ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮದುವೆ ಆರತಕ್ಷತೆಯಲ್ಲಿ ಪುಸ್ತಕ ಬಿಡುಗಡೆಗೊಳಿಸಿ ನಂತರ ಮದುವೆಯ ಆರತಕ್ಷತೆ ಪ್ರಾರಂಭ, ಮದುವೆಗೆ ಆಗಮಿಸಿದ್ದ ಆಹ್ವಾನಿತರಿಗೆ ಫಲತಂಬೂಲದ ಜೊತೆಗೆ ಪುಸ್ತಕ, ಇಂತಹ ವಿಶೇಷ ಮದುವೆ ಸಂಭ್ರಮ ದೊಡ್ಡಬಳ್ಳಾಪುರ ನಗರದ ಎ.ಡಿ.ಎಸ್. ಕಲ್ಯಾಣ ಮಂದಿರದಲ್ಲಿ ನಡೆಯಿತು.
ದೊಡ್ಡಬಳ್ಳಾಪುರ ಕನ್ನಡ ಜಾಗೃತ ಪರಿಷತ್ತು ಪ್ರದಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಮತ್ತು ನಗರಸಭೆ ಮಾಜಿ ಉಪಾಧ್ಯಕ್ಷೆ ಎನ್.ಮಂಜುಳ ದಂಪತಿಗಳ ಪುತ್ರಿ ರಶ್ಮಿಪ್ರಿಯ, ಮಾದಗೊಂಡನಹಳ್ಳಿ ತಿಮ್ಮೇಗೌಡ ಮತ್ತು ರಂಗಮ್ಮ ದಂಪತಿಗಳ ಪುತ್ರ ಸಂಜಯ್ ಕುಮಾರ್ ಅವರ ಮದುವೆ ಆರತಕ್ಷತೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಜನಪ್ರಿಯ ವೈದ್ಯರು, ರೈತ, ಕನ್ನಡ ಮತ್ತು ಪ್ರಗತಿಪರ ಸಂಘಟನೆಯ ಹೋರಾಟಗಾರ ದಿ. ಡಾ.ಎನ್.ವೆಂಕಟರೆಡ್ಡಿ ಕುರಿತ ನೀನಾರಿಗಲ್ಲಾದವನು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ರಾಮೇಗೌಡ, ಡಾ.ಎನ್.ವೆಂಕಟರೆಡ್ಡಿ ಅವರ ಪತ್ನಿ ಸುಲೋಚನಮ್ಮ, ಪುಸ್ತಕ ಸಂಪಾದಕ ಕೆ.ವೆಂಕಟೇಶ್ ಮೊದಲಾವರು ಡಾ.ಎನ್.ವೆಂಕಟರೆಡ್ಡಿ ಅವರ ಬದುಕು ಮತ್ತು ಹೋರಾಟಗಾರಗಳನ್ನು ಕುರಿತು ಮಾತನಾಡಿ ರೈತ ಪರ ಚಳುವಳಿಗಳು, ಕನ್ನಡ ಜಾಗೃತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಕ್ರಿಯವಾಗಿ ಹೋರಾಡುತ್ತಿದ್ದ ಡಾ.ಎನ್ ವೆಂಕಟರೆಡ್ಡಿ ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಹಲವಾರು ಜನಪರ ಚಳುವಳಿಗಳಲ್ಲಿ ಭಾಗವಹಿಸಿದ್ದ ಸಂದರ್ಭಗಳನ್ನು ಸ್ಮರಿಸಿದರು.
ರೈತ ಹೋರಾಟ, ಕನ್ನಡಪರ ಹೋರಾಟಗಳಲ್ಲಿ ಹಲವು ಬಾರಿ ಜೈಲು ಸೇರಿದ್ದ ಡಾ.ಎನ್.ವೆಂಕಟರೆಡ್ಡಿ ಜನಪರ ಧ್ವನಿ, ಬದುಕಿನ ಹೋರಾಟದ ಚಿಂತನೆ ಮೈಗೂಡಿಸಿಕೊಂಡವರು. ಕನ್ನಡ ಪ್ರೀತಿ ಮತ್ತು ಸಮಾಜ ಸೇವೆಯ ಕಾರಣದಿಂದ ಅಪರೂಪದ ಕನ್ನಡಪರ ಹೋರಾಟಗಾರರಾಗಿದ್ದ ಡಾ.ಎನ್.ವೆಂಕಟರೆಡ್ಡಿ ಜನರ ಮನಸ್ಸಿನಲ್ಲಿ ಸದಾ ನೆಲೆಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಎನ್.ವೆಂಕಟರೆಡ್ಡಿ ಅವರ ಪುತ್ರ ಡಾ.ವಿಷ್ಣುವರ್ಧನ್, ಪ್ರಗತಿಪರ ಚಿಂತಕ ಕಾರಹಳ್ಳಿ ಶ್ರೀನಿವಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ,
ಜನಪ್ರಿಯ ಸಾಹಿತ್ಯ ಸಾಹಿತಿ ಡಾ.ಎ.ಓ.ಆವಲಮೂರ್ತಿ, ನಗರಸಭಾ ಮಾಜಿ ಸದಸ್ಯ ಜಿ.ಸತ್ಯನಾರಾಯಣ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮುಂತಾದವರು ಭಾಗವಹಿಸಿದ್ದರು.

