ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ್ ಗೆ ದೆಹಲಿಯಲ್ಲಿ ಸನ್ಮಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ್ ಅವರಿಗೆ ದೆಹಲಿ ಕರ್ನಾಟಕ ಸಂಘದಿಂದ ಸನ್ಮಾನ ಮತ್ತು ಅಭಿನಂದನೆ.. ಶ್ರೀಮತಿ ಭಾನು ಮುಸ್ತಾಕ್ ಮೇಡಂ ಅವರ ಮನದಾಳದಿಂದ ಮೂಡಿ ಹತ್ತಿಸಿದ ಅವರ “ಎದೆಯ ಹಣತೆ”ಯ ಬೆಳಕು ಇಡೀ ದೇಶ ವಿದೇಶಗಳಲ್ಲಿ ಪ್ರಜ್ವಲಿಸಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಬರಹಗಳಿಗಷ್ಟೇ ಕೊಡ ಮಾಡುವ ಭೂಕರ್ ಪ್ರಶಸ್ತಿ ಪಡೆದು ಕನ್ನಡ ಭಾಷೆಗೆ ಮನ್ನಣೆ ತಂದುಕೊಟ್ಟು ವಿಶ್ವಕ್ಕೆ ನಮ್ಮ ಕನ್ನಡದ ಭಾಷೆಯ ಶ್ರೇಷ್ಠತೆಯನ್ನು ತೋರಿಸಿಕೊಟ್ಟು ಕನ್ನಡ ಭಾಷೆಗೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಅಷ್ಟಲ್ಲದೇ ಅವರ “ಕರಿ ನಾಗರ” ಎಂಬ ಕಥೆಯನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು “ಗುಲಾಬಿ ಟಾಕೀಸ್” ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದರು.

ಆ ಚಲನಚಿತ್ರಕ್ಕೆ ಒಂದಲ್ಲ ಎರಡಲ್ಲ ಮೂರು ಮೂರು ಸ್ವರ್ಣ ಕಮಲ ಪ್ರಶಸ್ತಿಗಳು ಸಿಕ್ಕಿವೆ ಇಷ್ಟೆಲ್ಲ ಸಾಧಿಸಿದ ಅವರನ್ನು ಹೊಗಳಿದರೆ ಅಯ್ಯೋ ನಾನೇನೋ ನನ್ನ ಪಾಡಿಗೆ ನಾನು ಬರೆದಿಕೊಂಡು ಹೋಗುತ್ತಿದ್ದೆ ಯಾರು ಓದಲಿ ಬಿಡಲಿ ಎಂಬ ಭಾವನೆಯಿಂದ ಆದರೆ ಕನ್ನಡಿಗರು ನನ್ನ ಕಥೆಗಳನ್ನು ಮೆಚ್ಚಿ ಓದಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದರು ಆದ್ದರಿಂದ ಈ ಭೂಕರ್ ಪ್ರಶಸ್ತಿಯು ನನಗಷ್ಟೇ ಅಲ್ಲ ಇದು ನಮ್ಮ ಕನ್ನಡ ಭಾಷೆಗೆ ಸಂದ ಗೌರವ ಎಂದು ಎಷ್ಟು ಸರಳವಾಗಿ ಹೃದಯಪೂರ್ವಕವಾಗಿ ಹೇಳಿದರು ಆ ಅವರ ಸರಳತೆಗೆ ಅವರೇ ಸಾಟಿ ಯಾವುದೇ ಬಿಗುಮಾನ ಇಲ್ಲದ ಸರಳ ಸಜ್ಜನರಾದ ಅವರ ವ್ಯಕ್ತಿತ್ವಕ್ಕೆ ನನ್ನದೊಂದು ಸಲಾಂ ಹೇಳಲೇಬೇಕು.

