ಚಂದ್ರವಳ್ಳಿ ನ್ಯೂಸ್, ಹರಿಹರ:
21ನೇ ಶತಮಾನ ಜ್ಞಾನದ ಶತಮಾನವಾಗಿದ್ದು, ವಾಲ್ಮೀಕಿ ಸಮುದಾಯದ ಎಲ್ಲ ಮಕ್ಕಳು ವಿದ್ಯಾವಂತರಾಗಿ ಎಲ್ಲ ರಂಗಗಳಲ್ಲಿಯೂ ಮುಂದೆ ಬರಬೇಕು. ಎಸ್ಪಿ ಸಮುದಾಯದ ಮೀಸಲಾತಿ ಹೆಚ್ಚಳದಿಂದ ಪಾಲ್ಮೀಕಿ ಸಮುದಾಯದ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಭಾನುವಾರ ನಡೆದ ಮಹರ್ಷಿ ಶ್ರೀ ವಾಲ್ಮೀಕಿ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ನಾನು ವಾಲ್ಮೀಕಿ ಸಮುದಾಯದ ಜೊತೆಗೆ ಬೆಳೆದಿರುವುದರಿಂದ ಈ ಸಮುದಾಯದ ನೋವು ಅವಮಾನ ನನಗೆ ಗೊತ್ತಿದೆ. ಆ ಅವಮಾನ ಇನ್ನಾದರೂ ಹೋಗಬೇಕು. ಸುಶಿಕ್ಷಿತರಾಗಿ ಸಾಮಾಜಿಕವಾಗಿ ವಿದ್ಯಾವಂತರಾಗಿ ಬದುಕಿನಲ್ಲಿ ಯಶಸ್ವಿಯಾದರೆ ಅವರಿಗೆ ಸನ್ಮಾನವೂ ಸಿಗುತ್ತದೆ. ನ್ಯಾಯವೂ ಸಿಗುತ್ತದೆ.
ಮೀಸಲಾತಿ ಹೆಚ್ಚಳಕ್ಕಾಗಿ ಸ್ವಾಮೀಜಿ ಹೋರಾಟ ಮಾಡಿದರು. ಪಾದಯಾತ್ರೆ ಮಾಡಿದರು. ಅದಕ್ಕೂ ಪರಿಹಾರ ಸಿಗಲಿಲ್ಲ. ಆಗ ನ್ಯಾ. ನಾಗಮೋಹನ ದಾಸ್ ಸಮಿತಿ ರಚನೆಯಾಯಿತು. ಅದನ್ನು ಸ್ವಾಮೀಜಿ ಸ್ವಾಗತ ಮಾಡಿದರು. ಸ್ವಾಮೀಜಿಗಳು ಎಷ್ಟು ಕಷ್ಟಪಟ್ಟಿದ್ದಾರೆ ಎಂದು ನನಗೆ ಗೊತ್ತಿದೆ. ಆ ಆಯೋಗದ ಸಭೆಗಳಲ್ಲಿ ಏನೇನು ಲೋಪಗಳು ಆಗುತ್ತಿದ್ದವು ಅವುಗಳನ್ನು ಸರಿಪಡಿಸಿ ನಾವು ವರದಿ ಸ್ವೀಕರಿಸಿ ಜಾರಿಗೆ ತಂದೆವು ಎಂದರು.
ವಾಲ್ಮೀಕಿ ಪ್ರೇರಣೆ-ಹಲವಾರು ಆಯೋಗಗಳು ರಚನೆಯಾಗಿ ವರದಿಯನ್ನೇ ಕೊಟ್ಟಿಲ್ಲ. ನ್ಯಾ. ಸದಾಶಿವ ಆಯೋಗದ ವರದಿ 14 ವರ್ಷಗಳ ನಂತರ ಕೊಟ್ಟರು. ಜಾತಿ ಗಣತಿ ವರದಿ ಇನ್ನೂ ಜಾರಿಗೆ ಬಂದಿಲ್ಲ. ನ್ಯಾ. ನಾಗಮೋಹನ್ ದಾಸ್ ಅವರ ವರದಿ ಬಂದ ತಕ್ಷಣ ನಮ್ಮ ನಾಯಕರಾದ ಯಡಿಯೂರಪ್ಪ ಅವರ ಗಮನಕ್ಕೆ ತಂದು ಈ ಬಗ್ಗೆ ತಪ್ಪು ಸರಿಗಳನ್ನು ಸರಿಪಡಿಸಿ ಸ್ವಾಮೀಜಿಗೆ ನಿಮ್ಮ ಹೋರಾಟಕ್ಕೆ ಜಯ ಸಿಗುವ ಸಂದರ್ಭ ಬಂದಿದೆ ಎಂದು ಹೇಳಿದೆ.
