ಬೌದ್ಧ ಧಮ್ಮ ಮತ್ತು ಮಾಂಸಾಹಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೌದ್ಧ ಧಮ್ಮ ಮತ್ತು ಮಾಂಸಾಹಾರ……
ಸಸ್ಯಾಹಾರ ಮತ್ತು ಮಾಂಸಾಹಾರ ಸಂಸ್ಕೃತಿಯ ಭೇದಗಳನ್ನು ಗಹನವಾಗಿ ಚರ್ಚಿಸುವ ಭಾರತೀಯರಾದ ನಾವು, ತಿನ್ನುವ ಆಹಾರದ ಬಗ್ಗೆ ಬೇರಾವುದೇ ದೇಶದ ಜನರಿಗಿಂತಲೂ ಹೆಚ್ಚು ತಲೆ ಕೆಡಿಸಿಕೊಂಡಿದ್ದೇವೆ. ಇದಕ್ಕೆ ಬಹಳ ಮುಖ್ಯ ಕಾರಣ ಆಹಾರ ಸಂಸ್ಕೃತಿಯನ್ನು ಧರ್ಮದ ಚೌಕಟ್ಟಿನಲ್ಲಿರಿಸಿ ನೋಡುವುದೇ ಆಗಿರುತ್ತದೆ. ಭಾರತದ ಆದಾಗ್ಯೂ ಕರ್ನಾಟಕದ ಮಟ್ಟಿಗೆ ಮಾಂಸಾಹಾರದ ಅಭ್ಯಾಸಗಳನ್ನು ಕುರಿತಂತೆ ಬುದ್ಧನ ತತ್ವಗಳು, ಬಸವ- ಅಲ್ಲಮ- ಕಾಳವ್ವೆಯ ವಚನಗಳು, ದಾರ್ಶನಿಕ ಕವಿ ಕುವೆಂಪು ಮಾಂಸಾಹಾರ ಕುರಿತು ವ್ಯಕ್ತಪಡಿಸಿರುವ ಆಲೋಚನೆಗಳು, ಬಹುಜನರ ಆಹಾರ ಸಂಸ್ಕೃತಿ ಇವಿಷ್ಟನ್ನೂ ಮರುನಿರೂಪಿಸಿಕೊಳ್ಳುವ ಅಗತ್ಯವಿದೆ.

ಸಸ್ಯಾಹಾರವೇ ಅಹಿಂಸಾ ಮೌಲ್ಯವೆಂದು ಹಾಗೂ ಗೋಮಾಂಸ ಭಕ್ಷಣೆಯ ವಿಸರ್ಜನೆಯೇ ನಾಗರಿಕರ ಶ್ರೇಷ್ಠ ಕರ್ತವ್ಯವೆಂದು ಫ್ಯಾಸಿಸ್ಟ್ ಶಕ್ತಿಗಳು ಬಹುಜನರ ಮಾಂಸಾಹಾರ  ಸಂಸ್ಕೃತಿಯ ಮೇಲೆ ನಡೆಸುತ್ತಿರುವ ಹಲ್ಲೆಗಳ ವಿರುದ್ಧ ಪ್ರತಿರೋಧ ಒಡ್ಡಲು ಈ ಮರುನಿರೂಪಣೆ ಅತ್ಯಂತ ಅವಶ್ಯಕವಾದುದಾಗಿದೆ.

- Advertisement - 

ಮನುವಾದಿ ಧಾರ್ಮಿಕ ಶಕ್ತಿಗಳು ಗೋವನ್ನು ಪವಿತ್ರೀಕರಿಸುವ ಮೂಲಕ ಪೌಷ್ಟಿಕ ದನದ ಮಾಂಸ ತಿಂದು ಬದುಕಬಹುದಾದ ಬಹುಜನರ ಆಹಾರದ ಹಕ್ಕನ್ನೇ ನಾಶ ಮಾಡಲು ಸದಾಕಾಲವೂ ಹವಣಿಸುತ್ತಿವೆ. ಪ್ರಭುತ್ವವವೂ ಸಹ ಇಂತಹ ಫ್ಯಾಸಿಸಮ್ಮನ್ನು ಪೋಷಿಸುವ ಹವಣಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದನ್ನು ನಾವು ಎಚ್ಚರದಿಂದ ನೋಡಬೇಕಾಗುತ್ತದೆ. ಮಾಂಸಾಹಾರ ಸೇವಿಸುವವರು ಹುಸಿ ಗೋಸಂರಕ್ಷಕ ಪಡೆಗಳ ಗುಮಾನಿಯ ನೆರಳಿನಲ್ಲಿ, ಅವರು ತಂದೊಡ್ಡುವ ವಿಪತ್ತುಗಳ ಆತಂಕದಲ್ಲಿ , ದನದ ಬಾಡು ಭಕ್ಷಕರೆಂಬ ಕೀಳರಿಮೆ ಮನೋಭಾವದಲ್ಲಿ ಬದುಕಬೇಕಾದ ಪರಿಸ್ಥಿತಿಯನ್ನು ನಾವು  ನೋಡುತ್ತಿದ್ದೇವೆ.

ಮಧ್ಯಮ ವರ್ಗದ ಹುಡುಗರು ಕೂಡಾ ಫ್ಯಾಸಿಸ್ಟ್ ಶಕ್ತಿಗಳ ಬಾಲಂಗೋಚಿಗಳಾಗಿ ಜಮಾವಣೆಯಾಗಿದ್ದಾರೆ. ಹೀಗೆ ಜಮಾವಣೆಯಾದ ಪುಂಡರು ಬಹುಜನರ ಶತ್ರುಗಳಾಗಿ  ಬೆಳೆಯುತ್ತಿದ್ದಾರೆ. ಇವರಿಗೆ Face book, WhatsApp, Instagram, Twitter ಅಂತಹ ಗೂಗಲ್ ನೆಟ್ವರ್ಕ್ ಮಾಧ್ಯಮಗಳು ಫ್ಯಾಸಿಸಂ ಬೆಳೆಯಲು ವೇದಿಕೆ ಸೃಷ್ಟಿಸಿಕೊಟ್ಟಿವೆ. ದುಡಿಯುವ ಜನರಲ್ಲಿ ಫ್ಯಾಸಿಸ್ಟ್  ಮನಸ್ಥಿತಿಯನ್ನು ಬೆಳೆಸಲು ಬೇಕಾದ public opinions and consent ಉತ್ಪಾದಿಸಲಾಗುತ್ತಿದೆ. ಇಂತಹ ಅಪಾಯಕಾರಿ ಸಂಗತಿಗಳನ್ನು ಕುರಿತು  ಜನಸಾಮಾನ್ಯರಿಗೆ ತಿಳಿ ಹೇಳಬೇಕಾದ   ಚಳವಳಿಗಳು, ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಬಸವಳಿದು ಏದುಸಿರು ಬಿಡುತ್ತಿರುವಂತೆ ಕಾಣಿಸುತ್ತಿದ್ದಾರೆ.

- Advertisement - 

ನಮ್ಮ ದೇಶದಲ್ಲಿ ಪ್ರತಿಶತ 80 ರಷ್ಟು ಜನ ಮಾಂಸಾಹಾರ ಸೇವಿಸುತ್ತಾರೆ. ಅವರು ತಿನ್ನುವ ಮಾಂಸಾಹಾರವನ್ನು ಇತರೆಯವರು ತಿನ್ನಬೇಕೆಂದು ಎಲ್ಲಿಯೂ ಒತ್ತಾಯ ಹೇರುವುದಿಲ್ಲ. ಆದರೆ ಕೇವಲ 4 % ಇರುವ ಸೆಕ್ಟೇರಿಯನ್ ಪುರೋಹಿತ ವರ್ಗದ ಜನರು ತಾವು ತಿನ್ನದ ಮಾಂಸಾಹಾರವನ್ನು ಇತರೆಯವರು ಕೂಡಾ ತಿನ್ನಬಾರದೆಂದು ಸಾಂಸ್ಕೃತಿಕ ಬಲಾತ್ಕಾರಕ್ಕೆ ಗುರಿಪಡಿಸುತ್ತಿದ್ದಾರೆ. ಪುರೋಹಿತರು ನಡೆಸಿದ ಆಹಾರ ಸಂಸ್ಕೃತಿಯ ಮೇಲಿನ ಹಲ್ಲೆಯನ್ನು ಬಹು ಹಿಂದೆಯೇ ಗಮನಿಸಿರುವ ಕವಿ ಕನಕದಾಸರು,

ಹಸುವಿನ ಮಾಂಸದೊಳ್ ಉತ್ಪತ್ತಿ ಕ್ಷೀರವ ವಸುಧೆಯೋಳ್ ಭೂಸುರರುಣಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಪುರೋಹಿತರು ತಮ್ಮ ಜಾತಿಯ ಸಾಮಾಜಿಕ ಅಧಿಕಾರವನ್ನು ಸ್ಥಾಪಿಸಲು ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾಂಸಾಹಾರದ ನಿಷೇಧವನ್ನು ಸಾರ್ವಜನಿಕಗೊಳಿಸಿದ್ದಾರೆ. ಮಾಂಸಾಹಾರ ತಿನ್ನುವ ಜನರೇ ಪುರೋಹಿತರ ಸಾಂಸ್ಕೃತಿಕ ಹೇರಿಕೆಯನ್ನು ಒಪ್ಪಿಕೊಂಡಿದ್ದು ಮಾಂಸಾಹಾರದ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದಾರೆ. ಮಾತ್ರವಲ್ಲದೆ ಕೆಲವರು ನೇಮ- ತಿಥಿ- ದೇವರುಗಳ ಹೆಸರಿನಲ್ಲಿ ಹಾಗೂ ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಮುಂತಾದ ದಿನಗಳಲ್ಲಿ ಮಾಂ‌ಸಾಹಾರ ತಿನ್ನುವುದು ಧಾರ್ಮಿಕ ಅಪರಾಧ ಎಂಬ ಮನೋಭಾವ ಬೆಳೆಸಿಕೊಂಡಿದ್ದಾರೆ.

