ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಜಾಲತಾಣಗಳಲ್ಲಿ ಅಪರಾಧ ಘಟನೆಗಳ ವಿಡಿಯೋ, ಫೋಟೋಗಳನ್ನ ಪ್ರಕಟಿಸುವ ಮೊದಲು ಪೊಲೀಸರ ಗಮನಕ್ಕೆ ತಂದರೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ವಿಡಿಯೋ, ಫೋಟೋಗಳನ್ನ ಪ್ರಕಟಿಸುವ ಅಧಿಕಾರವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಸಾರ್ವಜನಿಕ ವಲಯದಲ್ಲಿ ನಡೆಯುವ ಅಪರಾಧ ಕೃತ್ಯಗಳು, ರೋಡ್ ರೇಜ್ ಮತ್ತಿತರ ಸಂದರ್ಭಗಳಲ್ಲಿ ಆ ವಿಡಿಯೋ, ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅಪರಾಧ ಪ್ರಕರಣಗಳನ್ನು ವಿಡಿಯೋ ಪ್ರಕಟಿಸಿದವರನ್ನು ಪತ್ತೆ ಮಾಡಿ, ಅವರಿಂದ ದೂರು ಪಡೆದು, ತನಿಖೆ ನಡೆಸುವುದು ವಿಳಂಬವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಪೊಲೀಸರ ಗಮನಕ್ಕೆ ತಂದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತ್ವರಿತಗತಿಯಲ್ಲಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಆಯುಕ್ತರು ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವಿಡಿಯೋ, ಫೋಟೋಗಳು ವಾಸ್ತವ ಹಾಗೂ ಸತ್ಯದಿಂದ ಕೂಡಿರಬೇಕು. ಇಲ್ಲವಾದರೆ ವಿಡಿಯೋಗಳು ಕೆಲವು ಬಾರಿ ಇದು ಭಾಷೆ, ಧರ್ಮ, ಪ್ರಾಂತ್ಯದ ವಿಚಾರದಲ್ಲಿ ಸಮಸ್ಯೆಗೆ ಕಾರಣವಾಗಬಹುದು.
ಆದ್ದರಿಂದ ಇಂತಹ ಘಟನಾವಳಿಗಳ ಫೋಟೋ, ವಿಡಿಯೋಗಳನ್ನ ಪೊಲೀಸರ ಗಮನಕ್ಕೆ ತರಬೇಕು. ಇದಾದ ಬಳಿಕ ಅಥವಾ ಪೊಲೀಸರ ಸ್ಪಂದನೆಯ ಕುರಿತು ತೃಪ್ತಿಯಿಲ್ಲ ಎಂದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅಧಿಕಾರ, ಸ್ವಾತಂತ್ರ್ಯ ಸಾರ್ವಜನಿಕರಿಗಿದೆ ಎಂದು ಆಯುಕ್ತ ದಯಾನಂದ್ ತಿಳಿಸಿದರು.