ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಮಹಾನಗರದ ಪಕ್ಷದ ಹಿರಿಯ ಶಾಸಕರ ಸಭೆ ನಡೆಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ರಾಜಧಾನಿಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿ ಅಭಿವೃದ್ಧಿಗೆ ಮಾರಕವಾಗುವ ಅವೈಜ್ಞಾನಿಕ ನಿರ್ಧಾರಗಳನ್ನು ಕೈಗೊಂಡು ಜನಾಕ್ರೋಶ ಎದುರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯನ್ನು 5 ಭಾಗಗಳನ್ನಾಗಿ ವಿಭಜನೆ ಮಾಡಲು ಹೊರಟಿರುವ ಜನಕಂಠಕ ನಿರ್ಧಾರಗಳೂ ಸೇರಿದಂತೆ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು ಎಂದು ವಿಜಯೇಂದ್ರ ತಿಳಿಸಿದರು.
ಸದ್ಯದಲ್ಲೇ ಆರಂಭವಾಗಲಿರುವ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದು ಬೆಂಗಳೂರಿನ ಜನರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಸುವ ಕುರಿತು ಚರ್ಚಿಸಲಾಯಿತು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ್ ಎಂ.ಕಾರಜೋಳ, ಡಾ.ಅಶ್ವತ್ ನಾರಾಯಣ್, ಮಾಜಿ ಸಚಿವ ಕೆ.ಗೋಪಾಲಯ್ಯ, ಶಾಸಕ ಮುನಿರತ್ನ, ಶಾಸಕರಾದ ಎಂ ಕೃಷ್ಣಪ್ಪ, ಎಸ್.ಆರ್.ವಿಶ್ವನಾಥ್, ಬಿ.ಜಿ ಉದಯ್, ಎಸ್.ಮುನಿರಾಜು, ರವಿ ಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ, ಜಿಲ್ಲಾಧ್ಯಕ್ಷ ಎಸ್.ಹರೀಶ್, ಸಪ್ತಗಿರಿ ಗೌಡ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