ಬುದ್ಧಗುರು, ಬಸವಣ್ಣ, ಅಂಬೇಡ್ಕರ್, ಕುವೆಂಪು ಮುಂತಾದ ದಾರ್ಶನಿಕರು ಯಾವತ್ತೂ ಮಾಂಸಾಹಾರ ಸಂಸ್ಕೃತಿಯನ್ನಾಗಲೀ ಮಾಂಸಾಹಾರಿಗಳನ್ನಾಗಲೀ ಕೀಳುಗಂಡಿಲ್ಲ. ಹಾಗೆಂದು ಅವರು ಮಾಂಸಾಹಾರವನ್ನು promote ಮಾಡಿಲ್ಲ. ಬುದ್ಧಗುರು ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವ ಮೂಢಾಚಾರಗಳನ್ನು ವಿರೋಧಿಸುತ್ತಾರೆ. ಬಸವಣ್ಣನವರು ಲಿಂಗಾರ್ಪಿತವಾದದ್ದೆಲ್ಲವೂ ಮಹಾಪ್ರಸಾದ ಎನ್ನುತ್ತಾರೆ. ಮಾಂಸಾಹಾರ ಪ್ರಿಯರಾದ ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ ಒಬ್ಬ ಬೇಟೆಗಾರ. ವಿಶ್ವಜ್ಞಾನಿ ಅಂಬೇಡ್ಕರ್ ಕೂಡಾ ಮಾಂಸಾಹಾರಿಯಾಗಿದ್ದರು.

ಜೈನ ಧರ್ಮ ಮತ್ತು ಬೌದ್ಧ ಧರ್ಮದ ಅಹಿಂಸಾವಾದದ ಪ್ರಭಾವದ ಪರಿಣಾಮವಾಗಿ ತಮ್ಮ ಸಾಮಾಜಿಕ ಅಧಿಕಾರ ಎಲ್ಲಿ ಸಡಿಲವಾಗುತ್ತದೋ ಎಂದು ಕಂಗೆಟ್ಟ ಬ್ರಾಹ್ಮಣರು ಮಾಂಸಾಹಾರವನ್ನು ತ್ಯಜಿಸಿ ಶಾಖಾಹಾರಿಗಳಾಗಿ ಬದಲಾದರು‌. ಇದಕ್ಕೂ ಮೊದಲು ಬ್ರಾಹ್ಮಣರು ಮಾಂಸಾಹಾರಿಗಳೇ ಆಗಿ ಯಜ್ಞಕ್ಕೆ ಬಲಿಕೊಟ್ಟ ಪ್ರಾಣಿಯ ಮಾಂಸವನ್ನು ತಿನ್ನುತ್ತಿದ್ದರು‌. ಶ್ರಾದ್ಧಾದಿ ಕಾರ್ಯಕ್ರಮಗಳಲ್ಲಿ ಗೋಮಾಂಸ ಭಕ್ಷಣೆ ಮಾಡುತ್ತಿದ್ದರು.

ಮನುಸ್ಮೃತಿಯಲ್ಲಿಯೂ ಬ್ರಾಹ್ಮಣರ ಮಾಂಸಾಹಾರ ಸೇವನೆ ಕುರಿತಾದ ಉಲ್ಲೇಖಗಳಿವೆ. ಜೈನರಿಗಿಂತಲೂ ಹೆಚ್ಚಾಗಿ ಬೌದ್ಧರ ಮೇಲೆ ಹತೋಟಿ ಸಾಧಿಸುವುದು ವೈದಿಕಾರ್ಯರ ಮುಖ್ಯ ಧ್ಯೇಯವಾಗಿತ್ತು. ಯಾಕೆಂದರೆ ಬೌದ್ಧಧಮ್ಮ ಇಡೀ ದೇಶದಲ್ಲಿ‌ವ್ಯಾಪಕವಾಗಿ ಹರಡಿಕೊಂಡಿತ್ತು. ಬೌದ್ಧರು ಸತ್ತ ಪ್ರಾಣಿಗಳ ಕಳೇಬರಗಳನ್ನು ಮಾತ್ರ ತಿನ್ನುತ್ತಿದ್ದರು. ಆಗ ವೈದಿಕಾರ್ಯರು ಗೋವಧೆ ಸೇರಿದಂತೆ ಎಲ್ಲಾ ಪ್ರಾಣಿಗಳ ವಧೆ ಮತ್ತು ಭಕ್ಷಣೆಯನ್ನು ನಿಷೇಧಿಸಿದರು.

ಮನುಷ್ಯನು ಅರಣ್ಯವಾಸಿಯಾಗಿ ಆದಿಮ ಬುಡಕಟ್ಟು ಹಂತದಲ್ಲಿದ್ದಾಗ ಗೆಡ್ಡೆ ಗೆಣಸು ನಾರುಬೇರು ಸೊಪ್ಪಸದೆಗಳ ಸಸ್ಯಾಹಾರ ಸೇರಿದಂತೆ ಪ್ರಾಣಿ ಪಕ್ಷಿ ಕ್ರಿಮಿಕೀಟಗಳನ್ನು ಬೇಟೆಯಾಡಿ ತಿನ್ನುವ ಮಾಂಸಾಹಾರ ಸಂಸ್ಕೃತಿ ಕೂಡಾ ಮೇಳೈಸಿಕೊಂಡಿತ್ತು. ಹಾಗಾಗಿ ಮನುಷ್ಯನು ಮೂಲತಃ ಮಿಶ್ರಾಹಾರಿ ಸಂಸ್ಕೃತಿಯ ಪ್ರಾಣಿಯಾಗಿರುತ್ತಾನೆ. ವೈವಿಧ್ಯಮಯ ಸಾಮಾಜಿಕ ಮತ್ತು ಧಾರ್ಮಿಕ ಜೀವನ ವಿಧಾನಗಳನ್ನು ರೂಪಿಸಿಕೊಂಡ ಬಳಿಕ ಮಾನವರು ತಮ್ಮದೇ ಬಗೆಯ ಆಹಾರ ಸಂಹಿತೆಗಳನ್ನು ಕೂಡಾ ನಿರ್ಮಿಸಿಕೊಂಡಿರುವ ಬಗೆಯನ್ನು ನಾಗರಿಕತೆಯ ವಿಕಾಸದ ಹಂತಗಳಲ್ಲಿ ನಾವು ಗುರುತಿಸುತ್ತೇವೆ. ಒಂದು ಕಾಲದಲ್ಲಿ ಯಜ್ಞ ಯಾಗಾದಿಗಳ ಹೆಸರಿನಲ್ಲಿ ಗೋವು ಮತ್ತು ಕುದುರೆಗಳನ್ನು ಬಲಿಕೊಟ್ಟು ಅವುಗಳ ಮಾಂಸವನ್ನು ಸೇವಿಸುತ್ತಿದ್ದ ಪಶುಪಾಲಕ ಆರ್ಯರು ಕ್ರಮೇಣವಾಗಿ ಗೋವನ್ನು ಪವಿತ್ರೀಕರಿಸುವ ಜೊತೆಯಲ್ಲಿ ಗೋಮಾಂಸ ಸೇವನೆಯನ್ನು ಬಿಟ್ಟುಬಿಟ್ಟರು.

ಶಾಸನಗಳನ್ನು ಬರೆಯಿಸುವಾಗಲೂ ಶಾಸನ ಪಾಠದಲ್ಲಿ, “ಈ ಶಾಸನವನ್ನು ಉಲ್ಲಂಘಿಸಿದವರು ಕಾಶಿಯಲ್ಲಿ ಗೋಹತ್ಯೆ ಮಾಡಿದ ಪಾಪಕ್ಕೆ ಗುರಿಯಾಗುವರು” ಎಂಬ ಶಾಪಾಶಯ ವಾಕ್ಯವನ್ನು ಸೇರಿಸುವ ಮಟ್ಟಿಗೆ ಅತ್ಯಂತ ತೀವ್ರವಾಗಿ ಗೋವಿನ ಪಾವಿತ್ರ್ಯತೆಯನ್ನು ಪ್ರತಿಪಾದಿಸಲಾಯಿತು. ಪವಿತ್ರ ಗೋವಿನ ದೇಹದಲ್ಲಿ ಮುನ್ನೂರ ಮೂವತ್ತು ಕೋಟಿ ದೇವರುಗಳು ನೆಲೆಸಿದ್ದಾರೆಂದು ಹಾಗೂ ಸತ್ತ ವ್ಯಕ್ತಿಯ ಹೆಸರಿನಲ್ಲಿ ಬ್ರಾಹ್ಮಣರಿಗೆ ಗೋದಾನ ನೀಡಿದ ಪಕ್ಷದಲ್ಲಿ ಸತ್ತವನು ಮುಕ್ತಿ ಹೊಂದುತ್ತಾನೆಂದು ಮಿಥ್ಯಾ ಪುರಾಣಗಳನ್ನು ಹೊಸೆಯಲಾಯಿತು. 