- Advertisement - 

ಶ್ರೀಮತಿ ಭಾನು ಮುಸ್ತಾಕ್ ಅವರ ಸಣ್ಣ ಕಥೆಗಳ ಸಂಕಲನ “ಹಾರ್ಟ್ ಲ್ಯಾಂಪ್” ಎಂಬ ಕೃತಿಗೆ 2025ರ ಅಂತರರಾಷ್ಟ್ರೀಯ “ಬೂಕರ್” ಪುರಸ್ಕಾರವನ್ನು ನೀಡಲಾಗಿದೆ ಇದು ಕನ್ನಡ ಭಾಷೆಯಲ್ಲಿ ಬರೆದಂತಹ ಕೃತಿಯೊಂದಕ್ಕೆ ಸಿಕ್ಕ ಮೊದಲ ಪ್ರಶಸ್ತಿ. ಈ ಪ್ರಶಸ್ತಿಯನ್ನು ಕೃತಿಯ ಇಂಗ್ಲೀಷ್ ಅನುವಾದಕಿ ಶ್ರೀಮತಿ ದೀಪಾ ಬಸ್ತಿ ಅವರೊಂದಿಗೆ ಶ್ರೀಮತಿ ಭಾನು ಮುಷ್ತಾಕ್ ಅವರಿಗೆ ದಿನಾಂಕ 20/05/2025 ರಂದು ಲಂಡನ್ ನಲ್ಲಿ ನೀಡಲಾಗಿದೆ. ಅವರೇ ಹೇಳುವಂತೆ ಕನಿಷ್ಠ ಈ ವರ್ಷದ ಫೆಬ್ರವರಿಯಿಂದ ಇಲ್ಲಿಯವರೆಗೂ 2-3 ದಿನ ಮನೆಯಲ್ಲಿ ಸ್ವಲ್ಪ ಆರಾಮವಾಗಿ ಸಮಯ ಕಳೆಯಲು ಆಗಿಲ್ಲ ಆ ರೀತಿ ಬಿಡುವಿಲ್ಲದಂತೆ ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಹೋಗಿ ಬಂದು ಸಾಕಾಗಿ ಕಾರ್ಯಕ್ರಮಕ್ಕೆ ಕರೆದಾಗ ಕೆಲವೊಮ್ಮೆ ಬರಲಾಗುತ್ತಿಲ್ಲ ಎಂಬ ಸತ್ಯ ಹೇಳಿದರು ಕೆಲವರು ಅರ್ಥ ಮಾಡಿಕೊಳ್ಳುತ್ತಾರೆ ಆದರೆ ಕೆಲವರು ಓಹ್ ಇವರೇನೂ ಕರೆದರೆ ಬರೋದಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ ಎಂಬ ಅವರ ಸದ್ಯದ ಪರಿಸ್ಥಿತಿಗೆ ಕನ್ನಡಿ ಹಿಡಿದರು.

ಭಾನು ಮುಸ್ತಾಕ್ ಮೇಡಂ ಅವರ ಈ ರೀತಿ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ದೆಹಲಿಯಲ್ಲಿ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಯಭಾರಿಯಂತೆ ಇರುವ ನಮ್ಮ ಅಚ್ಚುಮೆಚ್ಚಿನ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರು ದೆಹಲಿ ಕರ್ನಾಟಕ ಸಂಘದಲ್ಲಿ ದಿನಾಂಕ 18-07-2025 ರಂದು ಅವರನ್ನು ಸನ್ಮಾನಿಸಿ ಅಭಿನಂದಿಸಲು ಆಹ್ವಾನಿಸಿದ್ದರು. ಕೇವಲ ಐದು ನಿಮಿಷಕ್ಕೆಂದು ಬಂದಿದ್ದ ಅವರು ಸುಮಾರು ಒಂದುವರೆ ಗಂಟೆಯವರೆಗೂ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಘದ ಸನ್ಮಾನವನ್ನು ಅಭಿನಂದನೆಯನ್ನು ಸ್ವೀಕರಿಸಿ ಅವರ ಬೂಕರ್ ಪ್ರಶಸ್ತಿ ಪಡೆಯುವವರೆಗಿನ ಸುಧೀರ್ಘ ಪಯಣವನ್ನು ಹಂಚಿಕೊಂಡರು.

