ಬುಕರ್ ಪ್ರಶಸ್ತಿ ಪುರಸ್ಕೃತ ಬಾನುಮುಷ್ತಾಕ್‌ರ ಎದೆಯ ಹಣತೆ. ತೇಜಸ್ವಿ ಅವರ ಮಾಯಾಮೃಗ ನಾಟಕ ಪ್ರದರ್ಶನ ಹಾಸನದಲ್ಲಿ ಜುಲೈ 11ಕ್ಕೆ

News Desk
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂತಾರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನುಮುಷ್ತಾಕ್ ಅವರ ಎದೆಯ ಹಣತೆ ಕಥೆಯನ್ನು ಆಧರಿಸಿದ ನಾಟಕ ಮತ್ತು ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಾಯಾಮೃಗ ನಾಟಕ ಪ್ರದರ್ಶನವನ್ನು ಜುಲೈ 11ರಂದು ಶುಕ್ರವಾರ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಹಾಸನದ ರಂಗಸಿರಿ ಕಲಾ ತಂಡ ಆಯೋಜಿಸಿದೆ.
ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲ ಡಾ.ಎಂ.ಗಣೇಶ್ ಹೆಗ್ಗೋಡು ನಿರ್ದೇಶನ ಮಾಡಿರುವ ಈ ನಾಟಕವನ್ನು ಹೆಗ್ಗೋಡಿನ ಸತ್ಯಶೋಧನ ರಂಗಸಮುದಾಯದ ನೇತೃತ್ವದಲ್ಲಿ ಜನಮನದಾಟ ರಂಗ ತಂಡ ಅಭಿನಯಿಸಲಿದೆ.
 
ಇದೇ ಸಂದರ್ಭದಲ್ಲಿ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನುಮುಷ್ತಾಕ್ ಅವರನ್ನು ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಭಿನಂದಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ರಂಗಸಿರಿ ಗೌರವಾಧ್ಯಕ್ಷ ಶಿವಾನಂದ ತಗಡೂರು ಅವರು ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮವನ್ನು ಶಾಸಕ ಎಚ್.ಪಿ.ಸ್ವರೂಪ್ ಉದ್ಘಾಟಿಸಲಿದ್ದಾರೆ. 
ಜಿಪಂ ಸಿಇಒ ಡಾ.ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು,  ರಂಗಸಿರಿ ಅಧ್ಯಕ್ಷ ಕೆ.ರಂಗಸ್ವಾಮಿ, ಕಾರ್ಯದರ್ಶಿ ಪಿ.ಶಾಡ್ರಾಕ್, ಖಜಾಂಚಿ ಡಿ.ಎಸ್.ಲೋಕೇಶ್ ಮತ್ತಿತರರು ಭಾಗವಹಿಸುವರು. 

Share This Article
error: Content is protected !!
";