ಅಹಿಂಸೆಯ ಶ್ರೇಷ್ಠ ಮೌಲ್ಯ ಮತ್ತು ಸರಳ ಜೀವನ ವಿಧಾನವನ್ನು ಅನುಸರಿಸಲು ತಿಳಿಸಿಕೊಟ್ಟ ಬೌದ್ಧ ಧರ್ಮದಲ್ಲಿ ಮಾಂಸಾಹಾರದ ಪ್ರಶ್ನೆ ತುಂಬಾ ಸಂಕೀರ್ಣವಾಗಿದೆ. ಅಹಿಂಸಾ ಜೀವನ ವಿಧಾನಗಳನ್ನು ರೂಪಿಸಿಕೊಳ್ಳಲು ಒತ್ತು ನೀಡುವ ಬೌದ್ಧ ಧರ್ಮವು ಆಹಾರದ ಹೊರತಾಗಿ ಯಜ್ಞ ಯಾಗಾದಿಗಳಂತಹ ಧಾರ್ಮಿಕ ಕಂದಾಚಾರಗಳ ಹೆಸರಿನಲ್ಲಿ ಪ್ರಾಣಿಗಳ ಹತ್ಯೆಯನ್ನು ಒಪ್ಪುವುದಿಲ್ಲ. ವಿಶ್ವದಾದ್ಯಂತ ಅನುಸರಿಸಲಾಗುತ್ತಿರುವ ಬಹುತೇಕ ಎಲ್ಲಾ ಬೌದ್ಧ ಪಂಥಗಳು ಮಾಂಸಾಹಾರವನ್ನು ನಿಷೇಧಿಸಿರುವುದಿಲ್ಲ.

ಕೆಲವೊಂದು ನಿರ್ದಿಷ್ಟ ದಿನಗಳಲ್ಲಿ ಮಾಂಸಾಹಾರವನ್ನು ಸೇವಿಸದಿರಬಹುದು ಅಷ್ಟೇ. ಬೌದ್ಧ ಧರ್ಮವು ಒತ್ತು ನೀಡಿರುವ ಅಹಿಂಸೆಯ ತತ್ವದ ದೃಷ್ಟಿಯಿಂದ ಪ್ರಾಣಿಹತ್ಯೆ ಮತ್ತು ಮಾಂಸಾಹಾರ ಇರುವುದಿಲ್ಲ ಎಂಬ ತಪ್ಪು ತಿಳಿವಳಿಕೆ ಅನೇಕರಲ್ಲಿದೆ. ಅಹಿಂಸಾ ತತ್ವವು ಮುಖ್ಯವಾಗಿ ಯಾವುದೇ ಪ್ರಾಣಿಯು ಈ ಜೀವಮಂಡಲದಲ್ಲಿ ತನ್ನ ಸಂತತಿಯನ್ನು ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಪ್ರಕೃತಿ ದತ್ತವಾದ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. “ಯಾವುದೇ ಒಂದು ಜೀವಿಗೆ ಜೀವ ಪೋಷಣೆ ಮಾಡುವ ಸಾಮರ್ಥ್ಯ ನಿಮಗಿಲ್ಲವೆಂದ ಮೇಲೆ ಆ ಜೀವಿಯ ಜೀವಕ್ಕೆ ಹಾನಿ ಮಾಡುವ ಹಕ್ಕು ನಿಮಗಿರವುದಿಲ್ಲ” ಎಂದು ಹೇಳಿದ್ದಾನೆ ಬುದ್ಧಗುರು. ದೇವರ ಕಂದಾಚಾರದ ಹೆಸರಿನಲ್ಲಿ ಕೆಲವರು ಮೇಕೆಯನ್ನು ಬಲಿಕೊಡಲು ಮುಂದಾದುದನ್ನು ಕಂಡ ಬುದ್ಧಗುರು, “ನೀವು ಕಂದಾಚಾರಗಳ ಹೆಸರಿನಲ್ಲಿ ಮೇಕೆಯನ್ನು ದೇವರಿಗೆ ಬಲಿ ನೀಡುವುದಾದರೆ ನನ್ನನ್ನೇ ಬಲಿಕೊಟ್ಟು ಮೇಕೆಯನ್ನು ಉಳಿಸಿರಿ” ಎಂದು ಕೇಳಿಕೊಳ್ಳುತ್ತಾನೆ.

ಮೇಕೆಯ ಜೀವದ ರಕ್ಷಣೆಗಾಗಿ ತನ್ನ ಜೀವವನ್ನು ಕೊಡಲು ಮುಂದಾಗುತ್ತಾನೆ.  ಬುದ್ಧಗುರುವಿನ ಈ ಸಂದೇಶದ ಅನುಸಾರ, ಅನೇಕ ಬೌದ್ಧರು ಧಾರ್ಮಿಕ ಮೂಢನಂಬಿಕೆ ಮತ್ತು ಕಂದಾಚಾರಗಳ ಭಾಗವಾಗಿ ಪ್ರಾಣಿಬಲಿ ನೀಡಿ ಮಾಂಸಾಹಾರ ಸೇವಿಸುವುದನ್ನು ನಿಷೇಧಿಸಿದ್ದಾರೆ. ಬೌದ್ಧ ಸನ್ಯಾಸಿಗಳಿಗೆ ಮಾಂಸಾಹಾರಗಳು ಭಿಕ್ಷೆಯಾಗಿ ದೊರಕುವುದು ಸಾಧ್ಯವಾಗದಿದ್ದಾಗ, ಅವರಿಗೆ ಹೊಟೆಲುಗಳಿಂದ ತರಿಸಿಕೊಟ್ಟ ಮಾಂಸಾಹಾರವನ್ನು ಸೇವಿಸಲು ಬೌದ್ಧಧರ್ಮೀಯ ಸನ್ಯಾಸಿಗಳು ಆಕ್ಷೇಪಿಸುವುದಿಲ್ಲ.

ಥೇರಾವಾದಿ ಪಂಥದ ಬೌದ್ಧ ​​ಸನ್ಯಾಸಿಗಳು ದಾನವಾಗಿ ಬಂದ ಮಾಂಸವನ್ನು ತಿನ್ನುತ್ತಾರೆ.  ಮಹಾಯಾನ ಬೌದ್ಧ ಪಂಥವು ಹೆಚ್ಚು ಪ್ರಚಲಿತದಲ್ಲಿರುವ ಚೀನಾ, ಕೊರಿಯಾ, ವಿಯೆಟ್ನಾಂ ಮುಂತಾದ ದೇಶಗಳ ಬೌದ್ಧ ಧರ್ಮೀಯ ಸನ್ಯಾಸಿಗಳು ಮಾಂಸವನ್ನು ತಿನ್ನದೆ ಇನ್ನುಳಿದ ಪಂಥಗಳವರು ಮಾಂಸಾಹಾರಿಗಳಾಗಿದ್ದಾರೆ. ಟಿಬೆಟ್ಟಿನ ಬೌದ್ಧರು ಹೆಚ್ಚಾಗಿ ಸಸ್ಯಾಹಾರವನ್ನು ರೂಢಿಸಿಕೊಂಡಿದ್ದರೂ ಅವರಿಗೆ ಮಾಂಸಾಹಾರ ನಿಷಿದ್ಧವಲ್ಲ.

ಬುದ್ಧಗುರುವು ಜನರಿಂದ ದಾನವಾಗಿ ಬರುವ “ಶುದ್ಧ” ಮಾಂಸವನ್ನು ಸೇವಿಸುತ್ತಿದ್ದುದರಿಂದಾಗಿ ಬಹುತೇಕ ಎಲ್ಲಾ ಪಂಥಗಳ ಬೌದ್ಧ ಸನ್ಯಾಸಿಗಳು ದಾನವಾಗಿ ಬರುವ ಮಾಂಸಾಹಾರ ಸೇವಿಸಲು ಆದ್ಯತೆ ನೀಡಿದ್ದಾರೆ. ಆಗ್ನೇಯ ಏಷ್ಯಾದ ಥೇರಾವಾದ ಪಂಥೀಯ ಬೌದ್ಧ ಸನ್ಯಾಸಿಗಳು ಮೂರು ಬಗೆಯ “ಶುದ್ಧ ಮಾಂಸ” ನಿಯಮಗಳನ್ನು ಅನುಸರಿಸುತ್ತಾರೆ. ಕೊಲ್ಲುವುದನ್ನು ನೇರವಾಗಿ ನೋಡಿರಬಾರದು, ಭಿಕ್ಖುಗಳ ಆಹಾರಕ್ಕಾಗಿಯೇ ಕೊಂದುತಂದ ಆಹಾರ ಎಂದು ಕೇಳಬಾರದು ಅಥವಾ ಭಿಕ್ಖುಗಳಿಗಾಗಿಯೇ  ಕೊಲ್ಲಲ್ಪಟ್ಟಿರುವ ಪ್ರಾಣಿಯ ಮಾಂಸ ಎಂದು ಶಂಕಿಸಬಾರದು. ಇಂತಹ ಮಾಂಸವನ್ನು ದಾನವಾಗಿ ಸ್ವೀಕರಿಸಿ ಶುದ್ಧವೆಂದು ಪರಿಗಣಿಸಿ ತಿನ್ನುತ್ತಾರೆ.

ಬೌದ್ಧ ಧರ್ಮವನ್ನು ಅನುಸರಿಸುವ ಜನಸಾಮಾನ್ಯರು ಮಾಂಸವನ್ನು ತಿನ್ನುತ್ತಾರೆ. ಪೂರ್ವ ಏಷ್ಯಾದ ಚೀನಾ, ಕೊರಿಯಾ, ವಿಯೆಟ್ನಾಂ ಮುಂತಾದ ದೇಶಗಳಲ್ಲಿ ಬೌದ್ಧ ಧರ್ಮಾವಲಂಬಿಗಳು ವಿವಿಧ ಬಗೆಯ ಮಾಂಸಾಹಾರ ಸೇವಿಸುತ್ತಾರೆ. ಟಿಬೆಟ್ಟಿನಲ್ಲಿ ಪ್ರಚಲಿತದಲ್ಲಿರುವ ಬೌದ್ಧ ವಜ್ರಯಾನ ಪಂಥದ ಧರ್ಮಾವಲಂಬಿಗಳಿಗೆ ಕಠಿಣ ಹವಾಮಾನದ ಕಾರಣದಿಂದಾಗಿ ಮಾಂಸ ಸೇವನೆಯು ಅಗತ್ಯವಾಗಿದೆ. ಬೌದ್ಧ ಮಹಾಯಾನ ಪಂಥವು ಅಹಿಂಸೆ ಕರುಣೆ ಸಹಾನುಭೂತಿ ಮೌಲ್ಯಗಳನ್ನು ಸ್ವಲ್ಪಮಟ್ಟಿಗೆ ಬಿಗಿಯಾಗಿ ಪಾಲಿಸುವುದರಿಂದಾಗಿ ಹೆಚ್ಚಾಗಿ ಸಸ್ಯಾಹಾರಿ ನಿಯಮಗಳನ್ನು ಅಳವಡಿಸಿಕೊಂಡಿದ್ದಾರೆ.

