ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರಿಗೆ ಬಸ್ ಗಳ ಪ್ರಯಾಣದ ದರ ಶೇ.15ರಷ್ಟು ಏರಿಕೆ ಮಾಡಿರುವ ಕ್ರಮ ಖಂಡಿಸಿ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮುಖವಾಡ ಧರಿಸಿದ್ದ ಬಿಜೆಪಿ ಕಾರ್ಯಕರ್ತರು, ವಿನೂತನವಾಗಿ ಪ್ರತಿಭಟನೆ ಮಾಡಿ ಕಿಡಿಕಾರಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕರ್ನಾಟಕ ರಾಜ್ಯದ 7 ಕೋಟಿ ಜನರಿಗೆ ರಾಜ್ಯ ಸರ್ಕಾರ ಹೊಸ ವರ್ಷದ ಉಡುಗೊರೆಯಾಗಿ ಬಸ್ ದರ ಏರಿಕೆ ಮಾಡಿ ಆರ್ಥಿಕ ಹೊರೆಯ ಕೊಡುಗೆ ನೀಡಿದೆ. ಆದರೆ ಮೋದಿಯವರು ಹೊಸ ವರ್ಷಕ್ಕೆ ನಿಜವಾದ ಉಡುಗೊರೆ ನೀಡಿದ್ದಾರೆ. ರಾಜ್ಯ ಸರ್ಕಾರ, ದಿ ಗ್ರೇಟ್ 14 ಬಜೆಟ್ ಚಾಂಪಿಯನ್ ಸಿದ್ದರಾಮಯ್ಯನವರು ಬಸ್ ದರ ಏರಿಕೆಯ ಉಡುಗೊರೆ ನೀಡುವ ಮೂಲಕ ಜನ ವಿರೋಧಿ ಆಡಳಿತ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕಳೆದ ಒಂದೂವರೆ ವರ್ಷದಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪ್ರತಿದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದು, ನೋಂದಣಿ ಶುಲ್ಕ ಹೆಚ್ಚಿಸುವುದು, ಹಾಲಿನ ದರ ಹೆಚ್ಚಳ, ಡಿಸೇಲ್, ಪೆಟ್ರೋಲ್ ಸೆಸ್ ತೆರಿಗೆ ಹೆಚ್ಚಿಸುವುದೇ ಸಾಧನೆ ಆಗಿದೆ. ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದ್ದು, ಬೆಲೆ ಏರಿಕೆಯನ್ನ ನಿರಂತರವಾಗಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ನೀಡಿ, ಗಂಡಸರಿಗೆ ಬರೆ ಹಾಕುವ ಸರ್ಕಾರ. ಗ್ಯಾರಂಟಿ ಯೋಜನೆಗಳ ಫಲವಾಗಿ ಜನರು ದುಬಾರಿ ಬೆಲೆ ತೆರಬೇಕಾಗಿದೆ. ಹಾಲಿನ ದರ ಏರಿಸಿದ್ದೀರಿ, ವಿದ್ಯುತ್ ದರ ಏರಿಕೆ ಮಾಡಿದ್ದೀರಿ, ಸ್ಟ್ಯಾಂಪ್ ಡ್ಯೂಟಿ, ರಿಜಿಸ್ಟ್ರೇಷನ್ ಶುಲ್ಕ ಮಾತ್ರವಲ್ಲದೆ ವಿವಿಧ ತೆರಿಗೆಗಳನ್ನೂ ಹೆಚ್ಚಿಸಲಾಗಿದೆ.
ಅಭಿವೃದ್ಧಿಯೊಂದನ್ನು ಬಿಟ್ಟು ತಲೆ ಬೋಳಿಸುವ ಕೆಲಸ ಮಾಡುವ ಸರ್ಕಾರ ಇದಾಗಿದೆ. ಸರ್ಕಾರದ ಖಜಾನೆ ಪೂರ್ತಿ ಖಾಲಿಯಾಗಿದ್ದು, ಕೇವಲ ದಿನ ದೂಡಲು ಜನರಿಗೆ ಬರೆ ಹಾಕುವ ಕೆಲಸ ಮಾಡಿದ್ದಾರೆ ಎಂದು ಅವರು ತರಾಟೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ಮುಖಂಡ ಸಪ್ತಗಿರಿಗೌಡ ಸೇರಿದಂತೆ ಪ್ರಮುಖರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.