ಪುಸ್ತಕ ಓದಿದರೆ ಮನಸ್ಸಿಗೆ ನೆಮ್ಮದಿ- ಬ್ರಹ್ಮನಿಷ್ಟಾನಂದ ಸ್ವಾಮೀಜಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪುಸ್ತಕ ಓದಿದರೆ ಎಷ್ಟೆ ಕಷ್ಟವಿರಲಿ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆಂದು ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಟಾನಂದ ಸ್ವಾಮೀಜಿ ಹೇಳಿದರು.

ಮೆದೇಹಳ್ಳಿ ರಸ್ತೆಯಲ್ಲಿರುವ ರಾಮತೀರ್ಥಾಶ್ರಮ ಕುರಿತು ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್ ರಚಿಸಿರುವ ರಾಮತೀರ್ಥಾಮೃತ ಪುಸ್ತಕವನ್ನು ಗುರುವಾರ ಆಶ್ರಮದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

- Advertisement - 

ಪುಸ್ತಕಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಒಳ್ಳೆಯ ಪುಸ್ತಕಗಳನ್ನು ನೀಡಿ. ತಂದೆ-ತಾಯಿಗಳು ಮಕ್ಕಳಿಗೆ ಸಂಸ್ಕಾರ ಕೊಡುತ್ತಿಲ್ಲ. ವಿದ್ಯಾವಂತರಿಂದಲೆ ಹೆಚ್ಚು ಅನಾಹುತಗಳಾಗುತ್ತಿವೆ. ಹೊಸ ವರ್ಷದಂದು ಕಂಠಪೂರ್ತಿ ಕುಡಿದು, ಕೇಕ್ ಕತ್ತರಿಸಿ ಕೇಕೆ ಹಾಕುವುದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದರು.

ಹಿಂದೂಗಳಿಗೆ ಯುಗಾದಿ ಹೊಸ ವರ್ಷ. ಯಾರು ಜ.೧ ರಂದು ಹೊಸ ವರ್ಷ ಆಚರಿಸುತ್ತಾರೋ ಅಂತಹವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರಬಹುದು.

- Advertisement - 

ರಾಮಾಯಣ, ಮಹಾಭಾರತ, ಉಪನಿಷತ್‌ಗಳನ್ನು ಮಕ್ಕಳಿಂದ ಹಿಡಿದು ದೊಡ್ಡವರತನಕ ಓದಬೇಕು. ಆಗ ಸಾಮಾನ್ಯ ವ್ಯಕ್ತಿಯು ಅಸಮಾನ್ಯನಾಗಬಹುದು. ರಾತ್ರಿ ಹನ್ನೆರಡು ಗಂಟೆ ನಂತರವೂ ಮೊಬೈಲ್ ನೋಡುತ್ತಿದ್ದರೆ. ಮೆದುಳು ಕ್ಯಾನ್ಸರ್ ಬರಬಹುದು. ಭಕ್ತನಿಂದ ಭಗವಂತನೆ, ವಿನಃ ಭಗವಂತನಿಂದ ಭಕ್ತನಲ್ಲ ಎಂದು ತಿಳಿಸಿದರು.

ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್‌ರವರು ರಚಿಸಿರುವ ರಾಮತೀರ್ಥಾಮೃತ ಪುಸ್ತಕದಲ್ಲಿ ಒಳ್ಳೆಯ ವಿಚಾರಗಳಿದೆ. ಎಲ್ಲರೂ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ನುಡಿದರು.