ಈ ಬಗ್ಗೆ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕೇವಲ ಆದೇಶ ಮಾಡದೇ ವಿಧಾನಸಭೆಯಲ್ಲಿ ಚರ್ಚಿಸಿ ಕಾಯ್ದೆ ಮಾಡಿ ಗೆಜೆಟ್ ನೋಟಿಫಿಕೇಶನ್ ಮಾಡಿದ್ದೇವೆ. ಅಧಿಕಾರ ಶಾಸ್ತ್ರತ ಅಲ್ಲ. ನಾವು ಮಾಡಿರುವ ಕೆಲಸ ಶಾಶ್ವತವಾಗಿ ಉಳಿಯುತ್ತವೆ. ಈ ಮಹತ್ ಕಾರ್ಯ ಮಾಡಲು ಮಹರ್ಷಿ ವಾಲ್ಮೀಕಿಯ ಪೇರಣೆ, ನಾನು ನಿಮಿತ್ಯ ಮಾತ್ರ, ನನ್ನ ಕೈಯಿಂದ ಇಂತ ನ್ಯಾಯ ಕೊಡಿಸುವ ಕೆಲಸ ಆಗಿದ್ದು ನಾನೇ ಪುಣ್ಯವಂತ ಎಂದು ಹೇಳಿದರು.
ಮಹತ್ವ-ದೇಶದಲ್ಲಿ 156 ರಾಮಾಯಣಗಳಿವೆ ಅದರಲ್ಲಿ ಶ್ರೇಷ್ಟವಾಗಿರುವುದು ವಾಲ್ಮೀಕಿ ರಾಮಾಯಣ, ವಿಶ್ವದ ಶ್ರೇಷ್ಠ ಕೃತಿಗಳಲ್ಲಿ ಮೇರು ಕೃತಿ ವಾಲ್ಮೀಕಿ ರಾಮಾಯಣ, ವಾಲ್ಮೀಕಿ ರಾಮಾಯಣ ಯಾವುದೋ ರಾಜನ ಕಥೆಯಲ್ಲ. ಅದು ಒಂದು ಧರ್ಮದ, ನ್ಯಾಯದ, ನೀತಿಯ ಮಹಾನ್ ಗ್ರಂಥ, ಸಂಬಂಧಗಳ ಮಹತ್ವ ತಿಳಿಯಬೇಕೆಂದರೆ ವಾಲ್ಮೀಕಿ ರಾಮಾಯಣ ಓದಬೇಕು. ತಂದೆ ಮಕ್ಕಳ ಸಂಬಂಧ ತಿಳಿಯಬೇಕೆಂದರೆ ರಾಮ ದಶರಥರ ಸಂಬಂಧ ತಿಳಿಯಬೇಕು. ಸತಿ ಪತಿ ಸಂಬಂಧ ತಿಳಿಯಲು ರಾಮ ಸೀತೆಯರ ಸಂಬಂಧ ತಿಳಿಯಬೇಕು.