ಗೌತಮ ಬುದ್ಧನ ಕಾಲದಲ್ಲಿ, ಬೌದ್ಧ ಧರ್ಮದ ಅನುಯಾಯಿಗಳು ಮಾಂಸಾಹಾರ ಸಂಸ್ಕೃತಿಯನ್ನು ವೈಯಕ್ತಿಕ ಆಯ್ಕೆ ಮತ್ತು ಅಭಿರುಚಿಗೆ ತಕ್ಕಂತೆ ಅಳವಡಿಸಿಕೊಂಡಿದ್ದರು. ಬೌದ್ಧ ಧರ್ಮೀಯರಲ್ಲಿ ಮಾಂಸಾಹಾರ ಸಂಸ್ಕೃತಿ ಇತ್ತೆಂಬ ಮಾಹಿತಿಯನ್ನು ಕ್ರಿ.ಶ. 629 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಚೀನಾದ ಬೌದ್ಧ ಯಾತ್ರಿಕ ಹ್ಯೂಯೆನ್ ತ್ಸಾಂಗ್‌ದಾಖಲಿಸಿದ್ದಾನೆ. ಡಾ.ಅಂಬೇಡ್ಕರ್‌ಅವರು ಬೌದ್ಧ ಧರ್ಮದ ಅನುಯಾಯಿಗಳು ಮಾಂಸಾಹಾರ ಸೇವಿಸುತ್ತಿದ್ದ ಮಾಹಿತಿಯನ್ನು ಪ್ರಸ್ತಾಪಿಸಿದ್ದಾರೆ. ಅಂಬೇಡ್ಕರ್ ನೀಡಿರುವ ಮಾಹಿತಿಯ ಪ್ರಕಾರ, ಬುದ್ಧಗುರುವು ಭಿಕ್ಖುಗಳಿಗೆ, “ನಿಮಗೋಸ್ಕರ ಎಂದೇ ಕೊಲ್ಲಲ್ಪಟ್ಟ ಮತ್ತು ಹಾಗೆ ಕೊಲ್ಲುವುದನ್ನು ನೀವು ನೋಡಿದ ಯಾವುದೇ ಪ್ರಾಣಿಗಳನ್ನು ನೀವು ತಿನ್ನುವ ಹಾಗಿಲ್ಲ” ಎಂದು ಹೇಳಿದ್ದನು.

ಅಂದರೆ ಪ್ರಾಣಿಗಳ ಹತ್ಯೆಯನ್ನು ಭಿಕ್ಖುಗಳು ನೋಡಿಲ್ಲದ, ಅವುಗಳ ಹತ್ಯೆಯ ಬಗ್ಗೆ ಕೇಳದಿರದ ಮತ್ತು ತಮಗೋಸ್ಕರವೇ ಅವುಗಳನ್ನು ಹತ್ಯೆಗೈಯಲಾಗಿದೆ ಎಂದು ಭಿಕ್ಖುಗಳು ಅನುಮಾನಪಡದಿರದ ಹೀಗೆ ಮೂರು ನಿಬಂಧನೆಗಳ ಮೇಲೆ “ಶುದ್ಧ ಮಾಂಸ” ಸೇವನೆಯ ನಿಯಮ ರೂಪಿಸಿದನು. ಇಷ್ಟಲ್ಲದೆ ಇನ್ನೂ ಎರಡು ಬಗೆಯ ಮಾಂಸವನ್ನು ಸೇವಿಸಲು ಸೂಚಿಸಿದ. ಅವುಗಳೆಂದರೆ, ಸ್ವಾಭಾವಿಕ ಸಾವಿಗೀಡಾದ ಪ್ರಾಣಿಗಳ ಮಾಂಸ, ಪಕ್ಷಿ ಮತ್ತು ಪ್ರಾಣಿಗಳಿಂದ ಬೇಟೆಯಾಡಲ್ಪಟ್ಟ ಮಾಂಸ. ಇಂತಹ ಐದು ಬಗೆಯ ಮಾಂಸವನ್ನು ಬೌದ್ಧರು ತಮ್ಮ ವೈಯಕ್ತಿಕ ಆಯ್ಕೆ ಮತ್ತು ಅಭಿರುಚಿಗೆ ಅನುಸಾರವಾಗಿ ಸೇವಿಸಬಹುದು ಎಂದು ವಿಧಿಸಲಾಯಿತು.

ಮೂಲತಃ ಪಶುಪಾಲನಾ ಸಂಸ್ಕೃತಿಯ ಆರ್ಯರು ಗಿಣ್ಣಾಲು, ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇಂತಹ ಗೋಜನ್ಯ ಪದಾರ್ಥಗಳನ್ನು ಯಥೇಚ್ಛವಾಗಿಯೇ ಸೇವಿಸುತ್ತಿದ್ದರು, ಈಗಲೂ ಸೇವಿಸುತ್ತಿದ್ದಾರೆ. ಪೌರೋಹಿತ್ಯ, ಪೂಜೆ ಪುನಸ್ಕಾರ, ಮದುವೆ ಅಪರಕರ್ಮ ನಿರ್ವಹಿಸುವ ವೈದಿಕರು ಇವುಗಳನ್ನು ಜನಸಾಮಾನ್ಯರಿಂದ ದಾನರೂಪದಲ್ಲಿ ಹಾಗೂ ದೇವರಿಗೆ ಅರ್ಪಿಸುವ ಅಭಿಷೇಕ ನೈವೇದ್ಯದ ಸೇವೆಯ ಹೆಸರಿನಲ್ಲಿ ಪಡೆದು ಪೊಗದಸ್ತಾಗಿ ಸೇವಿಸುತ್ತಾರೆ.  ವೈಜ್ಞಾನಿಕವಾಗಿ ಹೇಳುವುದಾದರೆ ಅವರು ಪಡೆಯುವ ಈ ಎಲ್ಲಾ ಗೋಜನ್ಯ- ಮಹಿಷಜನ್ಯ ಹಾಲುತ್ಪನ್ನಗಳು ಪ್ರಾಣಿಗಳ ರಕ್ತ ಮತ್ತು ಮಾಂಸಖಂಡಗಳಿಂದಲೇ ಬಂದವುಗಳಾಗಿರುತ್ತವೆ. ಹೀಗಾಗಿ ಪರೋಕ್ಷವಾಗಿ ಇದು ದ್ರವರೂಪದಲ್ಲಿ ಮಾಂಸಾಹಾರ ಸೇವನೆಯೇ ಆಗಿರುತ್ತದೆ.

ಟಿ.ಪಿ.ಕೈಲಾಸಂ ಅವರು ಹಸುವಿನ ಹಾಲನ್ನು ತಮ್ಮ ನಾಟಕವೊಂದರಲ್ಲಿ ಲಿಕ್ವಿಡ್ ಬೀಫ್ಎಂದು ಕರೆದಿದ್ದಾರೆ. “ಹಸುವಿನ ಮಾಂಸದೊಳ್ ಉತ್ಪತ್ತಿ  ವಸುಧೆಯೋಳಗೆ ಭುಸುರರುಣಲಿಲ್ಲವೆ ?” ಎಂದು ಕನಕದಾಸರು ಪ್ರಶ್ನಿಸಿದ್ದರೆ, “ಮೃಗಗಳ ಮೈಯಲ್ಲಿ ಪುಟ್ಟಲು ಕಸ್ತೂರಿ ತೆಗೆದು ಪೂಸುವರು ದ್ವಿಜರೆಲ್ಲರೂ ಬಗೆಯಿಂದ ನಾರಾಯಣನ್ಯಾವ ಕುಲವಯ್ಯ” ಎಂದು ಹರಿದಾಸರು ಪ್ರಶ್ನಿಸಿದ್ದಾರೆ. ಹುಲಿ ನೈಸರ್ಗಿಕವಾಗಿ ಮಾಂಸಾಹಾರಿ. ಹಸು ನೈಸರ್ಗಿಕವಾಗಿ ಸಸ್ಯಾಹಾರಿ. ಮನುಷ್ಯ, ನೈಸರ್ಗಿಕವಾಗಿ ಮಿಶ್ರಾಹಾರಿ. ಆದರೆ ಕೆಲವು ಮನುಷ್ಯರು ತಮ್ಮದೇ ಧಾರ್ಮಿಕ ಮೌಲ್ಯಗಳಿಗೆ ಬದ್ಧರಾಗಿ ಸಸ್ಯಾಹಾರವನ್ನು ಕೃತಕವಾಗಿ ಹೇರಿಕೊಂಡು ಇತರೆ ಜನರ ಮೇಲೆಯೂ ಹೇರಲು ಪ್ರಯತ್ನಿಸುತ್ತಿದ್ದಾರೆ.

ಬ್ರಾಹ್ಮಣರು ಸೇರಿದಂತೆ ಎಲ್ಲಾ ಜಾತಿಗಳ ಸಸ್ಯಾಹಾರಿಗಳು ಸಸ್ಯಗಳ ಪ್ರಾಣವ ಕೊಂದೇ ಉಣ್ಣುವುದು. ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿರುವಂತೆ—-

ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿಧಿಯಯ್ಯಾ ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ, ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು”.

