ಶೇಂಗಾ, ಸೂರ್ಯಕಾಂತಿ ಬೆಳೆದ ರೈತರಿಗೆ ಗುಡ್ ನ್ಯೂಸ್, ಬೆಂಬಲ ಬೆಲೆಯಲ್ಲಿ ಖರೀದಿ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕರ್ನಾಟಕದ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ಒತ್ತಾಸೆ ಮೇರೆಗೆ ಅತಿವೃಷ್ಟಿಯಿಂದಾಗಿ ತತ್ತರಿಸಿರುವ ರೈತರ ಉತ್ಪನ್ನಗಳ ಖರೀದಿಗೆ ಆದೇಶ ಮಾಡುವ ಮೂಲಕ ನವರಾತ್ರಿ ಕೊಡುಗೆ ನೀಡಿದೆ.

ರಾಜ್ಯದ ರೈತರ ಐದು ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡಿ ಆದೇಶಿಸಲಾಗಿದೆ.
2025-26ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ(ಶೇಂಗಾ), ಸೋಯಾಬಿನ್‌ಮತ್ತು ಸೂರ್ಯಕಾಂತಿ ಹೀಗೆ ಒಟ್ಟು 5 ರೈತ ಉತ್ಪನ್ನಗಳನ್ನು ಕೇಂದ್ರದ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತು ಕೇಂದ್ರ ಕೃಷಿ ಸಚಿವರು ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಖುದ್ದು ಪತ್ರ ಬರೆದು ಮಾಹಿತಿ ನೀಡಿದ್ದಾರೆ.

- Advertisement - 

ಪ್ರಸಕ್ತ ಮುಂಗಾರಿನಲ್ಲಿ ಕರ್ನಾಟಕದ ಬೆಳೆಗಾರರು ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೆಸರು, ಉದ್ದು, ಶೇಂಗಾ, ಸೋಯಾಬಿನ್‌ಹಾಗೂ ಸೂರ್ಯಕಾಂತಿ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಗೆ ನೆರವಾಗುವಂತೆ ಕೋರಿ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್‌ಚೌಹಾಣ್‌ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಜೋಶಿ ಅವರ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ ಅವರು ತಕ್ಷಣವೇ ಕರ್ನಾಟಕದ ರೈತರ ನೆರವಿಗೆ ಮುಂದಾಗುವಂತೆ ತಿಳಿಸಿದ್ದರು. ಅಂತೆಯೇ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್‌ಚೌಹಾಣ್ ಅವರು ತಮ್ಮ ಮನವಿಗೆ ತ್ವರಿತ ಸ್ಪಂದನೆ ನೀಡಿ ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ.
ಈ ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಸಹ ನೀಡಿದ್ದಾರೆ.

- Advertisement - 

ಬೆಂಬಲ ಬೆಲೆಯಲ್ಲಿ ಖರೀದಿ-
2025-26ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಿಂದ 38000 ಮೆಟ್ರಿಕ್‌ಟನ್‌ಹೆಸರು ಕಾಳು, 60,810 MT ಉದ್ದು, 15,650 MT ಸೂರ್ಯಕಾಂತಿ, 61,148 MT ಕಡಲೆಬೀಜ ಮತ್ತು 1,15,000 MT ಸೋಯಾಬಿನ್ ಖರೀದಿಗೆ ಅನುಮತಿ ನೀಡಿ ಆದೇಶ ಮಾಡಲಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಜಿಲ್ಲಾವಾರು ಖರೀದಿ ಕೇಂದ್ರ ತೆರೆಯಲಿ-
ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರ ಕಲ್ಪಿಸಿರುವ ಬೆಂಬಲ ಬೆಲೆ ಯೋಜನೆ ನೆರವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಒದಗಿಸಬೇಕು. ಈ ಕೂಡಲೇ ರಾಜ್ಯಾದ್ಯಂತ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ತೆರೆದು ಐದು ರೈತ ಉತ್ಪನ್ನಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.

ಕರ್ನಾಟಕದ ರೈತರ ಸಂಕಷ್ಟ ಅರಿತು ಈ ಮೂಲಕ ನೆರವಿಗೆ ಧಾವಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್‌ಚೌಹಾಣ್ ಅವರಿಗೆ ಸಚಿವ ಪ್ರಲ್ಹಾದ್ ಜೋಶಿ ರಾಜ್ಯದ ರೈತರ ಪರವಾಗಿ ಧನ್ಯವಾದ ಸಹ ಅರ್ಪಿಸಿದ್ದಾರೆ.

 

Share This Article
error: Content is protected !!
";