ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ ಆಯವ್ಯಯ ಮಂಡಿಸಿರುವ ಬಜೆಟ್ ಸರ್ವೋದಯದ ಸಿದ್ದಾಂತಕ್ಕೆ ತಿಲಾಂಜಲಿ ಇಡುವ ಮೂಲಕ ಸಮಾಜದಲ್ಲಿ ಅಸಮಾನತೆ ಮತ್ತು ದ್ವೇಷದ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಿರುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದ್ದಾರೆ.
ನಾನು ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಕೇಳಲು ಬಯಸುತ್ತಾಯಿದ್ದೇನೆ ಮಧ್ಯಕರ್ನಾಟಕದಲ್ಲಿ ಬಹಳ ಪ್ರಮುಖವಾದ ನೀರಾವರಿ ಯೋಜನೆಗಳಾದ ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಒಂದೂ ರೂಪಾಯಿ ಕೂಡ ಮೀಸಲಿರಿಸಿಲ್ಲ ಹಾಗೂ ನವಲಿ ಮತ್ತು ತುಂಗಾ ಭದ್ರಾ ನದಿಗೆ ಸಮಾನಾಂತರ ಜಲಾಶಯ ನಿರ್ಮಿಸಲು ಕೂಡ ಹಣ ಇಟ್ಟಿರುವುದಿಲ್ಲ.
ಕೇವಲ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿ ನಡೆಯುತ್ತಾ ಇರುವ ಕಾಮಗಾರಿಗಳ ಪಟ್ಟಿಯನ್ನ ಇವತ್ತು ಆವವ್ಯಯ ಪುಸ್ತಕದಲ್ಲಿ ಮುದ್ರಿಸಿ ಜನರ ಕಲ್ಯಾಣವನ್ನು ಬಯಸದೆ ಜನರಿಗೆ ಮೋಸ ಮಾಡುವಂತಹ ನಿರಾಸಾದಾಯಕ ಬಜೆಟ್ ಆಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯವನ್ನು ಅಭಿವೃದ್ಧಿಯ ದೃಷ್ಟಿಯಲ್ಲಿ ೧೦ ವರ್ಷದಷ್ಟು ಹಿಂದಕ್ಕೆ ತಳ್ಳಿದೆ. ಮುಂಬರುವ ದಿನಗಳಲ್ಲಿ ಅಲ್ಪ ಸಂಖ್ಯಾತರ ಓಲೈಕೆಗಾಗಿ ಸಿದ್ದರಾಮಯ್ಯನವರು ಅಲ್ಪ ಸಂಖ್ಯಾತರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಸಂಸದರು ದೂರಿದ್ದಾರೆ.