ಗುರು ಶಿಷ್ಯರ ಸಂಬಂಧ ತಿಳಿಯಲು ರಾಮ ಹನುಮಂತನ ಸಂಬಂಧ ತಿಳಿಯಬೇಕು. ರಾಜ ಮತ್ತು ಪ್ರಜೆಗಳ ಬಗ್ಗೆ ತಿಳಿಯಬೇಕೆಂದರೆ ರಾಮ ಹಾಗೂ ಅಂದಿನ ಪ್ರಜೆಗಳ ಬಗ್ಗೆ ತಿಳಿಯಬೇಕು. ಆಗ ಯುದ್ಧ ಮಾಡುವುದರಲ್ಲಿಯೂ ಧರ್ಮ ಇತ್ತು. ರಾಮ ರಾವರಣ ಯುದ್ಧದಲ್ಲಿ ನೀತಿ ಇತ್ತು ಯಾರೂ ಧರ್ಮದ ಎಳೆಯನ್ನು ಬಿಟ್ಟು ಯುದ್ಧ ಮಾಡಲಿಲ್ಲ. ಮಹಾತ್ಮಾಗಾಂಧೀಜಿಯವರು ರಾಮರಾಜ್ಯ ಎಂದು ಕರೆಯುತ್ತಿದ್ದರು. ಇಲ್ಲಿ ಅನ್ಯಾಯಕ್ಕೆ ಎಲ್ಲಿಯೂ ಜಾಗ ಇಲ್ಲ. ರಾಮರಾಜ್ಯದಲ್ಲಿ ಸಮಾನತೆ ಆಡಳಿತದ ಜೊತೆಗೆ ಸಮೃದ್ಧಿಯ ಆಡಳಿತ, ಯಾವುದಕ್ಕೂ ಕೊರತೆಯಾಗದಂತೆ ರಾಮ ರಾಜ್ಯವಾಳಿದರು ಎಂದರು.
ಮೀಸಲಾತಿಯ ಬಗ್ಗೆ ಬಹಳಷ್ಟು ಚರ್ಚೆಯಾಗಿದೆ. ಈಗ ಚರ್ಚೆಯ ಅಗತ್ಯವಿಲ್ಲ. ನ್ಯಾಯ ಸಿಕ್ಕಿದೆಯೋ ಇಲ್ಲವೋ ಎನ್ನುವುದು ಮಾತ್ರ ಚರ್ಚೆಯಾಗಬೇಕು. ಯಾರಿಗೆ ಅನ್ಯಾಯವಾಗಿತ್ತೊ ಅವರಿಗೆ ನ್ಯಾಯ ಸಿಕ್ಕಿದೆಯೋ ಇಲ್ಲವೋ ಚರ್ಚೆಯಾಗಬೇಕು. ನಾವು ಯಾರೂ ಅರ್ಜಿ ಹಾಕಿ ಹುಟ್ಟಿಲ್ಲ. ಜನಾಶೀರ್ವಾದದಿಂದ ನನಗೆ ಸಿಎಂ ಸ್ಥಾನ ಸಿಕ್ಕಿದೆ. ಆ ಸ್ಥಾನ ಸಿಕ್ಕಾಗ ರಾಮನ ರೀತಿ ನ್ಯಾಯ ಕೊಡುವ ನಿರ್ಣಯ ಮುಖ್ಯ ನಾನು ಮೀಸಲಾತಿ ನೀಡುವ ತೀರ್ಮಾನ ತೆಗೆದುಕೊಳ್ಳಲು ಮಹರ್ಷಿ ವಾಲ್ಮೀಕಿ ಅವರು ಕಾರಣ ಎಂದು ಹೇಳಿದರು.
ಈಗಾಗಲೇ ಮೀಸಲಾತಿ ಹೆಚ್ಚಳ ಜಾರಿಯಾಗಿದೆ. ಸಮಾಜದ ಚಿಂತನೆ ಬದಲಾಗಬೇಕು. ವಾಲ್ಮೀಕಿ ಸಮುದಾಯ ಬುದ್ಧಿವಂತಿಕೆಯಲ್ಲಿ ಯಾರಿಗೂ ಕಡಿಮೆ ಇಲ್ಲ. ಒಂದು ಕಾಲ ಇತ್ತು ಯಾರ ಬಳಿ ಭೂಮಿ ಇತ್ತೊ ಅವರು ಜಗತ್ತು ಆಳುತ್ತಿದ್ದರು. ಅದಕ್ಕೆ ರಾಜ ಮಹಾರಾಜರು ಯುದ್ಧ ಮಾಡಿದ್ದರು. ನಂತರ ಯಾರ ಬಳಿ ಹಣ ಇತ್ತೊ, ಯಾರು ವ್ಯಾಪಾರ ಮಾಡುತ್ತಿದ್ದರೋ ಅವರು ಜಗತ್ತು ಆಳಿದರು. ಅದಕ್ಕೆ ಬ್ರಿಟೀಷರು 146 ದೇಶಗಳನ್ನು ಆಳಿದರು.
