ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ‘ಜನಾಕ್ರೋಶ ಯಾತ್ರೆ‘ಯನ್ನು ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಸದುದ್ದೇಶ ಈ ಯಾತ್ರೆಗಿಲ್ಲ. ವಿಜಯೇಂದ್ರ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರದ್ದು ಮಾತ್ರವಲ್ಲ ರಾಜ್ಯದ ಜನತೆಯ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಪೇಮೆಂಟ್ ಸೀಟ್ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಪಕ್ಷದೊಳಗೆ ತಮ್ಮ ವಿರುದ್ಧ ಹುಟ್ಟಿಕೊಂಡಿರುವ ಅಪಸ್ವರಗಳನ್ನು ಹತ್ತಿಕ್ಕಲು ಜನಾಕ್ರೋಶ ಯಾತ್ರೆ ಎಂಬ ಬೀದಿನಾಟಕ ಆರಂಭಿಸಿದ್ದಾರೆ.
ಇದು ನಮ್ಮ ಸರ್ಕಾರದ ವಿರುದ್ಧದ ಹೋರಾಟವಲ್ಲ, ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ರಾಜ್ಯದ ಬಿಜೆಪಿ ನಾಯಕರು ಇತ್ತ ಜನಾಕ್ರೋಶ ಯಾತ್ರೆ ಎಂಬ ಬೀದಿ ನಾಟಕಕ್ಕೆ ಸಿದ್ಧಗೊಳ್ಳುವ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪೆಟ್ರೋಲ್, ಡೀಸೆಲ್‌ಮತ್ತು ಗ್ಯಾಸ್ ಬೆಲೆ ಹೆಚ್ಚಳ ಮಾಡಿ ತಪರಾಕಿ ಬಾರಿಸಿದ್ದಾರೆ.
ಒಂದು ವೇಳೆ ಈಗ ಬಿಜೆಪಿಯವರೇನಾದರೂ ಬೆಲೆಯೇರಿಕೆ ವಿಷಯ ಹಿಡಿದು ಜನರ ಮನೆಬಾಗಿಲಿಗೆ ಹೋದರೆ ಅವರ ಆಕ್ರೋಶಕ್ಕೆ ಗುರಿಯಾಗಿ ಪಾದಯಾತ್ರೆ ಅರ್ಧಕ್ಕೆ ಬಿಟ್ಟು ಓಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.