ದೈವ ಕೃಪೆ, ಮಾನವ ಪ್ರಯತ್ನದಿಂದಾಗಿ ಗಂಗಾವತರಣ: ತರಳಬಾಳು ಶ್ರೀ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತರಿಗೆ ಬಹುಮುಖ್ಯವಾಗಿ ಬೇಕಾಗಿರುವ ನೀರಿನ ಅವಶ್ಯಕತೆಯನ್ನು ಸರಿಯಾದ ಸಮಯದಲ್ಲಿ ಮನಗಂಡು, ಹಲವು ವರ್ಷಗಳಾದರೂ ಮನಸ್ಸಿಗೆ ಸಮಾಧಾನ ತರುವಂತಹ ಮಳೆಯನ್ನೇ ಕಾಣದ ಅನೇಕ ಊರಿನ ಜನರಿಗೆ, ಆ ಊರುಗಳಲ್ಲಿನ ಕೆರೆಗಳಿಗೆ ಒಂದು ಕಡೆ ಪರಮಪೂಜ್ಯರು ಏತನೀರಾವರಿ ಯೋಜನೆಗಳ ತ್ವರಿತ ಗತಿಯಲ್ಲಿ ಅನುಷ್ಠಾನ ಆಗುವಂತೆ ಮಾಡಿ ನೀರು ಉಣಿಸಿದರೆ; ಮತ್ತೊಂದು ಕಡೆಗೆ ವರುಣ ಕೃಪೆಯಿಂದ ಆ ಕೆರೆಗಳು ಮೈದುಂಬಿ ಹರಿಯುತ್ತಿವೆ. ಪೂಜ್ಯರ ಪರಿಶ್ರಮದ ಜೊತೆಜೊತೆಗೆ ದೇವರ ಅನುಗ್ರಹ ಕೂಡಾ ಜೊತೆಯಾದರೆ ಎಂತಹ ಸಾಮಾಜಿಕ ಪರಿವರ್ತನೆ ಆಗಬಹುದು ಎನ್ನುವುದಕ್ಕೆ ಈ ಎಲ್ಲಾ ಬೆಳವಣಿಗೆಗಳು ನಿದರ್ಶನ.

ಪೂಜ್ಯರ ಋಣವನ್ನು ಮತ್ತು ದೇವರ ಅನುಗ್ರಹದ ಭಾರವನ್ನು ಜನರು ಸೂಕ್ಷ್ಮಮತಿಗಳಾಗಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತೀರಿಸಬೇಕು. ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ 1,108 ಶ್ರೀ ಗುರುಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ರೈತರು ಅಭಿನಂದಿಸಿದ್ದಾರೆ.

ಈ ಕೆರೆಕಟ್ಟೆಗಳನ್ನು ತುಂಬಿಸುವ ಕಾರ್ಯಕ್ರಮಕ್ಕೆ ಸ್ಪಂದಿಸಿದ ಎಲ್ಲಾ ರಾಜಕಾರಣಿಗಳಿಗೂ ಹಾಗೂ ಅಧಿಕಾರಿಗಳಿಗೂ ಮತ್ತು ಹಿರಿಯರಿಗೂ ಧನ್ಯವಾದಗಳನ್ನು ರೈತರು ತಿಳಿಸಿದ್ದಾರೆ.

ಗುರುಗಳ ಕಡೆಯಿಂದ ಸಮಾಜಮುಖಿ ಕಾರ್ಯಕ್ರಮಗಳು ಸಾಕಷ್ಟು ಆಗಿವೆ ಮತ್ತು ಆಗುತ್ತಲೇ ಇರುತ್ತವೆ. ಇಂತಹ ಮಠ ಹಾಗೂ ಗುರುಗಳನ್ನು ಪಡೆದ ನಾವುಗಳೆ ಧನ್ಯರು ಎಂದು ಹೇಳುತ್ತಾ ಇಂತಹ ಅನೇಕ ಕಾರ್ಯಕ್ರಮಗಳಿಗೆ ಎಲ್ಲರೂ ಒಂದಾಗಿ ಕೈಜೋಡಿಸಬೇಕೆಂದು ಪ್ರಾರ್ಥಿಸುವುದಾಗಿ ರೈತರು ಮನವಿ ಮಾಡಿದ್ದಾರೆ.

ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲಿಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ.

ಮೇಲಿನ ವಚನದಂತೆ, ಕೆರೆಗಳಿಗೆ ನೀರು ತರುವುದರ ಹಿಂದೆ ತಮ್ಮದೇ ಪ್ರಯತ್ನ ಇದ್ದರೂ, ಗುರುಗಳು ದೈವದ ಮೇಲೆ ಹಾಕಿದ್ದಾರೆ. ದೈವ ಕೃಪೆಯಿಂದ ಆಗಿದೆ ಎಂದು ಹೇಳಿದ್ದಾರೆ.

ಮಾಡುವ ಕೆಲಸದಲ್ಲಿ ಮಾನವನ ಪ್ರಯತ್ನ ಶೇ.99 ರಷ್ಟು ಇಟ್ಟುಕೊಂಡು ಶೇ.1 ರಷ್ಟನ್ನು ದೈವ ಕೃಪೆಗೆ ಬಿಡಬೇಕು. ಅಂದರೆ ಮಾಡುವ ಕೆಲಸದಲ್ಲಿ ನಾವು ಮುಂದೆ ಇದ್ದರೆ ದೈವವನ್ನು ಹಿಂದೆ ಇಟ್ಟುಕೊಂಡು ಮುನ್ನುಗ್ಗಬೇಕು. ಆಗ ದೈವ ಹಿಂದಿನಿಂದ ಸಹಾಯ ಮಾಡುತ್ತದೆ. ಆದರೆ ಈಗಿನ ಜನರು ದೈವದ ಮೇಲೆಯೇ 99ರಷ್ಟು ಭಾರ ಹಾಕಿ 1ರಷ್ಟು ಪ್ರಯತ್ನ ಮಾಡುತ್ತಾರೆ. ಅಂದರೆ ದೈವವನ್ನೇ ಮುಂದೆ ಬಿಟ್ಟು ತಾವು ಹಿಂದಿನಿಂದ ಪ್ರಯತ್ನ ಮಾಡುತ್ತಾರೆ. ಅಂತವರ ಕೆಲಸ ಆಗಲ್ಲ. ಆಗ ದೈವವನ್ನು ದೂರುತ್ತಾರೆ.

ಆದರೆ ಇಲ್ಲಿ ಗುರುಗಳು ಆಸಕ್ತಿ ವಹಿಸಿ ಕೆಲಸ ಆಗುವ ಹಾಗೆ ನೋಡಿಕೊಂಡಿದ್ದರೂ ಎಲ್ಲವನ್ನೂ ದೈವ ಕೃಪೆ ಎಂದು ಹೇಳಿದ್ದಾರೆ. ಇದು ಗುರುಗಳ ದೊಡ್ಡ ಗುಣ ಎಂದು ರೈತರು ಸ್ಮರಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";