ಅಕ್ಷರ ಜಾತ್ರೆಗೆ ಶನಿವಾರ ಚಾಲನೆ: ಬಿ.ಎನ್.ಕೃಷ್ಣಪ್ಪ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ಕನಸವಾಡಿಯಲ್ಲಿ ಏ.
12 ಮತ್ತು 13ರಂದು ಶನಿವಾರ ಮತ್ತು ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಬೆಂ.ಗ್ರಾ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಕ್ಷರ ಜಾತ್ರೆಗೆ ಸಿದ್ದತೆಗಳು ಈಗಾಗಲೇ ಪೂರ್ಣಗೊಂಡಿದ್ದು, ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ದಗೊಳ್ಳುತ್ತಿದೆ. ಈ ಬಾರಿ ಸಮ್ಮೇಳನದ ವೇದಿಕೆಗೆ ಹಿರಿಯ ಕ್ರೀಡಾಪಟು ದಿವಂಗತ ಜಿ.ಗೋಪಿನಾಥ್ ಅವರ ಹೆಸರನ್ನು ಮತ್ತು ಮಹಾದ್ವಾರಕ್ಕೆ ಮುತ್ಸ್ದದಿ ರಾಜಕಾರಣಿ ದಿವಂಗತ ಸಿ.ಡಿ,ಸತ್ಯನಾರಾಯಣಗೌಡರ ಹೆಸರನ್ನು ಇಡಲಾಗಿದೆ. ಹಿರಿಯ ಛಾಯಾಗ್ರಾಹಕ, ಸಾಕ್ಷ್ಯಚಿತ್ರ ಕಲಾವಿದ ಟಿ.ಕೆಂಪಣ್ಣ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ ಎಂದು ವಿವರಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಮಧುರೆ ಹೋಬಳಿಯ ಸ್ಥಳೀಯ ಆಡಳಿತ, ಮುಖಂಡರು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದ ಅವರು, ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್‌ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ್, ಶಾಸಕ ಧೀರಜ್‌ಮುನಿರಾಜ್‌ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಗಣ್ಯರು ಭಾಗವಹಿಸಲಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡಪರ ಚಿಂತಕರು, ಸಾಹಿತಿಗಳು, ಸ್ಥಳೀಯ ಸಾಧಕರು ವಿವಿಧ ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. 50ಕ್ಕೂ ಹೆಚ್ಚಿನ ಸಾಧಕ ಗಣ್ಯರಿಗೆ ಪುರಸ್ಕಾರ ನೀಡಲಾಗುತ್ತಿದೆ. ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲು ಜಿಲ್ಲಾಡಳಿತ ಯೋಜಿಸಿದೆ. ಎರಡೂ ದಿನಗಳ ಕಾಲ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, 2 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಮೊದಲ ದಿನ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ, ಕನ್ನಡದ ಅರಿವು ಮತ್ತು ಅಭಿಯಾನ ಕುರಿತ ವಿಚಾರಗೋಷ್ಠಿ ತ.ನ.ಪ್ರಭುದೇವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಚಿಂತಕ ಕೆ.ರಾಜಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ. ಯುವ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

2ನೇ ದಿನವಾದ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ದಿ ಮತ್ತು ಆತಂಕಗಳು ಕುರಿತ ವಿಚಾರಗೋಷ್ಠಿ ವಿಮರ್ಶಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾವಯವ ಕೃಷಿ ತಜ್ಞ ಡಾ.ಶಿವನಾಪುರ ರಮೇಶ್, ಜಗನ್ನಾಥ್‌ಪ್ರಕಾಶ್‌ವಿಷಯ ಮಂಡನೆ ಮಾಡುವರು. ಬಳಿಕ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ, ಸನ್ಮಾ ಹಾಗೂ ಸಮಾರೋಪ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ವಿವರಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಅಶ್ವತ್ಥಗೌಡ, ಜಿಲ್ಲಾ ಪ್ರತಿನಿಧಿ ಶರಣಯ್ಯ ಹಿರೇಮಠ, ದೇವನಹಳ್ಳಿ ತಾಲೂಕು ಅಧ್ಯಕ್ಷ ನಂಜೇಗೌಡ, ನೆಲಮಂಗಲ ತಾಲೂಕು ಕಾರ್ಯದರ್ಶಿಗಳಾದ ಸದಾನಂದ ಆರಾಧ್ಯ, ಭಾನುಪ್ರಕಾಶ್, ಮಧುರೆ ಹೋಬಳಿ ಕಾರ್ಯದರ್ಶಿ ಚಂದ್ರಶೇಖರಯ್ಯ, ಕಸಬಾ ಹೋಬಳಿ ಕಾರ್ಯದರ್ಶಿ ಸುರೇಶ್, ತಾಲೂಕು ಘಟಕದ ಪ್ರತಿನಿಧಿ ಸಫೀರ್ ಮತ್ತಿತರರು ಹಾಜರಿದ್ದರು.

 

 

Share This Article
error: Content is protected !!
";