ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆಯ ತೇರಿಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮರಥೋತ್ಸವದ ಅಂಗವಾಗಿ ದೇಗುಲವನ್ನು ವಿಶೇಷ ಪುಷ್ಪಾಲಂಕಾರಗಳಿಂದ ಅಲಂಕರಿಸಿ, ಭಕ್ತರಿಗೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 11.30ರಿಂದ 11.47 ಗಂಟೆಯೊಳಗೆ ಅಭಿಜಿತ್ ಲಗ್ನದಲ್ಲಿ ಭಗವಂತನ ಅನುಗ್ರಹದಿಂದ ಬ್ರಹ್ಮರಥೋತ್ಸವ ನೆರವೇರಿತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಶ್ರದ್ಧಾ ಭಕ್ತಿಯಿಂದ ಸ್ವಾಮಿಯ ರಥಕ್ಕೆ ಹೂವು, ಹಣ್ಣು, ದವನ ಅರ್ಪಿಸಿ ಭಕ್ತಿ ಭಾವ ಮೆರೆದರು. ಮುಂಜಾನೆಯಿಂದಲೇ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿವಿಧ ಸಂಘಟನೆಗಳ ವತಿಯಿಂದ ಪಾನಕ ಮತ್ತು ಮಜ್ಜಿಗೆ ವಿತರಣೆ ನಡೆಯಿತು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಸುಪ್ರಭಾತ ಸೇವೆ, ತೊಮಾಲೆ ಸೇವೆ, ನವಗ್ರಹ ಪೂಜೆ ಹಾಗೂ ರಥದ ಮುಂಭಾಗದಲ್ಲಿ ಹೋಮಗಳನ್ನು ನೆರವೇರಿಸಲಾಯಿತು. ವಿಶೇಷ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ಸ್ವಾಮಿಗೆ ಆಗಮಿಕರ ಮಂತ್ರಪಠಣಗಳೊಂದಿಗೆ ಭಕ್ತಜನ ಸಾಗರದ “ಗೋವಿಂದ ಗೋವಿಂದ” ಜಯಘೋಷ ಮೊಳಗಿತು.
ಜಾತ್ರೆಯ ಪ್ರಯುಕ್ತ ದೇವಾಲಯದ ಜೀರ್ಣೋದ್ಧಾರ ಸಮಿತಿಯಿಂದ ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಪಾನಕ, ಕೋಸಂಬರಿ, ನೀರು ಹಾಗೂ ಮಜ್ಜಿಗೆ ವಿತರಿಸಲಾಯಿತು. ತೂಬಗೆರೆ ರಾಶಿ ರಾಪು ಅಭಿಮಾನಿ ಸಂಘದ ವತಿಯಿಂದಲೂ ಮಜ್ಜಿಗೆ ಹಾಗೂ ಕೋಸಂಬರಿ ವಿತರಣೆ ನಡೆಯಿತು.
ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ದೇವಾಲಯವನ್ನು ಮಧ್ಯಾಹ್ನ 1.00 ಗಂಟೆಗೆ ಮುಚ್ಚಲಾಯಿತು. ಗ್ರಹಣ ದೋಷ ನಿವಾರಣೆ ಬಳಿಕ ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯ ನೆರವೇರಿಸಿ, ಸಂಜೆ 7.30ರಿಂದ ಭಕ್ತರಿಗೆ ಮತ್ತೆ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ರಾತ್ರಿ 8.00 ಗಂಟೆಗೆ ವರ್ಣರಂಜಿತ ಬಾಣಬಿರುಸುಗಳ ಪ್ರದರ್ಶನದೊಂದಿಗೆ ಸ್ವಾಮಿಗೆ ಸೂರ್ಯಮಂಡಲೋತ್ಸವ ನಡೆಯಲಿದೆ.
ಬ್ರಹ್ಮರಥೋತ್ಸವದಲ್ಲಿ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿಶಾಮಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ಉಪ ತಹಶೀಲ್ದಾರ್ ಯಶೋಧಮ್ಮ, ಘಾಟಿ ಪ್ರಾಧಿಕಾರ ಸದಸ್ಯ ರಂಗಪ್ಪ, ಕೆಪಿಸಿಸಿ ಸದಸ್ಯ ಮುನಿರಾಜು, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ರವಿ ಸಿದ್ದಪ್ಪ, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ನಾಗರಾಜು, ವೆಂಕಟೇಶ್ ಬಾಬು, ಕನಕದಾಸ, ಯುವ ಮುಖಂಡ ಉದಯ ಆರಾಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

