ಐದಾರು ತಿಂಗಳಿಂದ ನೀಡುತ್ತಿಲ್ಲ ಕಟ್ಟಡ ಪರವಾನಗಿ…
ನಿರ್ಮಾಣ್-2 ತಂತ್ರಾಂಶ ಇದ್ದರೂ ಯುಎಲ್ಎಂಎ ತಂತ್ರಾಂಶ ತಂದಿಟ್ಟ ಸಮಸ್ಯೆ?
ಹರಿಯಬ್ಬೆ ಹೆಂಜಾರಪ್ಪ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆ, ಕೈಗಾರಿಕೆ, ಆಸ್ಪತ್ರೆ, ನರ್ಸಿಂಗ್ ಹೋಂ ಸೇರಿದಂತೆ ಇತರೆ ಎಲ್ಲ ರೀತಿಯ ಕಟ್ಟಡ ನಿರ್ಮಾಣ ಪರವಾನಗಿ ಪಡೆಯುವುದು ಒಸಿ-ಸಿಸಿ ಸಮಸ್ಯೆಗಿಂತ ಜಟಿಲವಾಗುತ್ತಿದೆ.!?
ಕಳೆದ ಐದಾರು ತಿಂಗಳಿಂದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಪರಸಭೆಗಳಲ್ಲಿ ಪರವಾನಗಿ ನೀಡುತ್ತಿಲ್ಲ. ಇದರಿಂದಾಗಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ವಿದ್ಯುತ್ ಸಂಪರ್ಕ ದೊರೆಯುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ತಲೆದೊರಿವೆ.
ಈಗಾಗಲೇ ಕಟ್ಟಡ ಪರವಾನಗಿ ನೀಡಲು ರಾಜ್ಯ ಸರ್ಕಾರದ ನಿರ್ಮಾಣ್-2 ತಂತ್ರಾಂಶ ವ್ಯವಸ್ಥೆ ಇದೆ. ಇದರ ಮಧ್ಯ ಯುಎಲ್ಎಂಎಸ್ ತಂತ್ರಾಂಶದ ಮೂಲಕ ಕಟ್ಟಡ ಪರವಾನಗಿಗೆ ಕಟ್ಟಡ ನಿರ್ಮಾಣದ ಪ್ಲಾನ್ ಅಪ್ಲೋಡ್ ಮಾಡುವಂತೆ ಅಧಿಕೃತ ಖಾಸಗಿ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ್ದು ಈ ಯುಎಲ್ಎಂಎಸ್ ತಂತ್ರಾಂಶದಲ್ಲಿ ಪ್ಲಾನ್ ಅಪ್ಲೋಡ್ ಮಾಡಲು ಖಾಸಗಿ ಇಂಜಿನಿಯರ್ ಗಳು ಒಪ್ಪುತ್ತಿಲ್ಲ. ಇದು ಮತ್ತೊಂದು ರೀತಿಯ ಸಮಸ್ಯೆಗೆ ಕಾರಣವಾಗಿದೆ?.
ಯುಎಲ್ಎಂಎಸ್ ತಂತ್ರಾಂಶ ನಿರಾಕರಣೆ ಏಕೆ-
ಕಟ್ಟಡ ನಿರ್ಮಾಣಕ್ಕಾಗಿ ಪರವಾನಗಿ ಪಡೆಯಲು ನಿರ್ಮಾಣ್-2 ತಂತ್ರಾಂಶ ವ್ಯವಸ್ಥೆ ಅಸ್ಥಿತ್ವದಲ್ಲಿದೆ. ಇದರ ಬದಲು ನೂತನವಾಗಿ ಯುಎಲ್ಎಂಎಸ್ ತಂತ್ರಾಂಶದಲ್ಲಿ ಪ್ಲಾನ್ ಅಪ್ಲೋಡ್ ಮಾಡಿ ಎನ್ನುವುದು ಯಾವ ನ್ಯಾಯ. ಹೊಸ ಯುಎಲ್ಎಂಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನಾಲ್ಕು ದಿಕ್ಕಿನಲ್ಲೂ 1 ಮೀಟರ್ (3.28 ಅಡಿ)ನಷ್ಟು ಸೆಟ್ ಬ್ಯಾಕ್ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು. ಇವತ್ತಿನ ತನಕ ಕಟ್ಟಡ ಮಾಲೀಕರು ಕೇವಲ ಒಂದೂವರೆ ಅಡಿ ಬಿಟ್ಟು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.