ಬಲದ ಕೈಯಲಿ ಕತ್ತಿ / ಎಡದ ಕೈಯಲಿ ಮಾಂಸದ ಮಡಕೆ” ಎಂಬ ಬಸವಣ್ಣನವರ ವಚನ, “ಮಾಂಸ ಮದ್ಯಾದಿಗಳ ಸೇವಿಸುವುದ ಬಿಟ್ಟೆವೆಂಬಣ್ಣಗಳೇ ನೀವು ಕೇಳಿರೇ ಮಾಂಸವಲ್ಲವೇ ಸಂಸಾರ ಸಂಘ” ಎಂಬ ಅಲ್ಲಮಪ್ರಭುವಿನ ವಚನ,  “ಕುರಿಕೋಳಿ ಕಿರುಮೀನ ತಿಂಬುವವರ ಕುಲಜ ಕುಲಜರೆಂಬರು/ ಶಿವಗೆ ಪಂಚಾಮೃತ ಕರೆವ ಪಶುವ ತಿಂಬುವವರೆಂತು ಕೀಳು?” ಎಂದು ಪ್ರಶ್ನಿಸಿದ ಕಾಳವ್ವೆಯ ವಚನ ಮುಂತಾದ ಅನೇಕ ವಚನಗಳು ಬಸವಣ್ಣನೂ ಸೇರಿದಂತೆ ಯಾವ ವಚನಕಾರರೂ ಮಾಂಸಾಹಾರ ಸಂಸ್ಕೃತಿಯನ್ನು ವರ್ಜಿಸಿರಲಿಲ್ಲ ಎಂಬುದನ್ನು ತೋರಿಸುತ್ತವೆ. “ಬಲದ ಕೈಯಲಿ ಕತ್ತಿ/ ಎಡದ ಕೈಯಲ್ಲಿ ಮಾಂಸದ ಮಡಕೆ/ ಬಾಯಲ್ಲಿ ಸುರೆಯ ಗಡಿಗೆ/ ಕೊರಳಲಿ ರುದ್ರಾಕ್ಷಿ ಇರಲು/ ಅವರನ್ನು ಲಿಂಗನೆಂಬೆ/ ಕೂಡಲಸಂಗಮನ ಮುಖಲಿಂಗಿಗಳೆಂಬೆ” ಎಂಬ ಬಸವಣ್ಣನವರ ವಚನ ಯಾವ ಅರ್ಥ ಹೇಳುತ್ತದೆ ? ಏನು ತಿನ್ನುತ್ತಿದ್ದಾರೆ ಎಂಬುದೇ ಮುಖ್ಯ ಪ್ರಶ್ನೆ ಮಾಡಿಕೊಂಡು ಜನರನ್ನು ಹತ್ಯೆಮಾಡುತ್ತಿರುವ ನಮ್ಮ ದೇಶದಲ್ಲಿ ಬುದ್ಧ-ಬಸವ-ಮಹಾವೀರ ಮುಂತಾದವರು ಏನು ತಿನ್ನುತ್ತಿದ್ದರೆಂಬುದೂ ಸಹ ಅವರು ಬೋಧಿಸಿದ ತತ್ವ ಆದರ್ಶಗಳಷ್ಟೇ ಮುಖ್ಯವಾಗಿದೆ.

ಸಕಲ ಜೀವರಾಶಿಗಳಲ್ಲೂ ಜೀವವಿದೆ. ಸಸ್ಯಗಳಿಗೂ ಜೀವವಿದೆಎಂದು ಜೀವವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ನಿರೂಪಿಸಿದ್ದಾರೆ. ಜೀವನ್ ಭದ್ರಾಣಿ ಪಶ್ಯಂತಿಎಂಬಂತೆ ಪಶುವಿನ ಕಳೇಬರವನ್ನು ತಿನ್ನುವುದು ಅಹಿಂಸೆಯ ಉದ್ಧಷ್ಟಿತ ಮಾದರಿ. ಬುದ್ಧಗುರು ಈ ದಾರಿಯ ಪಥಿಕ. ಬುದ್ಧಾನುಯಾಯಿಗಳು ಜೀವಂತ ಪ್ರಾಣಿಗಳನ್ನು ಕೊಂದು ತಿಂಬುವವರಲ್ಲ. ವಿಸರ್ಜಿತ ದೇಹಗಳ ಕಳೇಬರಗಳನ್ನು ತಿನ್ನುವವರಾಗಿದ್ದರು. ಗೋವು- ಕುದುರೆ ಮುಂತಾದ ಜೀವಂತ ಪ್ರಾಣಿಗಳನ್ನು ಯಜ್ಞಯಾಗಗಳ ಹೆಸರಿನಲ್ಲಿ ಮತ್ತು ಮಾಂಸಾಹಾರ ಸೇವನೆ ಹೆಸರಿನಲ್ಲಿ ಹೇಗೆಲ್ಲಾ ತಿನ್ನಬಹುದೆಂದು ಕಲಿಸಿಕೊಟ್ಟವರೇ ವೈದಿಕಾರ್ಯರು ಅರ್ಥಾತ್ ಬ್ರಾಹ್ಮಣರು.

ದಯವಿರಬೇಕು ಸಕಲ ಪ್ರಾಣಿಗಳಲ್ಲಿ ದಯವೇ ಧರ್ಮದ ಮೂಲವಯ್ಯ”, ಎಂದು ದಯೆಯ ಮಹತ್ವವನ್ನು ವಿಶ್ವಕ್ಕೇ ಸಾರಿದ ಬಸವಣ್ಣನವರು ಮಾಂಸಾಹಾರ ಸೇವಿಸುವವರಿಗೂ ಲಿಂಗ ಧಾರಣೆ ಮಾಡಿಸಿ ಲಿಂಗಾಯತ ಧರ್ಮವನ್ನು ಉದ್ಧರಿಸಿದವರು. ಲಿಂಗಾಯತ ಎಂಬ ಸ್ವತಂತ್ರ ಧರ್ಮವನ್ನು ಜಾತಿಯಾಗಿ ಕುಗ್ಗಿಸಿ ಸಾಂಸ್ಥೀಕರಣಗೊಳಿಸಿದವರು ಇಂದು ವೈದಿಕಶಾಹಿಯ ಪ್ರಭಾವಕ್ಕೆ ಒಳಗಾಗಿ ಲಿಂಗಿಬ್ರಾಹ್ಮಣರೆನ್ನಿಸಿಕೊಂಡು ಸಸ್ಯಾಹಾರಿಗಳಾಗಿರುವುದನ್ನು ಯಾರೂ ಅಲ್ಲಗಳೆಯಲಾರರು. ಅಹಿಂಸೆಯ ಪರಮಮೂರ್ತಿಯಾದ ಬುದ್ಧಗುರುವೇ ಮಾಂಸಾಹಾರಿಯಾಗಿದ್ದರೆಂದ ಮೇಲೆ ಬುದ್ಧನಂತೆಯೇ ಮತ್ತೋರ್ವ ಪರಮ ಅಹಿಂಸಾಮೂರ್ತಿಯಾದ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತವು ಮಾಂಸಾಹಾರಕ್ಕೆ ವಿರುದ್ಧವಾಗಿತ್ತೆಂದು ಹೇಳಲು ಸಾಧ್ಯವಿಲ್ಲ. 

ಸಸ್ಯಗಳಿಗೂ ಜೀವವಿದೆ ಎಂಬುದನ್ನು ವಿಜ್ಞಾನಿ ಸರ್.ಜಗದೀಶ್ ಚಂದ್ರ ಬೋಸ್ ತೋರಿಸಿಕೊಟ್ಟಿದ್ದಾರೆ. ಮಾಂಸಾಹಾರಿಗಳನ್ನು ಹೀಗಳೆಯುವ ಜನ‌, ಜೀವ ಇರುವ ಸಸ್ಯಾಹಾರವನ್ನು ತ್ಯಜಿಸಲು ಸಾಧ್ಯವೇನು? ಬಸವಣ್ಣನವರು “ಸಕಲ ಚರಾಚರ ಜೀವಿಗಳು” ಎಂಬ ಮಾತಿನ ಮೂಲಕ‌‌ಚರಎಂದರೆ ಚಲಿಸುವವುಗಳಿಗೆ ಜೀವ ಇರುವಂತೆಯೇ ಅಚರಎಂದರೆ ಚಲಿಸದವುಗಳಿಗೂ ಜೀವವಿದೆ ಎಂದು ಗುರುತಿಸುತ್ತಾರೆ. ಹಾಗಾಗಿ ಸಕಲ ಚರಾಚರ ಜೀವಿಗಳಿಗೂ ದಯೆ ಇರಬೇಕೆಂದು ಭಿನ್ನವಿಸುತ್ತಾರೆ. ಬಸವಣ್ಣನ ದೃಷ್ಟಿಯಲ್ಲಿ ಚಲಿಸುವ(ಚರ) ಮನುಷ್ಯನಿಗೆ ಜೀವವಿರುವಂತೆ ಚಲಿಸದಿರುವ(ಅಚರ) ಬೆಟ್ಟಕ್ಕೂ ಜೀವವಿದೆ.