ಆದರೆ, 21 ನೇ ಶತಮಾನ ಜ್ಞಾನದ ಶತಮಾನ ಈಗ ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಾರೆ. ಅಮೇರಿಕಾದ ಅಧ್ಯಕ್ಷರು ಯಾರಾಗಬೇಕು ಎನ್ನುವ ತೀರ್ಮಾನಿಸುವ ಶಕ್ತಿಯನ್ನು ಜ್ಞಾನ ಉಳ್ಳವರು ಹೊಂದಿದ್ದಾರೆ. ವಾಲ್ಮೀಕಿ ಕುಲದವರು ಮಕ್ಕಳಿಗೆ ಶಿಕ್ಷಣ ಕೊಡಿ, ಒಳ್ಳೆಯ ಉದ್ಯಮಿಗಳನ್ನು ಸೃಷ್ಟಿಸಿ ಉದ್ಯಮಿಗಳಾಗಿ, ಎಲ್ಲ ರಂಗಗಳಲ್ಲಿಯೂ ಬೆಳೆಯಬೇಕು. ಬೇರೆಯವರು ಬಂದು ನಮಗೆ ಸಹಾಯ ಮಾಡುತ್ತಾರೆ ಎನ್ನುವುದು ಸುಳ್ಳು ನಮ್ಮ ಸ್ವಾಭಿಮಾನದ ಬದುಕು ನಾವೇ ಕಟ್ಟಿಕೊಳ್ಳಬೇಕು. ಶಿಕ್ಷಣ, ಸಂಸ್ಕಾರ ಇದ್ದರೆ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಎಸ್ಪಿ ಸಮುದಾಯಕ್ಕೆ ಶೇ 7 ರಷ್ಟು ಮೀಸಲಾತಿ ದೊರೆಯುತ್ತಿರುವುದರಿಂದ ನೂರಾರು ಜನರಿಗೆ ಮೆಡಿಕಲ್ ಸೀಟು ಸಿಗುತ್ತಿದೆ. ಸಾವಿರಾರು ಎಂಜನೀಯರಿಂಗ್ ಸೀಟುಗಳು ಸಿಗುತ್ತಿವೆ. ಮಕ್ಕಳಿಗೆ ಮೀಸಲಾತಿ ಲಾಭ ಸಿಕ್ಕಿದೆ. ಅದರ ಲಾಭವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರವಾದರೆ ಯಾರು ಹೊಣೆ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕೆ ಸಾಲ, ವಿದ್ಯಾಭ್ಯಾಸಕ್ಕೆ ಸಾಲ ಕೊಡುವುದು ಲೂಟಿಯಾದರ ಹೇಗೆ ಸಾಮಾಜಿಕ ನ್ಯಾಯ ಕೊಡಲು ಸಾಧ್ಯ. ಆದ್ದರಿಂದ ಭಾಷಣದಿಂದ ನ್ಯಾಯ ಕೊಡಲು ಸಾಧ್ಯವಿಲ್ಲ. ನಮ್ಮ ನಡೆಯಿಂದ, ಬದ್ಧತೆಯಿಂದ ಮಾತ್ರ ನ್ಯಾಯ ಕೊಡಲು ಸಾಧ್ಯ. ಈ ಸಮುದಾಯಕ್ಕೆ ದೊಡ್ಡ ಭವಿಷ್ಯ ಹಿಂದೆ ಭವಿಷ್ಯ ಕಟ್ಟಿಕೊಡುವ ಗುರು ಇದ್ದಾರೆ. ಮುಂದೆ ನಿಮ್ಮ ಗುರಿ ಇರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರು ಪೀಠದ ಡಾ. ವಾಲ್ಮೀಕಿ ಪಸನ್ನಾನಂದ ಮಹಾಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ರಾಜುಗೌಡ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.