- Advertisement - 

ಈ ಪ್ರಶಸ್ತಿಯು ಯಾವಾಗಲೂ ಒಂದು ಕಾದಂಬರಿಯಂತಹ ಕೃತಿಗಳಿಗೆ ಕೊಡುತ್ತಾರೆ ನಿಮ್ಮ ಈ ಸಣ್ಣ ಕಥೆಗೆ ಸಿಗುವುದು ಚಾನ್ಸ್ ಕಡಿಮೆ ಎಂದು ಅವರ ಏಜೆಂಟ್ ಪ್ರತಿ ಬಾರಿ ನಿಮಗೆ ಈ ಪ್ರಶಸ್ತಿ ಸಿಗುವ ಲಕ್ಷಣ ಇಲ್ಲ ನೀವು ಯಾವುದಕ್ಕೂ ಜಾಸ್ತಿ ಭರವಸೆ ಇಟ್ಟುಕೊಳ್ಳಬೇಡಿ ಎಂದು ಸಮಾಧಾನ ಮಾಡಲು ಆ ಪದೇಪದೇ ನೆನಪಿಸುತ್ತಿದ್ದುದನ್ನು ಹೇಳಿ ಎಲ್ಲರಿಗೂ ನಗೆ ಬರೆಸಿದರು. ಭಾನು ಮೇಡಂ ಆ ಸನ್ನಿವೇಶದ ಬಗ್ಗೆ ಹೇಳುತ್ತಿರುವಾಗ ಅದು ಒಂಥರಾ ನಕ್ಷತ್ರಕನು ಹರಿಶ್ಚಂದ್ರನಿಗೆ ಪೀಡಿಸಿದಂತಹ ನೆನಪನ್ನು ತರಿಸುವಂತಿತ್ತು.

ಬೆಂಗಳೂರಿನಿಂದ ಲಂಡನ್ ವರೆಗೆ ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನದವರ ಅಜಾಾಗರುಕತೆಯಿಂದ  ಲಗೇಜ್ ಮಿಸ್ ಆಗಿಹೋದದ್ದರಿಂದ ತಮ್ಮ ಹೃದಯ ಚಿಕಿತ್ಸೆಯಲ್ಲಿ ಕೊಟ್ಟಂತಹ ಔಷಧಿ ಮಾತ್ರೆಗಳು ಇಲ್ಲದೆ ಮತ್ತು ಭೂಕರ್ ಪ್ರಶಸ್ತಿ ಸಂದರ್ಭದಲ್ಲಿ ತಾವು ಉಡಬೇಕೆಂದು ತುಂಬಾ ಆಸೆಯಿಂದ ಆರಿಸಿ ತಂದಿದ್ದ ರೇಷ್ಮೆ ಸೀರೆಗಳು ಮತ್ತು ಇನ್ನೂ ಹಲವಾರು ವಸ್ತುಗಳ ಸಮೇತ ಕಳೆದು ಹೋದ ತಮ್ಮ ಸೂಟ್ಕೇಸ್ ಬಗ್ಗೆ ಅದರಿಂದ ಅವರಿಗಾದ ತೊಂದರೆಗಳ ಬಗ್ಗೆ ಮತ್ತು ಮಾತ್ರೆಗಳನ್ನು ಅಲ್ಲಿಯ ಮೆಡಿಕಲ್ ಸ್ಟೋರ್ ನಿಂದ ಖರೀದಿಸಲು ಹೋದರೆ ಅಲ್ಲಿನ ಮೆಡಿಕಲ್ ಸ್ಟೋರ್ ಗಳು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಹಾಗೆಲ್ಲ ಯಾವುದೇ ಔಷಧಿ ಕೊಡುವುದಿಲ್ಲ ಎಂದಾಗ ಡಾ. ಬಳಿ ಹೋಗಲು ಅವರ ಅಪಾಯಿಂಟ್ಮೆಂಟ್ ಸಿಗಲು ಸುಮಾರು ಆರು ತಿಂಗಳವರೆಗೂ ಕಾಯಬೇಕಾಗುತ್ತದೆ ಎಂಬ ವಿಷಯ ತಿಳಿದು ಹತಾಶರಾದಂತಹ ಹಲವು ಸಂಗತಿಗಳನ್ನು ತಿಳಿಸಿದಾಗ ಕಾರ್ಯಕ್ರಮದಲ್ಲಿ ನೆರೆದಿದ್ದ ದೆಹಲಿ ಕನ್ನಡಿಗರು ಮಮ್ಮಲ ಮರುಗಿದರು.

