರು, ಕಂದಾಯ ಅಧಿಕಾರಿಗಳು ಸುಮ್ಮನಿರುವುದನ್ನು ನೋಡಿದರೆ ಇವರೇನಾದರೂ ಶಾಮಿಲಾಗಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಸರ್ಕಾರಿ ಜಾಗ ಉಳಿಸಲು ಇಷ್ಟೆಲ್ಲಾ ಹೋರಾಟ ಮಾಡುತ್ತಿದ್ದರು ನಮ್ಮ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ಇದನ್ನು ಖಂಡಿಸಿ ಜನವರಿ 26ಗಣರಾಜ್ಯೋತ್ಸವದಂದು ತಾಲೂಕು ಆಡಳಿತದಿಂದ ನಡೆವ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಲು ನಮ್ಮ ಸಂಘಟನೆ ಪ್ರಯತ್ನಿಸಿದೆ.
ಒಂದು ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಭೂ ಗಳ್ಳರ ವಿರುದ್ಧ ಕ್ರಮ ಕೈಗೊಂಡು ಅಲಿ ಬಶೀರ್ ಹೆಸರಿನಲ್ಲಿ ನಕಲಿ ವಂಶ ವೃಕ್ಷವನ್ನು ಸೃಸ್ಟಿಸಿ ಸಿದ್ದಪಡಿಸಿದ ದಾಖಲೆಗಳನ್ನು ವಜಾ ಮಾಡುವುದಾಗಿ ತಾಲೂಕು ಆಡಳಿತ ಭರವಸೆ ಕೊಟ್ಟರೆ ನಾವು ಪ್ರತಿಭಟನೆಯನ್ನು ವಾಪಾಸ್ ಪಡೆಯುತ್ತೇವೆ ಇಲ್ಲದಿದ್ದರೆ ತೀವ್ರ ತರದ ಹೋರಾಟಕ್ಕೆ ಮುಂದಾಗುತ್ತೆವೆಂದು ಚಂದ್ರ ಶೇಖರ್ ಹೇಳಿದರು.
ಅರವಿಂದ್, ರಮೇಶ್, ನರೇಂದ್ರ ಸೇರಿದಂತೆ ಹಲವಾರು ಕರವೇ ಕನ್ನಡಿಗರ ಬಣದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