ಸಸ್ಯಾಹಾರವನ್ನು ಮಾತ್ರ ಅಹಿಂಸೆ ಎಂದು ಸಮರ್ಥಿಸುವ ಜನ ಬೆಟ್ಟಗುಡ್ಡಗಳನ್ನು ಕಡಿಯುವ ಹಿಂಸೆಯನ್ನು ಹೇಗೆ ತಾನೆ ಸಮರ್ಥಿಸುತ್ತಾರೆ? ದಯೆ -ಅಹಿಂಸೆ ಎಂಬ ಶಬ್ದಗಳಿಗೆ ಕೊಲ್ಲದಿರುವಿಕೆ ಎಂಬ ತಲೆಕೆಟ್ಟ ಅರ್ಥ ಹೇಳುವವರು ತಮ್ಮ ಮನೆಯಲ್ಲಿ ಇಲಿ ಜಿರಲೆ ಸೊಳ್ಳೆ ತಿಗಣೆ, ಬೆಳೆಗಳ ಕ್ರಿಮಿಕೀಟ ಮುಂತಾದವುಗಳನ್ನು ಏನು ಮಾಡುತ್ತಾರೆ? ಸಸ್ಯಾಹಾರಿ ಮತ್ತು ಮಾಂಸಾಹಾರಿ ಎಂಬ ಭೇದ ಮಾನವನಿಗಿರುವ ಭ್ರಮೆ. ಎರಡೂ ಜೀವಿಗಳಿಗೆ ಅಗತ್ಯವಾಗಿ ಬೇಕಾಗಿರುವ ಆಹಾರವಷ್ಟೆ. ಒಂದು ಜೀವಿಯ ಭದ್ರತೆಗೆ ಇನ್ನೊಂದು ಜೀವಿಯೇ ಆಹಾರ. ಇದು ಪರಿಸರದ ನಿಯಮ.

ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ವಚನಕಾರ್ತಿ ಕಾಳವ್ವೆ ತನ್ನ ವಚನದಲ್ಲಿ ಹಾಗೂ ಜೈನಕವಿ ಬ್ರಹ್ಮಶಿವ, “ಸಮಯ ಪರೀಕ್ಷೆ” ಎಂಬ ತನ್ನ ಕೃತಿಯಲ್ಲಿ, ವಿಪ್ರರು ಸೇವಿಸುತ್ತಿದ್ದ ಗೋಮಾಂಸ ಕುರಿತು ಗೋವು ಪವಿತ್ರ ಎಂದು ಜೀವಭೇದದ ಮಾತನಾಡುವವರ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.

ಕುರಿಕೋಳಿ ಕಿರುಮೀನು ತಿಂಬವರಿಗೆಲ್ಲಾ ಕುಲಜ ಕುಲಜರೆಂದೆಂಬರು ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು
ಸಿದ್ದಲಿಕೆಯ ತುಪ್ಪವನು ಸಗ್ಗಳೆಯ ನೀರನು ಶುದ್ದವೆಂದು ಕುಡಿವ ಬುದ್ದಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯ ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ” ಎನ್ನುತ್ತಾಳೆ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ.

ಇನ್ನು ಕವಿ ಬ್ರಹ್ಮಶಿವನ ಮಾತುಗಳನ್ನು ನೋಡುವುದಾದರೆ — 
೧. ಸುರಿತಿರ್ಪ ಕವಿಲೆಯ ಉಚ್ಚೆಯನ್
ಇರದೆ ಒಯ್ಯನೆ ತಳಿದು ತಮ್ಮ ತಲೆಯೊಳ್ ಕುಡಿವ
ಆ ನರರ್ ಉರುಗರಮಂ ತಿಂಗುಂ
ನಿರುತ ಕೃತವ್ ಅರಿವಾ ದೈವಮ್ ಆವುದೊ ಪಶುವಿಂ

ಅರ್ಥ: ಸುರಿಯುತ್ತಿರುವ ದನದ ಉಚ್ಚೆಯನ್ನು ತಕ್ಷಣವೇ ತೆಗೆದುಕೊಂಡು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವುದಲ್ಲದೇ ಹೊಟ್ಟೆಗೂ ಕುಡಿಯುವ ಭಕ್ತಜನರು ದನದ ಸೆಗಣಿಯನ್ನೇಕೆ ತಿನ್ನಬಾರದು? ಅವರು ಆ ಕಾಲದಲ್ಲಿ ಅರಿತ ಗೋವು ಎಂಬ ಪಶುವಿಗಿಂತಲೂ ಮಿಗಿಲಾದ ದೇವರು ಬೇರೆ ಇದ್ದಾನೆಯೇ? 

೨. ಒರ್ಮಾನಂಗೆ ಕರೆವ ಆವಿಂಗೆ
ಒರ್ಮೆಯುಮ್ ಎರಗುತ್ತಮ್, ಇರದೆ ಕೊಡವಾಲ್ ಕರೆವ ಆ ಎರ್ಮೆಗೆ ಎರಗುವುದು ಪಶುವಿಂ, ನೂರ್ಮಡಿ ಫಲಮೀಗುಮ್ ಅದರಿನೆ ಎರಗುಗೆ ಭಕ್ತರ್ ಅರ್ಥ: ಒಂದು ನಿರ್ದಿಷ್ಟ ಪ್ರಮಾಣದಷ್ಟು ಹಾಲು ಕರೆಯುವ ಹಸುವಿಗೆ ನಮಸ್ಕರಿಸಿಕೊಳ್ಳುವ ಭಕ್ತರೇ, ಹಸುವಿಗಿಂತಲೂ ಹೆಚ್ಚಾಗಿ ಕೊಡತುಂಬಾ ಹಾಲು ಕರೆಯುವ ಎಮ್ಮೆಗೆ ಒಮ್ಮೆಯಾದರೂ ನೀವೇಕೆ ನಮಸ್ಕರಿಸಿಕೊಳ್ಳುವುದಿಲ್ಲ? ಹಸುವಿಗಿಂತಲೂ ಮಿಗಿಲಾಗಿ ಬಿಂದಿಗೆ ತುಂಬಾ ಹಾಲು ಕೊಡುವ ಎಮ್ಮೆಗೆ ನೀವು ನಮಸ್ಕರಿಸಿಕೊಂಡರೆ ನೂರುಪಟ್ಟು ಪ್ರಯೋಜನವಾಗುವುದಿಲ್ಲವೆ ಭಕ್ತರೇ?

೩. ಆರಾನುಂ ಕಂಡಪರೆಂ|     ದೂರಿಂದ ಪೊರಗೊಯ್ದು ವೊರಲದಂತೆ ಪಶುವಂ| ಘೋರಂಬಡಿಸಿಯೆ ಕೊಂದದ| ನಾರೋಗಿಪ ವಿಪ್ರಸಮಿತಿ ಗೆಯ್ಯದುದುಂಟೆ?
ಅರ್ಥ: ಯಾರಾದರೂ  ಕಂಡುಬಿಡುವರೆಂದು ಊರಿಂದ ಹೊರಗೊಯ್ದು ಎಳೆಗರುವನ್ನು ಒರಲದಂತೆ ಕೊರಳ ಹಿಡಿದು ಕೊಂದು ಅದರ ಮಾಂಸವನ್ನು ಸೇವಿಸುವ ವಿಪ್ರ ಕುಲದವರು ಎಸಗದಿರುವುದೇನಿದೆ?

ಬುದ್ಧಗುರು ಜೀವಮಂಡಲದ ಸಕಲ ಜೀವಿಗಳ ಅಸ್ತಿತ್ವ ಮತ್ತು ಅವುಗಳ ಜೀವವಿಕಾಸವನ್ನು ಗೌರವಿಸುವ ಅಹಿಂಸಾ ಮೌಲ್ಯವನ್ನು ತಿಳಿಸಿಕೊಡುತ್ತಾನೆ. ತನ್ನ ಅನುಯಾಯಿ ಭಿಕ್ಖುಗಳಿಗೆ ಮಳೆಗಾಲದಲ್ಲಿ ಭಿಕ್ಷಾಟನೆ ಮೇಲೆ ಹೆಚ್ಚು ದೇಶಪರ್ಯಟನೆ ಮಾಡದಂತೆ ಸೂಚಿಸುತ್ತಾನೆ. ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ಒಣಗಿದ ಭೂಮಿಯ ಒಡಲು ಮಳೆಗಾಲದಲ್ಲಿ ಮಳೆಯಿಂದ ತಂಪಾಗಿ ಭೂಮಿತಾಯಿಯು ಹೊಸ ಜೀವಿಗಳಿಗೆ, ಸಸ್ಯಗಳಿಗೆ ಜನ್ಮ ನೀಡುತ್ತಿರುತ್ತಾಳೆ. ಭಿಕ್ಖುಗಳ ಪಾದಾಕ್ರಾಂತಕ್ಕೆ ಸಿಲುಕಿದ ಜೀವಿಗಳು, ಸಸ್ಯಗಳು ನಾಶವಾಗಬಾರದೆಂಬ ಕಳಕಳಿಯಿಂದ ಮಳೆಗಾಲದಲ್ಲಿ ಹೆಚ್ಚು ಓಡಾಡದಂತೆ ಬುದ್ಧಗುರು ಭಿಕ್ಖುಗಳಿಗೆ ಸೂಚಿಸಿದ್ದನು. ಇದೇ ರೀತಿಯಲ್ಲಿ ಮಹಾವೀರನು ತನ್ನ ಅನುಯಾಯಿಗಳು ಪಾದಗಳಿಗೆ ಅಳಲೆ (ಹತ್ತಿ) ಕಟ್ಟಿಕೊಂಡು ಓಡಾಡುವ ಮೂಲಕ ಭೂಮಿಯ ಮೇಲಿನ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳಿಗೆ ಘಾತ ಮಾಡಬಾರದೆಂದು ಸೂಚಿಸಿದ್ದನು. ಇವು ಅಹಿಂಸೆಯ ಉನ್ನತ ಆಶಯಗಳಾಗಿವೆ.