ಶ್ರೀಮತಿ ಭಾನು ಮುಸ್ತಾಕ್ ಮೇಡಂ ಅವರನ್ನು ಹತ್ತಿರದಿಂದ ನೋಡುವಂತಹ ಸೌಭಾಗ್ಯವನ್ನು ಮತ್ತು ಅವರ ಜೊತೆ ಸಂವಾದ ಮಾಡಲು ಅನುವು ಮಾಡಿಕೊಟ್ಟ ದೆಹಲಿ ಕರ್ನಾಟಕ ಸಂಘದ ಜನಪ್ರಿಯ ಅಧ್ಯಕ್ಷರಾದ ಶ್ರೀ ಸಿ.ಎಂ ನಾಗರಾಜ್ ಸಾರ್ ಅವರಿಗೆ ಅನಂತ ಧನ್ಯವಾದಗಳನ್ನು ತಿಳಿಸಲೇಬೇಕು ಏಕೆಂದರೆ ಅಷ್ಟೊಂದು ಅವಿಶ್ರಾಂತ ಸಮಯದಲ್ಲೂ ಅವರನ್ನು ಅಭಿನಂದಿಸಲು ಕರೆದು ನಮಗೆಲ್ಲ ಅವರ ಹತ್ತಿರ ಮುಕ್ತ ಸಂವಾದ ಮಾಡಲು ಅವಕಾಶ ಮಾಡಿಕೊಟ್ಟ ಅಧ್ಯಕ್ಷರಿಗೆ ಈ ರೀತಿ ಧನ್ಯವಾದಗಳು ತಿಳಿಸಲೇಬೇಕು ಅಲ್ಲದೆ ಮೇಡಂ ಅವರ ಪಕ್ಕದಲ್ಲಿಯೇ ಕುಳಿತು ಮಾತಾಡುತ್ತಾ ಇರುವಾಗ ನನ್ನ ಮನಸ್ಸಿನಲ್ಲಿ ಇರುವುದನ್ನು ಓದಿಕೊಂಡವರಂತೆ ದೆಹಲಿ ಕರ್ನಾಟಕ ಸಂಘದ ಉತ್ಸಾಹಿ ಯುವ ನಾಯಕ ಶ್ರೀ ಅರುಣ್ ಚರಾಪ ಅವರು,

ಮೇಡಂ ಇವರು ವೃತ್ತಿಯಲ್ಲಿ ಪೊಲೀಸ್ ಆಗಿದ್ದರು ಬರವಣಿಗೆ ಇವರ ಹವ್ಯಾಸ ಮತ್ತು ಇವರು ತುಂಬಾ ಚೆನ್ನಾಗಿ ಬರೆಯುತ್ತಾರೆ ಎಂದು ನನ್ನ ಬಗ್ಗೆ ಹೇಳಿದ್ದನ್ನು ಕೇಳಿ ನನಗೆ ಎಲ್ಲಿಲ್ಲದ ಸಂತೋಷವಾಯಿತು ಅದಕ್ಕೆ ಮೇಡಮ್ ಅವರು ತುಂಬಾ ಒಳ್ಳೆಯದು ನೋಡಿ ತಮ್ಮ ತಮ್ಮ ಹುದ್ದೆಯಲ್ಲಿನ ಅನುಭವಗಳ ಜೊತೆ ಜೊತೆಗೆ ಬರವಣಿಗೆ ಮಾಡುವುದರಲ್ಲಿ ಒಂದು ಖುಷಿ ಕಾಣಬಹುದು ಮತ್ತು ಸ್ವಂತ ಅನುಭವವಾದ್ದರಿಂದ ಚೆನ್ನಾಗಿ ಬರೆಯಲುಬಹುದು ಎಂದರು.

