ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಲೇಬೇಕು ಎನ್ನುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ವಸಂತ ನರಸಾಪುರ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸಿಎಂ ಮತ್ತು ಕೇಂದ್ರ ಸಚಿವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಬಸವರಾಜು ಪತ್ರ ಬರೆದಿದ್ದಾರೆ. ಕನಕಪುರ-ನೆಲಮಂಗಲಬಳಿ ಏರ್ಪೋರ್ಟ್ಗೆ ಅಗತ್ಯಭೂಮಿಯಿಲ್ಲ. ಈಗಾಗಲೇ ನೆಲಮಂಗಲ-ಕುಣಿಗಲ್ ರಸ್ತೆಯ ಪ್ರಸ್ತಾವನೆ ಕೈಬಿಡಲಾಗಿದೆ. ಆದರೆ, ತುಮಕೂರಿನ ವಸಂತ ನರಸಾಪುರದ ಬಳಿ 3,500 ಎಕರೆ ಜಮೀನು ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿ-48 ಸಮೀಪವೇ ಖಾಲಿ ಜಮೀನಿದ್ದು ಈಸ್ಥಳದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡುವುದರಿಂದ ರಾಜ್ಯದ 21 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಬಸವರಾಜು ತಿಳಿಸಿದ್ದಾರೆ.
ತುಮಕೂರಿಗೆ ಮೆಟ್ರೋ ತರಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ತುಮಕೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ರೆ ಜನರಿಗೆ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಪತ್ರದ ಮೂಲಕ ಕೇಂದ್ರ ಸಚಿವರಿಗೆ ಬಸವರಾಜು ಮನವಿ ಮಾಡಿದ್ದಾರೆ.

