ಆಗಸ್ಟ್ 19 ರಂದು ವಿಶೇಷ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಕ್ತಪಾತ ಗ್ಯಾರಂಟಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಗಸ್ಟ್ 19 ರಂದು ಮುಖ್ಯಮಂತ್ರಿಗಳು ಕರೆದಿರುವ ವಿಶೇಷ ಸಚಿವ ಸಂಪುಟದಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಯಥಾವತ್ ಜಾರಿಗೊಳದಿದ್ದರೆ ರಕ್ತಪಾತ ಆಗಲಿದೆ ಎಂದು ಮಾದಿಗ ಸಮುದಾಯದ ಮುಖಂಡರು ಎಚ್ಚರಿಸಿದರು.

ಇಲ್ಲಿನ ಪತ್ರಕರ್ತರ ಸಂಘದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಮಹತ್ವದ ತೀರ್ಪನ್ನು ಆಗಸ್ಟ್ 1, 2024ರಂದು ಸುಪ್ರೀಂ ಕೋರ್ಟ್ ನೀಡಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇಲ್ಲ.

- Advertisement - 

ಮಾದಿಗ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೂ ಒಳ ಮೀಸಲು ವರ್ಗೀಕರಣದಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿದೆ ಆದರೂ ಸಹೋದರ ಜಾತಿಯ ಕೆಲ ಮೀಸಲಾತಿ ವಿರೋಧಿಗಳು ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ನ್ಯಾ,ನಾಗಮೋಹನ್ ದಾಸ್ ಅವರು ಗುಂಪುಗಳ ರಚನೆ ವೇಳೆ ಅತ್ಯಂತ ಹೆಚ್ಚು ಹಿಂದುಳಿದ ಸಣ್ಣ ಜಾತಿಗಳನ್ನು (ಎ)ಶೇ.1, ಮಾದಿಗ ಮತ್ತು ಅದೇ ರೀತಿ ಅಸ್ಪೃಶ್ಯತೆ ಒಳಗಾಗಿರುವ ಅತ್ಯಂತ ಹಿಂದುಳಿರುವ ಜಾತಿಗಳನ್ನು (ಬಿ) ಶೇ.6, ಹೊಲೆಯ ಹಿಂದುಳಿರುವ ಜಾತಿಗಳನ್ನು (ಸಿ) ಶೇ.5, ಭೋವಿ, ಲಂಬಾಣಿ, ಕೊರಚ, ಕೊರಮ ಈ ನಾಲ್ಕು ಜಾತಿಗಳನ್ನು (ಡಿ) ಶೇ.4, ಮಾದಿಗ, ಛಲವಾದಿ ಎಂದು ಗುರುತಿಸಿಕೊಳ್ಳದೆ ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಎಂದು ಗುರುತಿಸಿಕೊಂಡಿರುವ ಗುಂಪನ್ನು (ಇ) ಶೇ.1 ಎಂದು ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಿದ್ದು ಈ ಮೀಸಲಾತಿಯಲ್ಲಿ ಮಾದಿಗ ಮತ್ತು ಹೊಲೆಯ ಜಾತಿಗಳ ಗುಂಪುಗಳಿಗೆ ಅರ್ಧದಷ್ಟು ಸಮನಾಗಿ ಹಂಚಿಕೆ ಮಾಡುವಂತೆ ಆಗ್ರಹ ಮಾಡಿದರು.

- Advertisement - 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ವಿರೋಧಿಗಳಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ವಿಳಂಬ ನೀತಿ ಅನುಸರಿಸಿ ಮಾದಿಗ ಜಾತಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸಲೇಬೇಕು, ಇಲ್ಲದಿದ್ದರೆ ಮಹಿಳೆಯರು, ಮಕ್ಕಳೊಂದಿಗೆ ಮಾದಿಗರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾದಿಗ ಸಮಾಜ ಯಾರ ಅನ್ನಕ್ಕೂ ಕನ್ನ ಹಾಕುತ್ತಿಲ್ಲ, ಒಂದು ತಲೆಮಾರುಗಳ ಕಾಲ ಅನ್ಯಾಯಕ್ಕೆ ಒಳಗಾಗಿದ್ದು ನಮ್ಮ ಅನ್ನವನ್ನ ನಮಗೆ ನೀಡಿ ಎಂದು ಕೇಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಳೆ ಚಾಳಿ ಬಿಟ್ಟು ಆ.19 ರಂದು ಒಳ ಮೀಸಲಾತಿ ಜಾರಿ ಮಾಡಿ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾದಿಗ ಜಾತಿ ಮುಖಂಡರಾದ ಜಿ.ಹೆಚ್ ಮೋಹನ್ ಕುಮಾರ್, ಹೆಚ್.ಮಹಂತೇಶ್, ರುದ್ರಮುನಿ, ಪ್ರಹ್ಲಾದ್, ಬಸಮ್ಮ, ಕೃಷ್ಣಮೂರ್ತಿ, ಪರಶುರಾಮ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜನ್, ಜಯಪ್ಪ, ನರಸಿಂಹಣ್ಣ, ಕೆಂಚಪ್ಪ, ಕಲ್ಲೇಶ್, ಮಂಜನಾಥ್, ರವಿಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

 

 

 

 

 

Share This Article
error: Content is protected !!
";