ಯಾವೊಬ್ಬ ನಿವೇಶನ ಮಾಲೀಕರು ಒಂದು ಮೀಟರ್ ಬಿಟ್ಟು ಕಟ್ಟುವುದಿಲ್ಲ. ಒಂದು ಮೀಟರ್ ಬಿಟ್ಟು ಕಟ್ಟಡ ಕಟ್ಟಿದಂತಹ ಸಂದರ್ಭದಲ್ಲಿ ನಕ್ಷೆ ತಯಾರು ಮಾಡಿ ಅಪ್ಲೋಡ್ ಮಾಡಿದ ಇಂಜಿನಿಯರ್ ಗಳೇ ಹೊಣೆಗಾರರಾಗಿದ್ದು ಅಂತಹ ಇಂಜಿನಿಯರ್ ಗಳು ದಂಡದ ರೂಪದಲ್ಲಿ 2 ಲಕ್ಷ ರೂ.ಗಳನ್ನು ಸರ್ಕಾರಕ್ಕೆ ಕಟ್ಟಬೇಕಿದೆ.
ನಾವು ಮಾಡದ ತಪ್ಪಿಗೆ 2 ಲಕ್ಷ ಏಕೆ ಕಟ್ಟಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 30*40 ನಿವೇಶನಕ್ಕೆ 50 ಲಕ್ಷದಿಂದ ಒಂದು ಕೋಟಿ ಆಗುತ್ತದೆ. ಇನ್ನೂ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಕನಿಷ್ಠ ಎಂದರೂ 2 ಸಾವಿರದಿಂದ 6 ಸಾವಿರ ತನಕ ಪ್ರತಿ ಅಡಿಗೆ ಬೆಲೆ ಇದೆ. ಇಷ್ಟು ಬೆಲೆ ತೆತ್ತು ನಿವೇಶನ ಖರೀದಿ ಮಾಡಿದ ಮಾಲೀಕರು ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ನಾಲ್ಕು ದಿಕ್ಕಿನಲ್ಲೂ ಒಂದು ಮೀಟರ್ ಸೆಟ್ ಬ್ಯಾಕ್ ಬಿಡಲು ಸುತರಾಂ ಒಪ್ಪುವುದಿಲ್ಲ.
30*40 ಅಡಿ ನಿವೇಶನದಲ್ಲಿ ನಾಲ್ಕು ದಿಕ್ಕಿನಲ್ಲೂ ಒಂದು ಮೀಟರ್ ನಷ್ಟು ಸೆಟ್ ಬ್ಯಾಕ್ ಬಿಟ್ಟು ಮನೆ ನಿರ್ಮಿಸಿದರೆ ಗೂಡಂಗಡಿ ತರ ಆಗಲಿದ್ದು ಇದಕ್ಕೆ ನಿವೇಶನ ಮಾಲೀಕರು ಒಪ್ಪುತ್ತಿಲ್ಲ. ಇಂತಹ ಕಾರ್ಯಕ್ಕೆ ಇಂಜಿನಿಯರ್ ಗಳೇಕೆ 2 ಲಕ್ಷ ದಂಡ ಕಟ್ಟಬೇಕು ಎನ್ನುವುದು ಖಾಸಗಿ ಇಂಜಿನಿಯರ್ ಗಳ ಪ್ರಶ್ನೆಯಾಗಿದೆ.
ಏನಿದು ನಿರ್ಮಾಣ್-2 ತಂತ್ರಾಂಶ-
ಹಾಲಿ ಅಸ್ತಿತ್ವದಲ್ಲಿರುವ ‘ನಿರ್ಮಾಣ್-2‘ ತಂತ್ರಾಂಶವು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಆನ್‌ಲೈನ್ ವ್ಯವಸ್ಥೆಯಾಗಿದೆ. ಕಟ್ಟಡ ನಿರ್ಮಿಸುವಂತ ಮಾಲೀಕರು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಲು ಮತ್ತು ಪರವಾನಗಿ ಪಡೆಯಲು ವಿನ್ಯಾಸಗೊಳಿಸಲಾಗಿದೆ.
