ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಅವರು ಬಲಿಯಾಗಿದ್ದು ಮೃತರ ಪಾರ್ಥಿವ ಶರೀರ ಶಿವಮೊಗ್ಗದ ಅವರ ಸ್ವಗೃಹಕ್ಕೆ ಆಗಮಿಸಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ಮಂಜುನಾಥ ರಾವ್ ಅವರ ಸಂಬಂಧಿ ಡಾ.ರವಿ ಕಿರಣ್ ಮಾತನಾಡಿ, ಗುರುವಾರ ಬೆಳಗ್ಗೆ 5 ಗಂಟೆಗೆ ಬೆಂಗಳೂರು ಏರ್ಪೋರ್ಟ್ನಿಂದ ಮಂಜುನಾಥ ರಾವ್ ಅವರ ಮೃತ ದೇಹದ ಜೊತೆ ಅವರ ಹೆಂಡತಿ, ಮಕ್ಕಳು ಬಂದರು.ದಾರಿ ಮಧ್ಯದಲ್ಲಿ ಎರಡು ಮೂರು ಕಡೆಗಳಲ್ಲಿ ಗೌರವ ಸಮರ್ಪಣೆ ಮಾಡಲಾಯಿತು. ಹೀಗಾಗಿ ಶಿವಮೊಗ್ಗ ತಲುಪುವುದು ಸ್ವಲ್ಪ ತಡವಾಯಿತು ಎಂದು ಅವರು ತಿಳಿಸಿದರು.
ಶಿವಮೊಗ್ಗದ ಬೆಕ್ಕಿನ ಕಲ್ಮಠದ ಬಳಿಯಿಂದ ಮೃತ ದೇಹವನ್ನು ಮನೆಯವರೆಗೆ ಮೆರವಣಿಗೆಯ ಮೂಲಕ ತರಲಾಯಿತು. ಜನರು ಆಗಮಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಧ್ಯಾಹ್ನ ಸುಮಾರು 1 ಗಂಟೆಗೆ ಅಂತಿಮ ಯಾತ್ರೆಗೆ ತೆಗೆದುಕೊಂಡು ಹೋಗಲಾಯಿತು. ನಂತರ ಅಲ್ಲಿ ಬ್ರಾಹ್ಮಣ ಪದ್ದತಿಯಂತೆ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪತ್ನಿ ಪಲ್ಲವಿ ಅವರ ಅಕ್ಕ ವಿಜಯಾ ಅವರು ಮಾತನಾಡಿ, ಪಿಯುಸಿಯಲ್ಲಿ ಮಗ ಉತ್ತಮ ರಿಸಲ್ಟ್ ಪಡೆದುಕೊಂಡಿದ್ದ ಖುಷಿಗೆ ಮತ್ತು ರಜೆ ಇದ್ದ ಕಾರಣ ಮೂರು ಜನ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದರು. ಮೊನ್ನೆವರೆಗೂ ಖುಷಿಯಾಗಿಯೇ ಇದ್ದು, ಅಲ್ಲಿನ ಫೋಟೋವನ್ನು ನಮಗೆಲ್ಲ ಶೇರ್ ಮಾಡಿದ್ದರು.
ತನ್ನ ಕಣ್ಣ ಮುಂದೆಯೇ ಗಂಡ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಅದನ್ನು ಪಲ್ಲವಿ ಹೇಗೆ ಎದುರಿಸಿದಳು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಉಗ್ರಗಾಮಿಗಳನ್ನು ಬೇರುಸಹಿತ ಕಿತ್ತುಹಾಕಬೇಕು.ಎಲ್ಲವೂ ಸರಿಹೋಗಿದೆ ಎಂದು ಸುಮ್ಮನಾಗಬಾರದು ಎಂದು ಒತ್ತಾಯಿಸಿದರು.