ಸಸ್ಯಾಹಾರಿಗಳ ಬೀಗರ ಮನೆಯಲ್ಲಿ ಮಾಂಸಾಹಾರಿಯಾದ ತನ್ನ ಮಗಳನ್ನು ಅಗೌರವಿಸಲಾಗುತ್ತಿದೆ ಎಂದು ತಿಳಿದ ಮಾತಂಗನು ತನ್ನ ಅಳಿಯ ಮತ್ತು ಮಗಳನ್ನು ಭೇಟಿಯಾಗಲು ಬೀಗರ ಮನೆಗೆ ಹೋಗುತ್ತಾನೆ. ಅಂದು ಬೀಗರ ಮನೆಯಲ್ಲಿ ಅಡುಗೆಗಾಗಿ ಒಂದು ಬಟ್ಟಲಿನ ತುಂಬಾ ಕಾಳುಗಳನ್ನು ಬೇಯಿಸಲು ಬೀಗರು ಮುಂದಾದದ್ದನ್ನು ನೋಡಿದ ಮಾತಂಗನು, “ಅಯ್ಯೋ ! ಬಟ್ಟಲಿನ ತುಂಬಾ ಎಷ್ಟೊಂದು ಜೀವಹತ್ಯೆ ಮಾಡುತ್ತಿದ್ದೀರಿ! ನಾನು ಮತ್ತು ನನ್ನ ಮಗಳು ಹಸಿವೆಗಾಗಿ ಒಂದೇ ಒಂದು ಜೀವಿಯನ್ನು ತಿಂದುಕೊಂಡರೆ, ನೀವು ಎಷ್ಟೊಂದು ಜೀವಗಳನ್ನು ಕೊಲ್ಲುತ್ತಿದ್ದೀರಿ” ಎಂದು ಹೌಹಾರುತ್ತಾನೆ. ಆಶ್ಚರ್ಯ ವ್ಯಕ್ತಪಡಿಸಿದ ಬೀಗರು ಅದು ಹೇಗೆಂದು ಕೇಳಿದಾಗ, ಬಟ್ಟಲೊಳಗಿರುವ ಅಸಂಖ್ಯಾತ ಬೀಜಗಳು ನೆಲಕ್ಕೆ ಬಿದ್ದ ಪಕ್ಷದಲ್ಲಿ ಎಲ್ಲವೂ ಮೊಳಕೆಯೊಡೆದು ನೆಲದಲ್ಲಿ ಬೇರಿಳಿಸಿ ಸಸಿಗಳು ಬೆಳೆಯುತ್ತವೆ” ಎಂದು ಉತ್ತರಿಸುತ್ತಾನೆ ಮಾತಂಗ. ಮಾತಂಗ ಇದೇ ಬೌದ್ಧ ಪರಂಪರೆಯವನಾಗಿ ಅವನು ಜೀವದ ಉಗಮದ ಗುಟ್ಟನ್ನು ಹೀಗೆ ಮನದಟ್ಟು ಮಾಡುತ್ತಾನೆ.

ನಮ್ಮನ್ನು ವೈಚಾರಿಕವಾಗಿ ಪ್ರೇರಿಸಿದ ದಾರ್ಶನಿಕ ಕವಿ ಕುವೆಂಪು, ಮಾಂಸಾಹಾರ ಸೇವನೆಯ ವಿಷಯದಲ್ಲಿ ತಳೆದಿದ್ದ ನಿಲುವೇನೆಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ತೇಜಸ್ವಿಯರು ಶಾಲೆಯಲ್ಲಿ ಓದುತ್ತಿದ್ದಾಗ ಮೇಷ್ಟ್ರರೊಬ್ಬರು, ಕುವೆಂಪು ಅವರ ಕವನ ವಾಚಿಸುತ್ತಾ, ‘ಕುವೆಂಪು ಅವರು ಕಾವ್ಯ ರಚನೆ ಮಾಡುವಾಗ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿ, ಮಡಿ ಉಟ್ಟಿರುತ್ತಾರೆಎಂದು ಹೇಳಿದರಂತೆ ಅದನ್ನ ತೇಜಸ್ವಿಯವರು ಮನೆಗೆ ಬಂದು ತಂದೆಯವರಲ್ಲಿ ವಿಚಾರಿಸಿದಾಗ ಕುವೆಂಪು ಅವರ ಉತ್ತರ ಹೀಗಿತ್ತೆಂದು ಅಣ್ಣನ ನೆನಪುಕೃತಿಯಲ್ಲಿ ಪೂರ್ಣಚಂದ್ರ ತೇಜಸ್ವಿ ಹೀಗೆ ದಾಖಲಿಸಿದ್ದಾರೆ–

ವೇದೋಪನಿಷತ್ತುಗಳನ್ನು ಬರೆದವರು ದನದ ಮಾಂಸ ತಿನ್ನುತ್ತಿದ್ದರೆನ್ನುವುದು, ರಾಮಾಯಣ ಬರೆದ ವಾಲ್ಮೀಕಿ ಶಿಕಾರಿ ಮಾಡುತ್ತಿದ್ದ ವ್ಯಾಧನಾಗಿದ್ದನೆನ್ನುವುದು ಆ ಮುಠ್ಠಾಳ ಮೇಷ್ಟ್ರಿಗೆ ಗೊತ್ತಿಲ್ಲ. ಈ ಮಡಿ ಹೆಂಗಸರಂತಹ ಮೇಷ್ಟ್ರುಗಳು ನಿಮಗೆ ಹೇಳಿಕೊಡುವುದಾದರೂ ಏನು? ಅವಿವೇಕಿಗಳು ಪದ್ಯ ಬರೆಯುವವರು ಪಥ್ಯದಲ್ಲಿರಬೇಕು ಎನ್ನುವ ಕಂದಾಚಾರ ನಂಬಿದ್ದಾರಲ್ಲ. ಹಿಂದೂ ಧರ್ಮಕ್ಕೆ ಇದಕ್ಕಿಂತ ದುರ್ಗತಿ ಇದೆಯೇ? ಹೋಗಲಿ ನೀನಾದರೂ ಇದೆಲ್ಲಾ ತಪ್ಪು ಎನ್ನುವುದನ್ನು ತಿಳಿದುಕೊ. ಇನ್ನೊಮ್ಮೆ ಮೇಷ್ಟ್ರು ಹಾಗೇನಾದ್ರು ಹೇಳಿದ್ರೆ? ಮೇಷ್ಟ್ರೇ ನೀವು ಹೇಳೋ ಹಾಗೇನೂ ಇಲ್ಲ, ನಾವು ದನದ ಮಾಂಸ ಸಹ ಸಿಕ್ಕರೆ ತಿನ್ನುತ್ತೇವೆ, ನಾವು ಹಿಂದೂಗಳೇ ಅಲ್ಲ ಅಂತ ಹೇಳಿಬಿಡು” ಎಂದು ನನಗೆ ಕೋಪೋದ್ರಿಕ್ತರಾಗಿ ಹೇಳಿದರು (ಅಣ್ಣನ ನೆನಪು, ಪುಟ : ೬೨, ೬೩)

ಬುದ್ಧಗುರುವಿನ ತ್ರಿಸರಣ ಮಂತ್ರದಲ್ಲಿರುವ “ಶರಣಂ ಗಚ್ಛಾಮಿ” ಎಂದು ಹೇಳಿದ ಬುದ್ಧ ಮತ್ತು ಬೌದ್ಧ ಭಿಕ್ಖುಗಳ ಮೂಲಾಶಯವೇ ಹನ್ನೆರಡನೇ ಶತಮಾನದಲ್ಲಿ ಶರಣು ಶರಣಾರ್ಥಿಎಂದು ಹೇಳಿದ ಬಸವಾದಿ ಪ್ರಮಥ ಶರಣರ ಶರಣ ಚಳವಳಿಯ ಆಶಯವೂ ಆಗಿದೆ. ಶರಣ ಧರ್ಮ ಅರ್ಥಾತ್‌ಲಿಂಗಾಯತ ಧರ್ಮದ ಅನುಯಾಯಿಗಳಾದ  ಲಿಂಗಾಯತರು ಮಾಂಸಾಹಾರ ತ್ಯಜಿಸಿರುವುದರ ಹಿನ್ನೆಲೆಯಲ್ಲಿ ಬಸವಣ್ಣನವರ ಪ್ರಭಾವ ಇರುವುದಿಲ್ಲ. ಅಲ್ಲಿರುವುದು ವೈದಿಕರ ಮತ್ತು ವೀರಶೈವರ ಪ್ರಭಾವ. ಮಾಂಸಾಹಾರದ ವಿರುದ್ಧ ಬಸವಣ್ಣನವರ ಪ್ರಭಾವ ಇದ್ದಿದ್ದರೆ ವಚನಕಾರ್ತಿ ಕಾಳವ್ವೆ ಕುರಿ ಕೋಳಿ ಕಿರುಮೀನಎಂಬ ವಚನ ಬರೆಯುತ್ತಿರಲಿಲ್ಲ. ಡೋಹಾರ ಕಕ್ಕಯ್ಯ, ಮಾದಾರ ಧೂಳಯ್ಯ, ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ ಮುಂತಾದವರು ಚರ್ಮದ ಕಾಯಕವನ್ನು ತ್ಯಜಿಸಬೇಕಾಗುತ್ತಿತ್ತು. ಚಮ್ಮಾರಿಕೆಗೆ ಅಪಾರ ಪ್ರಮಾಣದ ಚರ್ಮದ ಅಗತ್ಯವಿತ್ತು. ಅವರಾರೂ ಚಮ್ಮಾರಿಕೆಯನ್ನು ತ್ಯಜಿಸಲಿಲ್ಲ.