ಅವರ ಈ ಸಲಹೆಗಾಗಿ ನಾನು ಅರುಣ್ ಚರಾಪ ಅವರಿಗೇನೇ ಕೃತಜ್ಞರಾಗಬೇಕು ಏಕೆಂದರೆ ನಾನು ಹೇಳಲೋ ಬೇಡವೋ ಎಂದು ಮನದಲ್ಲಿಯೇ ಲೆಕ್ಕಾಚಾರ ಹಾಕುತ್ತಿರುವಾಗ  ಸರಿಯಾದ ಸಮಯದಲ್ಲಿ ಮೇಡಂ ಅವರ ಬಳಿ ತಲುಪಿಸಿದ್ದರು ಅದು ನನಗೆ ಸಮಾಧಾನ ತಂದಿತ್ತು ಏಕೆಂದರೆ ಅತ್ತ ಹೇಳಬೇಕೆಂದು ನನಗೆ ಮನಸ್ಸಿದ್ದರೂ ಅವರ ಮುಂದೆ ನಾನು ಒಂಥರಾ ಆನೆಯ ಪಕ್ಕ ಇರುವಂತಹ ಒಂದು ಇರುವೆಯಂತೆ ಇರುವ ನನ್ನ ಬಗ್ಗೆ ಹೇಳಿಕೊಳ್ಳಲು ಚಡಪಡಿಕೆ ಇದ್ದಾಗ ನಮ್ಮ ಮನಸ್ಸನ್ನು ಓದಿದವರಂತೆ ಹೇಳಿದ ಅರುಣ್ ಚರಾಪ ಅವರಿಗೆ ಧನ್ಯವಾದಗಳು ತಿಳಿಸಲೇಬೇಕಾಗುತ್ತದೆ.

ನಮ್ಮ ಕರ್ನಾಟಕ ಸಾಹಿತ್ಯ ಪರಿಷತ್ತು ಈ ಬಾರಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ್ಧರಿಸಿದೆ ಮತ್ತು ಸಮ್ಮೇಳನ ಅಧ್ಯಕ್ಷರನ್ನಾಗಿ ಶ್ರೀಮತಿ ಭಾನು ಮುಸ್ತಾಕ್ ಮೇಡಂ ಅವರನ್ನು ಸರ್ವ ಸಮ್ಮತವಾಗಿ ಆಯ್ಕೆ ಮಾಡಿರುವುದು ತುಂಬಾ ಸೂಕ್ತವಾಗಿದೆ ಆದಷ್ಟು ಬೇಗ ನಮ್ಮ ನಾಡಿಗೆ ಒಂಬತ್ತನೆಯ ಜ್ನಾನಪೀಠ ಪ್ರಶಸ್ತಿಯು ಶ್ರೀಮತಿ ಭಾನು ಮುಸ್ತಾಕ್ ಮೇಡಂ ಮುಖಾಂತರ ದೊರಕಲಿ ಎಂದು ಆಶಿಸುತ್ತೇನೆ.
ಲೇಖನ-ವೆಂಕಟೇಶ ಹೆಚ್, ಚಿತ್ರದುರ್ಗ (ನವದೆಹಲಿ).

 

 

Share This Article
error: Content is protected !!
";