ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಾನು ಆಡಿದ ಮಾತಿಗೆ ಕ್ಷಮೆ ಕೇಳುವುದಿಲ್ಲ. ಯಡಿಯೂರಪ್ಪ ವಿರುದ್ಧ ನಾನು ಮಾತಾಡಿಲ್ಲ. ಹೆಸರು ಕೆಡಿಸುತ್ತಿರುವವರೇ ಬಿಎಸ್‌ವೈ ಅವರ ಮಕ್ಕಳು. ನಾನು ಕೆಐಡಿಬಿ ಭೂಮಿ, ಪತ್ರಕರ್ತರ ಸೈಟು, ಟೋಲ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಮತ್ತು ರಾಘವೇಂದ್ರ ಅವರ ವಿರುದ್ಧ ಆರೋಪ ಮಾಡಿದ್ದೆ. ಅದನ್ನು ಗಮನಿಸದೆ ಮಾಜಿ ಶಾಸಕರಾದ ಹಾಲಪ್ಪ, ರುದ್ರೇಗೌಡರು ಸುದ್ದಿಗೋಷ್ಠಿ ನಡೆಸಿ ನಾನು ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ನನ್ನ ಪ್ರಶ್ನೆಯನ್ನೇ ಅವರಿಬ ಬರೂ ಅರ್ಥೈಸಿಕೊಳ್ಳದೆ ಕ್ಷಮೆ ಕೇಳಬೇಕು ಎನ್ನುತ್ತಿರುವುದು ದಿಕ್ಕುತಪ್ಪಿಸುವ ಯತ್ನವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಪ್ರೆಸ್ ಟ್ರಸ್ಟಿನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವತ್ತೂ ಯಡಿಯೂರಪ್ಪನವರ ಪರವಾಗಿ ನಿಲುವು ತಾಳದ ಹರತಾಳು ಹಾಲಪ್ಪನವರು ನಾನು ಕ್ಷಮೆ ಕೇಳಬೇಕು ಎಂದಿದ್ದಾರೆ.ಈ ಹಿಂದೆ ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದಾಗ, ನಾನು ಮತ್ತು ರೇಣುಕಾಚಾರ್ಯ ಬಿಟ್ಟರೆ ಯಾವ ನಾಯಕರು ಮಾತನಾಡಲಿಲ್ಲ. ಆಗ ಹಾಲಪ್ಪ ಎಲ್ಲಿದ್ದರು ಎಂದು ತಿರುಗೇಟು ನೀಡಿದರು.
ರಾಘವೇಂದ್ರ ಮತ್ತು ವಿಜೇಂದ್ರ ಅವರ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಸಮಂಜಸವಾದ ಉತ್ತರ ನೀಡಲಿಲ್ಲ. ಹಾಲಪ್ಪನ ಬಂಗಾರಪ್ಪನವರನ್ನ ಬಿಟ್ಟು ಬಂದು ಬಂಗಾರಪ್ಪನವರ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಸರಿ. ಒಪ್ಪಿಕೊಳ್ಳುವೆ. ಬಂಗಾರಪ್ಪ ಬಗ್ಗೆ ಅವರು ಮಾತನಾಡಿಲ್ಲ. ಆದರೆ ಆಗ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ವಿರುದ್ಧ ಮಾತನಾಡಿಲ್ಲವೇ? ಹಾಗೆ ನಾನು ಸಹ ರಾಘವೇಂದ್ರ ಮತ್ತು ವಿಜೇಂದ್ರ ಬಗ್ಗೆ ಮಾತನಾಡಿದ್ದೇನೆಂದು ಸಮರ್ಥಿಸಿಕೊಂಡರು.