ಬೌದ್ಧ ಧರ್ಮದ ಕುರಿತು ಇರುವ ಒಂದು ಅಪಪ್ರಚಾರವೆಂದರೆ ಬೌದ್ಧ ಧರ್ಮಕ್ಕೆ ಸೇರಿದವರು ಮಾಂಸಾಹಾರ ತಿನ್ನುವ ಹಾಗಿಲ್ಲ ಎಂಬುದು. ಬೌದ್ಧ ಧರ್ಮ ಎಂದಾಕ್ಷಣ ಭಿಕ್ಖುಗಳು ಮಾಂಸವನ್ನು ಕಡ್ಡಾಯವಾಗಿ ತ್ಯಜಿಸಬೇಕು ಎಂದುಕೊಳ್ಳುವುದು ತಪ್ಪು ಕಲ್ಪನೆ. ಬೇಸಾಯಕ್ಕೆ ಅವಶ್ಯಕತೆ ಇದೆ ಎಂಬ ಕಾರಣದಿಂದ ಗೋವಿನ ಹತ್ಯೆಯನ್ನು ಮಾಡುತ್ತಿರಲಿಲ್ಲ. ಧಮ್ಮ ಅನುಸರಿಸುತ್ತಿರುವ ಜನರು ಮಾಂಸಾಹಾರವನ್ನು ಸೇವಿಸುತ್ತಿದ್ದರು. ಮಾಂಸಾಹಾರವೇ ದುರ್ಗುಣಗಳ ಉತ್ಪತ್ತಿಗೆ ಕಾರಣವಲ್ಲ. ತ್ಯಜಿಸಬೇಕಾದದ್ದು ನಮ್ಮೊಳಗಿನ ದುರ್ಗುಣಗಳನ್ನು ಹೊರತು ಮಾಂಸಾಹಾರವನ್ನಲ್ಲ ಎಂದು ಬುದ್ದ ಒಪ್ಪಿಕೊಳ್ಳುತ್ತಾರೆ.

ಬುದ್ಧನ ಕಾಲದಲ್ಲಿ ಕೃಷಿ ಪ್ರಧಾನ ಸಂಸ್ಕೃತಿಯ ಶಾಕ್ಯ ಮತ್ತು ಕೋವಿಲ ಎಂಬ ಗಣಸಮುದಾಯಗಳು ರೋಹಿಣಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ಸದಾಕಾಲವೂ ಕಲಹಕ್ಕೆ ತೊಡಗುತ್ತಿರುತ್ತವೆ. ಬೇಸಾಯಕ್ಕೆ ಬೇಕಾದ ಜಲಕೋಶಗಳ ರಕ್ಷಣೆ ಮತ್ತು ದನಗಳ ರಕ್ಷಣೆ ಪ್ರಧಾನ ಆದ್ಯತೆಯಾಗಿತ್ತು. ಕೃಷಿ ಸಂಸ್ಕೃತಿಯ ಬೌದ್ಧ ಧರ್ಮೀಯರು ಗೋವಧೆ ಮಾಡುತ್ತಿರಲಿಲ್ಲ. ಗೋವುಗಳು ಕೃಷಿಗೆ ಅಗತ್ಯವಾಗಿದ್ದವು. ಮಾಂಸಾಹಾರಿಗಳು ಗೋವುಗಳ ವಿಸರ್ಜಿತ ಕಳೇಬರಗಳ ಮಾಂಸವನ್ನು ತಿನ್ನುತ್ತಿದ್ದರು. ಬೌದ್ಧ ಧರ್ಮದ ಇಂತಹ ಅಹಿಂಸೆಯ ಮೌಲ್ಯವನ್ನು ಹೈಜಾಕ್ ಮಾಡಿಕೊಂಡ ವೈದಿಕಾರ್ಯರು ಮಾಂಸಾಹಾರವನ್ನು ತ್ಯಜಿಸಿ ಗೋವನ್ನು ಪವಿತ್ರೀಕರಿಸಿ ಗೋವಧೆಯನ್ನು ನಿಷೇಧಿಸಿದರು. ಈ ಬಗ್ಗೆ ಕಾಂಚ ಐಲಯ್ಯನವರು, ‘God as Political Philosopher: Buddha’s Challenge to Brahminism’ ಮತ್ತು ‘Buffalo Nationalism’ ಕೃತಿಗಳಲ್ಲಿ ಹಾಗೂ ಡಿ.ಎನ್.ಝಾ ಅವರು ‘The Holy Cow ; Beef in Indian Dietary Tradition” ಎಂಬ ಕೃತಿಯಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾರೆ.

ಬುದ್ಧಗುರುವಿನ ಕರುಣಾ ಮೈತ್ರಿಯ ಕಟಾಕ್ಷಕ್ಕೆ ಒಳಗಾದ ಸುಜಾತ ಎಂಬ ಹೆಣ್ಣುಮಗಳು ಬುದ್ಧನಿಗೆ ಭಿಕ್ಷಾಂಬಲಿ ನೀಡುತ್ತಾಳೆ. ಅಂಬಲಿಯನ್ನು ಆರೋಗಿಸಿದ ಬಳಿಕ ಬುದ್ಧನಿಗೆ ಜ್ಞಾನೋದಯವಾಗುತ್ತದೆ.   ಚುಂದ ಎಂಬ ಅನುಯಾಯಿ ನೀಡಿದ ಸೂಕರಮದ್ದವಎಂಬ ಬಾಡಾಮ್ರ ಬಾಡಾಮ್ರ ಸೇವಿಸಿದ ಬುದ್ಧಗುರು ನಿಬ್ಬಾಣ ಹೊಂದುತ್ತಾನೆ. ದೇಹತ್ಯಾಗ ಮಾಡುವ ಮೊದಲಿಗೆ ಕಾರುಣ್ಯ ಸಿಂಧುವಾದ ಬುದ್ಧನು ತನಗೆ ಸುಜಾತ ನೀಡಿದ ಭಿಕ್ಷಾಂಬಲಿ ಮತ್ತು ಚುಂದ ನೀಡಿದ ಸೂಕರಮದ್ದವ ಎರಡೂ ಕಲ್ಮಶಗಳಿರದ ಶುದ್ಧ ಅನ್ನವೆಂದು ಹೇಳುತ್ತಾನೆ. ಇಂತಹ ಬುದ್ಧಗುರು, ಕಾಡಿನ ಮಹಾಹಿಂಸ್ರಕನಾದ ಅಂಗುಲಿಮಾಲನ ಹೃದಯದಲ್ಲಿ,

ಪುರದ ವೇಶ್ಯೆ ಆಮ್ರಪಾಲಿಯ ಮೈತ್ರಿಯಲ್ಲಿ, ಕಿಸಾ ಗೌತಮಿ ಬೇಡಿದ ಸಾವಿಲ್ಲದ ಮನೆಯ ಸಾಸಿವೆಯಲ್ಲಿ, ಯಶೋಧರೆಯ ತಲೆದಿಂಬಿನ ಕಣ್ಣೀರಿನ ಬಿಂದುವಿನಲ್ಲಿ, ಬೀದಿಯ ಜಾಡಮಾಲಿ ಸುನೀತನ ಶುಧ್ದ ಹೃದಯದಲ್ಲಿ, ಯಜ್ಞಪಶು ಮೇಕೆಯ ಉಸಿರುಗೋಳದಲ್ಲಿ, ಭಿಕ್ಖು ಭಿಕ್ಖುಣಿ ಭಿಕ್ಷುಕರ ಭಿಕ್ಷಾ ಬೋಗುಣಿಯಲ್ಲಿ, ಕಾಳೋರಗದ ವಿಷದ ದಾಡೆಯ ಅಮೃತದಲ್ಲಿ, ಬ್ರಾಹ್ಮಣ ಪಂಚಶಿಷ್ಯ ಪ್ರಮಥರ ಅಕ್ಷರಗಳಲ್ಲಿ, ಭೋಗಭಾಗ್ಯ ವಿಲಾಸಗಳನ್ನು ತೊರೆದ ಪರಿವ್ರಾಜಕರಲ್ಲಿ, ಚಂಡಾಶೋಕ ದೇವನಾಂಪ್ರಿಯನಾದ ಅಶೋಕನಲ್ಲಿ, ಶೋಕ ನೀಗಿದ ಸಾರನಾಥದ ಅಶೋಕ ಚಕ್ರದಲ್ಲಿ, ಬಸವಣ್ಣನ ವಚನ ಚಳವಳಿಯ ಶರಣರ ನಡೆನುಡಿಯಲ್ಲಿ, ಭೀಮರಾಯರ ಸಂವಿಧಾನದ ಪುಟದಲ್ಲಿ ಭಾರತದ ಭೂಪಟದಲ್ಲಿ, ದಾರಿಹೋಕನ ಸುಡುಬಿಸಿಲು ದಾರಿಯ ಬೋಧಿಯ ತಂಪಿನಲ್ಲಿ, ವಿಶ್ವದ ನಡುರಂಗ ರಾಗದೀಪದ ವಿಶ್ವಾತ್ಮಕ ಬೆಳಕಿನಲ್ಲಿ ಇದ್ದಾನೆ. ಬುದ್ಧಗುರುವಿನ ಪಂಚಶೀಲ ತತ್ವದ “ಪಾಣಾತಿಪಾತ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ” ಅಂದರೆ ಜೀವಪೋಷಣೆಗಲ್ಲದ ಹೊರತು ಪ್ರಾಣಿಹತ್ಯೆ ಮಾಡುವುದರಿಂದ ದೂರ ಇರುವ ಶಿಕ್ಷಾಪದವನ್ನು ಕೈಗೊಳ್ಳುತ್ತೇನೆ” ಎಂಬುದು ನಮ್ಮ ಮಂತ್ರವಾಗಲಿ.
ಲೇಖನ:ಡಾ.ವಡ್ಡಗೆರೆ ನಾಗರಾಜಯ್ಯ, ಸಮಾಜ ಚಿಂತಕರು, ಬೆಂಗಳೂರು.
(2025 ಅಕ್ಟೋಬರ್ 14, 15 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ “ಧಮ್ಮ ಪಯಣದ ಹಾದಿಯಲ್ಲಿ ಬೌದ್ಧ ಮಹಾಸಮ್ಮೇಳನ ; ಮಾನವ ಮೈತ್ರಿಯ ಯಾನ” ಮಹಾ ಸಮ್ಮೇಳನದಲ್ಲಿ ಮಂಡಿಸಿದ ಸಂಪ್ರಬಂಧ ).

 

Share This Article
error: Content is protected !!
";