ಈ ತಂತ್ರಾಂಶದ ಮುಖ್ಯ ಉದ್ದೇಶವೆಂದರೆ ಪ್ರಕ್ರಿಯೆ ಸುಗಮಗೊಳಿಸುವುದು ಮತ್ತು ಪಾರದರ್ಶಕತೆ ತರುವುದಾಗಿದ್ದು ಎಲ್ಲ ಕಡೆ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಮನೆ ನಿರ್ಮಾಣಕ್ಕೆ ಪರವಾನಗಿ ನೀಡುವ ಪ್ರಕ್ರಿಯೆ ಸುಲಭ, ತ್ವರಿತ ಮತ್ತು ಪಾರದರ್ಶಕವಾಗಿದೆ. ಆದರೂ ಯುಎಲ್ಎಂಎಸ್ ತಂತ್ರಾಂಶ ಏಕೆ ಎನ್ನುವುದು ಖಾಸಗಿ ಇಂಜಿನಿಯರ್ ಗಳ ಪ್ರಶ್ನೆಯಾಗಿದೆ.
ಯುಎಲ್ಎಂಎಸ್ ತಂತ್ರಾಂಶ ಆನ್‌ಲೈನ್ ವ್ಯವಸ್ಥೆ ಮತ್ತು ಡಿಜಿಟಲೀಕರಣದಿಂದ ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಸೇವೆಗಳು ದೊರೆಯುತ್ತವೆ ಎನ್ನುವ ಉದ್ದೇಶದಿಂದ ಸರ್ಕಾರ ದಿನದಿನಕ್ಕೂ ಹೊಸ ಹೊಸ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುತ್ತಿರುವುದು ಒಂದು ಗೂಡು ಕಟ್ಟಿಕೊಳ್ಳುವ ಆಸೆ ಹೊಂದಿರುವವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸರ್ಕಾರದ ಆಶಯ ಈಡೇರಿಲ್ಲ. ಬದಲಾಗಿ ಪರವಾನಗಿ ಪಡೆಯಲು ಪದೇ ಪದೇ ಕಚೇರಿ ಅಲೆದಾಡುವ ಪರಿಸ್ಥಿತಿ ಮನೆ ಕಟ್ಟಲು ಹೊರಟವರಿಗೆ ಎದುರಾಗಿದೆ.
ಮನೆ ಕಟ್ಟುವವರು ಬಹುತೇಕ ಬ್ಯಾಂಕ್ ಸಾಲ ಮಾಡುವುದು ಸಾಮಾನ್ಯ. ಆದರೆ, ಕಟ್ಟಡ ನಿರ್ಮಾಣ ಪರವಾನಗಿ ಪತ್ರ ಹಾಜರುಪಡಿಸದೇ, ಬ್ಯಾಂಕ್ ಅಧಿಕಾರಿಗಳು ಸಾಲ ನೀಡುವುದಿಲ್ಲ. ಇಷ್ಟೇ ಅಲ್ಲದೇ ಕಟ್ಟಡಕ್ಕೆ ಬೇಕಾದ ತಾತ್ಕಾಲಿಕ ವಿದ್ಯುತ್, ನೀರಿನ ಸಂಪರ್ಕ, ಕೇಂದ್ರ ಸರ್ಕಾರದ ಸಹಾಯಧನ ಕೂಡ ದೊರೆಯುವುದಿಲ್ಲ. ಆದ್ದರಿಂದ ಕಟ್ಟಡ ನಿರ್ಮಾಣ ಪರವಾನಗಿ ಪತ್ರ ಅತ್ಯಗತ್ಯವಾಗಿದೆ. ಒಂದು ವೇಳೆ ಪರವಾನಗಿ ಇಲ್ಲದೇ ಮನೆ ನಿರ್ಮಾಣ ಮಾಡಿದಲ್ಲಿ, ಅಂತಹ ಕಟ್ಟಡ ಅನಧಿಕೃತ ಎಂದು ಪರಿಗಣಿಸಲ್ಪಡುತ್ತದೆ.
ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿಲ್ಲ-
30*40 ಅಳತೆ ಮನೆ, ಇತರೆ ಕಟ್ಟಡಗಳ ನಿರ್ಮಾಣಕ್ಕೆ ಸ್ವಾಧೀನಾನುಭವ ಪತ್ರ (ಸಿ.ಸಿ) ಮತ್ತು ಕಟ್ಟಡ ಪ್ರಾರಂಭಿಕ ಪ್ರಮಾಣಪತ್ರ (ಒಸಿ)ದಿಂದ ವಿನಾಯಿತಿ ನೀಡಲಾಗಿದೆ. ಆದರೂ ನಗರಸಭೆ, ಪುರಸಭೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿಲ್ಲ. ಪ್ರಭಾವಿಗಳು ಅಥವಾ ಶಾಸಕರ ಕಡೆಯಿಂದ ಫೋನ್ ಕರೆ ಬಂದರೆ ನಿರ್ಮಾಣ-2 ತಂತ್ರಾಂಶದಲ್ಲೇ ಪ್ಲಾನ್ ಅಪ್ಲೋಡ್ ಮಾಡಿ ಪರವಾನಗಿ ನೀಡಲಾಗುತ್ತದೆ.
ಏನಿದು ಸ್ವಾಧೀನಾನುಭವ ಪತ್ರ?
ಬಿಬಿಎಂಪಿ, ನಗರ ಸಭೆ, ಮಹಾನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ನೀಡಲಾಗುವ ಕಾನೂನುಬದ್ಧ ದಾಖಲೆಯೇ ಕಟ್ಟಡ ಸ್ವಾಧೀನಾನುಭವ ಪತ್ರ (ಒಸಿ). ಕಟ್ಟಡವು ಅನುಮತಿ ಪಡೆದ ನಕ್ಷೆಯಂತೆ ನಿರ್ಮಾಣವಾಗಿದೆಯೇ, ವಾಸಕ್ಕೆ ಸುರಕ್ಷಿತವಾಗಿದೆ ಎಂಬುದನ್ನು ಈ ಪತ್ರವು ದೃಢಪಡಿಸುತ್ತದೆ. ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಈ ಪತ್ರ ನೀಡುವುದಿಲ್ಲ. ಸ್ವಾಧೀನಾನುಭವ ಪತ್ರ ಇಲ್ಲ ಎಂದರೆ ವಿದ್ಯುತ್ ಮತ್ತು ನೀರು, ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸಲು ನಿರ್ದೇಶನವಿದೆ.
ಏನಿದು ಸುಪ್ರೀಂ ಕೋರ್ಟ್‌ಆದೇಶ?
ಸ್ಥಳೀಯ ಆಡಳಿತ ಸಂಸ್ಥೆಗಳಿಮದ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ನಿರ್ಮಾಣ ಆಗುತ್ತಿರುವ ಕಟ್ಟಡವನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರಂತವಾಗಿ ಪರಿಶೀಲನೆ ನಡೆಸಿ, ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸ್ವಾಧೀನಾನುಭವ ಪತ್ರ ವಿತರಿಸಬೇಕು. ಕಟ್ಟಡ ನಿಯಮ ಉಲ್ಲಂಘಿಸಿ ನಿರ್ಮಾಣ ಆಗಿದ್ದರೆ ಒಸಿ ನೀಡದೇ, ಕ್ರಮ ಕೈಗೊಳ್ಳಬೇಕು. ಒಸಿ ವಿತರಣೆ ಬಳಿಕವಷ್ಟೇ ನೀರಿನ ಸಂಪರ್ಕ, ವಿದ್ಯುತ್‌ಸಂಪರ್ಕ, ಒಳಚರಂಡಿ ಸಂಪರ್ಕ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಆದೇಶದಲ್ಲಿ ಉಲ್ಲೇಖಿಸಿದೆ.
ಒಸಿ-ಸಿಸಿಗೆ ವಿನಾಯಿತಿ:
ಬಡವರು ಮತ್ತು ಮಧ್ಯಮ ವರ್ಗದವರು ನಿರ್ಮಿಸುವ 30*40 ನಿವೇಶನದಲ್ಲಿ ನೆಲ ಮತ್ತು 2 ಅಂತಸ್ತಿನ ಕಟ್ಟಡಗಳಿಗೆ, ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಕಳೆದ ಅಕ್ಟೋಬರ್-14 ರಂದು ಅಧಿಕೃತ ಅದೇಶ ಹೊರಡಿಸಿದೆ.