ಜಲ ಸಂರಕ್ಷಣಾ ತಜ್ಞ ಹಾಗೂ ರಾಮತೀರ್ಥಾಶ್ರಮದ ಟ್ರಸ್ಟ್ ಕಮಿಟಿ ಸದಸ್ಯ ಎನ್.ಜೆ.ದೇವರಾಜರೆಡ್ಡಿ ಮಾತನಾಡಿ ೨೦ ನೇ ವರ್ಷದವರಿದ್ದಾಗಲೆ ಪ್ರಹ್ಲಾದ ಗುರುಗಳು ಕುಟುಂಬವನ್ನು ತೊರೆದು ಇಲ್ಲಿಗೆ ಬಂದು ಆಶ್ರಮವನ್ನು ಕಟ್ಟಿ ಈ ಮಟ್ಟಕ್ಕೆ ಬೆಳೆಸಿದ್ದಾರೆ. ಸರ್ಕಾರದ ಯಾವ ನೆರವಿಗೂ ಆಸೆ ಪಟ್ಟವರಲ್ಲ. ಇದೊಂದು ಅವಧೂತರ ಮಠ. ಕರ್ನಾಟಕವಲ್ಲದೆ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿರುವ ಭಕ್ತರೆ ಆಶ್ರಮಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್‌ರವರು ರಾಮತೀರ್ಥಾಶ್ರಮಕ್ಕೆ ಒಮ್ಮೆ ಭೇಟಿ ಇಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಒಳ್ಳೆಯ ವಿಚಾರವುಳ್ಳ ರಾಮತೀರ್ಥಾಮೃತ ಪುಸ್ತಕವನ್ನು ರಚಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಗುರುವಿನ ಮಹಿಮೆಯನ್ನು ಜಗತ್ತಿಗೆ ಸಾರಿದ ರಾಜಯೋಗಿ ರಾಮತೀರ್ಥರು. ಇದು ಜಾತಿ ಪೀಠವಲ್ಲ. ಯೋಗ ಪೀಠ. ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ತೆರೆದು ಹಣ ಗಳಿಸುವ ದಂಧೆಯಿಲ್ಲ. ಭಕ್ತರನ್ನು ಭಗವಂತನೆಡೆಗೆ ಕರೆದೊಯ್ಯುವ ಶಾಂತಾರಾಮತೀರ್ಥ, ಚೂಡ ಮಾತಾಜಿಯವರ ಪುಣ್ಯಭೂಮಿ ಎಂದು ಬಣ್ಣಿಸಿದರು.

ಪುಸ್ತಕದ ಕೃತಿಕಾರ ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್ ಮಾತನಾಡಿ ರಾಮತೀರ್ಥಾಶ್ರಮದ ಬಗ್ಗೆ ಪುಸ್ತಕ ಬರೆಯುತ್ತೇನೆಂದು ಏಳೇಳು ಜನ್ಮದಲ್ಲಿಯೂ ಅಂದುಕೊಂಡಿರಲಿಲ್ಲ. ಬಂಗಾರದ ಹೊಳಪನ್ನು ಹೊರಗೆ ತೆಗೆಯಬೇಕಾದರೆ ಉಜ್ಜಬೇಕು. ರಾಮತೀರ್ಥಾಶ್ರಮ ಅವಧೂತ ಪರಂಪರೆಗೆ ಸೇರಿದ್ದು, ಜಗಳೂರಿನಲ್ಲಿಯೂ ಅವಧೂತರು ಪಿತಿಪಿತಿ ಎನ್ನುತ್ತಿದ್ದಾರೆ. ಆದರೆ ಈ ಆಶ್ರಮ ವಿಭಿನ್ನವಾಗಿದೆ.

ಆಧುನಿಕ ಧಾವಂತದ ಬದುಕಿನಲ್ಲಿ ಎಲ್ಲರೂ ಶಾಂತಿಗಾಗಿ ಅಪಹಪಿಸುತ್ತಿರುವ ಇಂದಿನ ದಿನಮಾನಗಳಲ್ಲಿ ರಾಮತೀರ್ಥಾಶ್ರಮದ ಪ್ರಹ್ಲಾದ ಗುರುಗಳು ಸದಾ ಸಮಾಧಾನದಿಂದ ಇರುತ್ತಾರೆ. ರಾಮತೀರ್ಥರು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಲಿಲ್ಲ. ಶಿಷ್ಯರಿಗೂ ತಪಸ್ಸು ಮಾಡಲು ಹೇಳಿಲ್ಲ ಎಂದರು.

ರಾಮತೀರ್ಥಾಶ್ರಮದ ಪ್ರಹ್ಲಾದ ಗುರುಗಳು, ಧರ್ಮದರ್ಶಿ ಸತ್ಯನಾರಾಯಣರಾವ್, ಕಾಮದೇನು ಪುಸ್ತಕ ಭವನ ಬೆಂಗಳೂರಿನ ಎಸ್.ಎಂ.ದೀಪಕ್ ಇವರುಗಳು ವೇದಿಕೆಯಲ್ಲಿದ್ದರು.

ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ, ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಶಿವಲಿಂಗಪ್ಪ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಹಾಗೂ ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್‌ರವರ ಕುಟುಂಬದವರು, ಶಿಷ್ಯ ವೃಂದದವರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಲೋಕಾರ್ಪಣೆಯಲ್ಲಿ ಭಾಗವಹಿಸಿದ್ದರು. ನಾರಾಯಣಪ್ಪ ಎಸ್.ಪ್ರಾರ್ಥಿಸಿದರು. ಸಿ.ಯು.ಗಿರೀಶ್ ವಂದಿಸಿದರು.

 

Share This Article
error: Content is protected !!
";