ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಮಾದಕದ್ರವ್ಯ ಸಾಗಾಣೆ ಆರೋಪದಲ್ಲಿ ಕಾಂಗ್ರೆಸ್ ಮುಖಂಡ, ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಅವರ ಆಪ್ತರು ಆಗಿದ್ದಾರೆ.
ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟ ಮಾಡುವ ವೇಳೆ ಅಲ್ಲಿನ ಕಲ್ಯಾಣ ಠಾಣೆ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಬಂಧಿಸಿದ್ದಾರೆ. ಬಂಧಿತರ ಬಳಿ ನಿಷೇಧಿತ 120 ಕೊಡೆನೈನ್ ಸಿರಪ್ ಬಾಟಲ್ ಇತ್ತು ಎನ್ನಲಾಗಿದೆ.
ಎನ್ಡಿಪಿಎಸ್ ಕಾಯ್ದೆ ಅಡಿ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಿಂಗರಾಜ್ ಕಣ್ಣಿ ಈ ಹಿಂದೆ ಬಿಜೆಪಿಯಲ್ಲಿ ಇದ್ದರು. 2023ರ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ಸೇರಿದ್ದರು.
ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕಲಬುರಗಿ ದಕ್ಷಿಣ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ ಕಲ್ಯಾಣ ಕರ್ನಾಟಕದ ಮರ್ಯಾದೆ ತಗೆದಿದ್ದಾರೆ ಎಂದು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗರಾಜ ಕಣ್ಣಿಗೆ ಕಲಬುರಗಿ ದಕ್ಷಿಣ ಕ್ಷೇತ್ರದ ಪ್ರಭಾವಿ ಶಾಸಕರ ಶ್ರೀರಕ್ಷೆಯಿದೆ. ಡೈಲಾಗ್ ಮಿನಿಸ್ಟರ್ ಇವರನ್ನು ಪಕ್ಕದಲ್ಲೇ ಕೂರಿಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ಒಂದು ಕಡೆ ಡ್ರಗ್ಸ್ ಮುಕ್ತ ಮಾಡುತ್ತೇನೆ ಎನ್ನುತ್ತಾರೆ.
ಡ್ರಗ್ಸ್ ಮಾರಾಟ ಮಾಡುವವರನ್ನೇ ಪಕ್ಷದಲ್ಲಿಟ್ಟುಕೊಂಡು ಡೈಲಾಗ್ ಹೊಡೆಯುತ್ತಾರೆ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ವಾಮೀಜಿ ವಾಗ್ದಾಳಿ ನಡೆಸಿದರು. ಲಿಂಗರಾಜ್ ಕಣ್ಣಿಗೆ ಎಐಸಿಸಿ ಅಧ್ಯಕ್ಷರ ಜೊತೆಯೂ ಸಂರ್ಪಕವಿದೆ ಎಂದು ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.