ಹಿರಿಯೂರಿಗೆ ಬಂಪರ್ ಲಾಟರಿ, ಇಬ್ಬರು ಸಾಧಕರಿಗೆ ಆಯುಕ್ತರುಗಳ ಭಾಗ್ಯ

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಇಬ್ಬರು ಸಾಧಕರಿಗೆ ಕರ್ನಾಟಕ ಮಾಹಿತಿ ಆಯೋಗದಲ್ಲಿ ಆಯುಕ್ತರಾಗಿ ಅವಕಾಶ ಕಲ್ಪಿಸಲಾಗಿದೆ.
ಹಿರಿಯೂರು ತಾಲೂಕಿನ ಪಿಟ್ಲಾಲಿ ಗ್ರಾಮದ ವಿಶ್ರಾಂತ ಐಎಎಸ್ ಅಧಿಕಾರಿ ಡಾ.ಮಮತಾ ಮತ್ತು ಹಿರಿಯ ಪತ್ರಕರ್ತರಾದ ಹರ್ತಿಕೋಟೆ ರುದ್ರಣ್ಣ ಇವರುಗಳು ನೂತನವಾಗಿ ರಾಜ್ಯ ಮಾಹಿತಿ ಆಯುಕ್ತರಾಗಿ ನೇಮಕ ಆಗುವ ಮೂಲಕ ಹಿರಿಯೂರು ತಾಲೂಕು ಸಿಂಹಪಾಲು ಪಡೆದಿದೆ.

ಕರ್ನಾಟಕ ಮಾಹಿತಿ ಆಯೋಗದಲ್ಲಿ ಒಟ್ಟು 8 ಆಯುಕ್ತರನ್ನು ನೂತನವಾಗಿ ನೇಮಕ ಮಾಡಲಾಗಿದ್ದು ಆ ಪೈಕಿ ಒಬ್ಬರು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ನಿವೃತ್ತ ಐಪಿಎಸ್ ಅಧಿಕಾರಿ ಆಶಿತ್ ಮೋಹನ್ ಪ್ರಸಾದ್ ಪ್ರಮಾಣ ವಚನ ಸ್ವೀಕರಿಸಿದರೆ, ಉಳಿದ ಏಳು ರಾಜ್ಯ ಮಾಹಿತಿ ಆಯುಕ್ತರುಗಳಾಗಿ ನೇಮಕವಾಗಿರುವವರ ಪೈಕಿ ರುದ್ರಣ್ಣ ಹರ್ತಿಕೋಟೆ, ಡಾ. ಬಿ.ಆರ್.ಮಮತ ಅವರು ರಾಜಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನವಾಗಿ ನೇಮಕವಾಗಿರುವ ರಾಜ್ಯ ಮಾಹಿತಿ ಆಯುಕ್ತರುಗಳಿಗೆ ಪ್ರಮಾಣವಚನ ಬೋಧಿಸಿದರು.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಎಚ್. ಎಂ. ರೇವಣ್ಣ, ಬಿ.ಡಿ.ಎ. ಅಧ್ಯಕ್ಷ ಎನ್.ಎ. ಹ್ಯಾರಿಸ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್ ಸೇರಿದಂತೆ ಮತ್ತಿತರ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 ಗ್ರಾಮೀಣ ಭಾಗದ ಹರ್ತಿಕೋಟೆಯವರಾದ ರುದ್ರಣ್ಣ ಅವರು ವಿಜಯವಾಣಿ ದಿನಪತ್ರಿಕೆಯ ಸಹಾಯಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಈಗ  ರುದ್ರಣ್ಣ ಹರ್ತಿಕೋಟೆ ಅವರು ಮಾಹಿತಿ ಆಯೋಗದ ಆಯುಕ್ತರಾಗಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ.
ಇದಲ್ಲದೆ ಭಾರತೀಯ ಪತ್ರಿಕಾ ಮಂಡಳಿಯ 2020ನೇ ಸಾಲಿನ ರಾಷ್ಟ್ರೀಯ ಉತ್ಕೃಷ್ಟತಾ ಪ್ರಶಸ್ತಿಗೆ ರುದ್ರಣ್ಣ ಅವರು ಆಯ್ಕೆಯಾಗಿದ್ದರು ಎನ್ನುವುದು ವಿಶೇಷ.

ಅದೇ ರೀತಿ ಹಿರಿಯೂರು ತಾಲೂಕಿನ ಪಿಟ್ಲಾಲಿ ಗ್ರಾಮದ ರೈತ ಕುಟುಂಬದಿಂದ ಹೊರ ಹೊಮ್ಮಿರುವ ಡಾ.ಬಿ.ಆರ್.ಮಮತ ಅವರು ಐಎಎಸ್ ಅಧಿಕಾರಿಯಾಗಿ ಹಲವು ಹೆಜ್ಜೆ ಗುರುತುಗಳನ್ನು ದಾಖಲು ಮಾಡಿದ್ದಾರೆ.

ಜಿಪಂ ಸಿಇಒ, ಜಿಲ್ಲಾಧಿಕಾರಿ ಹಾಗೂ ಮುದ್ರಾಂಕ ಇಲಾಖೆ ಮುಖ್ಯಸ್ಥರಾಗಿ ಸಾಕಷ್ಟು ಸಾಧನೆಯನ್ನು ಮಾಡಿದ್ದು ಈಗ ಮಾಹಿತಿ ಆಯೋಗದ ಆಯುಕ್ತರಾಗಿ ಸೇವೆ ಸಿದ್ಧರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಇಬ್ಬರು ಸಾಧಕರಿಗೆ ಚಂದ್ರವಳ್ಳಿ ಪ್ರಾದೇಶಿಕ ದಿನ ಪತ್ರಿಕೆ ಅಭಿನಂದನೆಗಳನ್ನು ಸಲ್ಲಿಸಿದೆ.

 

Share This Article
error: Content is protected !!
";