ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
20 ವರ್ಷ ಮೇಲ್ಪಟ್ಟ ವಾಹನಗಳಿಗೆ ಬ್ರೇಕ್ ಕಡ್ಡಾಯವಾಗಿ ತಡೆಯೊಡ್ಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಗಣಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಅದಿರು ಹಾಗೂ ಖನಿಜಗಳನ್ನು ಸಾಗಣೆ ಮಾಡುವ ವಾಹನಗಳನ್ನು ತಪಾಸಣೆ ಮಾಡಬೇಕು. 20 ವರ್ಷ ಮೇಲ್ಪಟ್ಟ ವಾಹನಗಳ ಎಫ್.ಸಿ ನವೀಕರಣಗೊಳಿಸಬಾರದು, ಅಂತಹ ವಾಹನಗಳು ಕಾರ್ಯಾಚರಣೆ ಮಾಡುತ್ತಿದ್ದಲ್ಲಿ ಅವುಗಳ ಸಂಚಾರಕ್ಕೆ ತಡೆ ಒಡ್ಡಬೇಕು.
ಅನುಮತಿಸಿದ ತೂಕಕ್ಕಿಂತ ಹೆಚ್ಚಿನ ಅದಿರು ಸಾಗಾಟ ಮಾಡುವ ವಾಹನಗಳನ್ನು ತಡೆದು, ದಂಡ ವಿಧಿಸಬೇಕು. ಅದಿರನ್ನು ವಶಪಡಿಸಿಕೊಂಡು ವಾಹನ ಜಪ್ತಿ ಮಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ 335ಕ್ಕೂ ಹೆಚ್ಚು ಅದಿರು ಸಾಗಾಣಿಕೆಯ ಭಾರಿ ವಾಹನಗಳು ಇದ್ದು, ಇದರಲ್ಲಿ 18 ವಾಹನಗಳು 20 ವರ್ಷ ಪೂರೈಸಿವೆ. 268 ವಾಹನಗಳು 15 ವರ್ಷ ಪೂರೈಸಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೆ ಸಿಂಘೆ ಸಭೆಯಲ್ಲಿ ಮಾಹಿತಿ ನೀಡದರು.
ಕ್ರಷರ್ಗಳ ನಿಯಮ ಪಾಲನೆ ಮಾಡಲಿ:
ಕಲ್ಲು ಪುಡಿ ಮಾಡುವ ಘಟಕ (ಕ್ರಷರ್)ಗಳು ಪಾಲನೆ ಮಾಡಬೇಕಾದ ನಿಯಮಗಳ ಬಗ್ಗೆ ಕರ್ನಾಟಕ ಕಲ್ಲು ಪುಡಿ ಮಾಡುವ ಘಟಗಳ ನಿಯಂತ್ರಣ ಅಧಿನಿಯ –2011 ಹಾಗೂ ತಿದ್ದುಪಡಿ ಕಾಯ್ದೆ 2013ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ಹಲವು ಕ್ರಷರ್ಗಳಲ್ಲಿ ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.
ಕಲ್ಲು ದೂಳು, ಬೆಳೆಗಳ ಮೇಲೆ ಬಿದ್ದು, ಇಳುವರಿ ಕಡಿಮೆಯಾಗುತ್ತಿದೆ ಎಂದು ರೈತರು ದೂರು ನೀಡಿದ್ದಾರೆ. ಇದರ ಜೊತೆಗೆ ಕ್ರಷರ್ಗಳ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಜನರು ಶ್ವಾಸಕೋಶ ಸಂಬಂಧಿಸಿದ ಖಾಯಿಲೆಗಳಿಗೆ ತುತ್ತಾಗುತಿದ್ದಾರೆ.
ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯಚರಣೆ ನಡೆಸುತ್ತಿರುವ ಎಲ್ಲ 29 ಕ್ರಷರ್ಗಳ ಪರಿಶೀಲನೆ ಮಾಡಿ, ಪರಿಸರ ಮಾಲಿನ್ಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಸಭೆಯಲ್ಲಿ ಹೇಳಿದರು.
ಇದೆ ವೇಳೆ, ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ–1994ರ ನಿಯಮ 32ರ ಅನ್ವಯ ಅಲಂಕಾರಿಕ ಶಿಲೆ, ಕಟ್ಟಡ ಕಲ್ಲು, ವೈಟ್ ಕ್ವಾಟ್ಜ್ಗಳ ಗಣಿಗಾರಿಕೆಗೆ ಮಂಜೂರಾತಿ ನೀಡುವ ಕುರಿತು ಹಾಗೂ ಮರಳು ಗಣಿ ಗುತ್ತಿಗೆ ಮಂಜೂರಾತಿ ಕೋರಿ ಸ್ವೀಕೃತವಾದ ಅರ್ಜಿಗಳ ಕುರಿತು ಚರ್ಚಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.