ರಾಜ್ಯಪಾಲರು ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಲಿ-ಬಿವೈವಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಕರ್ನಾಟಕವನ್ನು ಗೊಂದಲದ ಗೂಡನ್ನಾಗಿಸಲು ಪಣತೊಟ್ಟಂತೆ ವರ್ತಿಸುತ್ತಿರುವ ಸಚಿವ ಜಮೀರ್ ಅಹಮದ್ ಖಾನ್ ಇದೀಗ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ಭರದಲ್ಲಿ ಸಂಸ್ಕೃತಿ ಹೀನರಂತೆ ವರ್ತಿಸಿದ್ದಾರೆ.

ನಾಗರಿಕ ಪರಿಭಾಷೆಯ ಪರಿಚಯವೇ ಇಲ್ಲದಂತೆ ಮಾತನಾಡುವ ಜಮೀರ್ ಅವರ ವರ್ತನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಚನ್ನಪಟ್ಟಣದಲ್ಲಿ ಭಾಷಣ ಮಾಡುವ ವೇಳೆ ಅವರು ಬಳಸಿರುವ ಪದಪುಂಜಗಳು ಪುಟ್ ಪಾತ್ ಪೋಕರಿಗಳೂ ನಾಚಿಸುವಂತಿದೆ. ಇಂಥವರನ್ನು ಸಚಿವರನ್ನಾಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಇತ್ತೀಚೆಗೆ ತಮ್ಮ ಹತಾಶೆಯ ಮನಸ್ಥಿತಿಯಿಂದ ಭಂಡ ಸಮರ್ಥನೆಗಿಳಿದು ಮಾಧ್ಯಮದವರ ಮೇಲೆ ಎರಗಿ ಬೀಳುತ್ತಿದ್ದಾರೆ.

ಜಮೀರ್ ಅಹಮದ್ ರವರು ಮುಸಲ್ಮಾನರನ್ನು ಎತ್ತಿ ಕಟ್ಟುವುದು, ಸಮಾಜದಲ್ಲಿ ವಿದ್ವಾಂಸಕ ಸ್ಥಿತಿ ನಿರ್ಮಾಣ ಮಾಡುವುದು ತಮ್ಮ ಗುರಿ ಎಂದು ಭಾವಿಸಿದಂತಿದೆ. ಇಂತಹ ವರ್ತನೆಗಳನ್ನು ಕಾಂಗ್ರೆಸ್ ಪಕ್ಷ ಕೂಡ ವ್ಯವಸ್ಥಿತವಾಗಿ ನೀರೆರೆದು ಪೋಷಿಸುತ್ತಿದೆ ಎಂದು ಅವರು ಹರಿಹಾಯ್ದಿದ್ದಾರೆ.

ಚನ್ನಪಟ್ಟಣದ ಮತದಾರರು ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಹೀನಾಯವಾಗಿ ಸೋಲಿಸುವ ಮೂಲಕ ಬುದ್ಧಿ ಕಲಿಸಲು ಸಂಕಲ್ಪ ತೊಟ್ಟಿದ್ದಾರೆ. ಈಗಾಗಲೇ ಜಮೀರ್ ಅಹಮದ್ ಅವರ ವಿರುದ್ಧ ವರಿಷ್ಠರಿಗೆ ದೂರು ಸಲ್ಲಿಸಿರುವ ಕಾಂಗ್ರೆಸ್ನ ಹಲವಾರು ಶಾಸಕರು ಉಪಚುನಾವಣೆ ಮುಗಿಯುವುದಷ್ಟನ್ನೇ ಕಾಯುತ್ತಿದ್ದಾರೆ,

ಜನ ಬುದ್ಧಿ ಕಲಿಸುವ ಮುನ್ನವೇ ಕಾಂಗ್ರೆಸ್ಜಮೀರ್ ಅಹಮದ್ ರಂತಹ ಮನಸ್ಥಿತಿ ಇರುವ ವ್ಯಕ್ತಿಗಳ ಭಾರಕ್ಕೆ ತನ್ನಷ್ಟಕ್ಕೆ ತಾನೆ ಕುಸಿದು ನೆಲಕಚ್ಚಲಿದೆ.

ತುಷ್ಟೀಕರಣ ರಾಜಕಾರಣ ಒಂದೇ ತಮ್ಮ ಬ್ರಹ್ಮಾಸ್ತ್ರ ಎಂದು ತಿಳಿದಿರುವ ಕಾಂಗ್ರೆಸ್ ಪಕ್ಷದ ಅಮಲು ಇಳಿಸುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಉಪಚುನಾವಣೆಗಳ ಫಲಿತಾಂಶ ಅದಕ್ಕೆ ಮುನ್ನುಡಿ ಬರೆಯಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಸಚಿವ ಸ್ಥಾನದ ಘನತೆಗೆ ತುಕ್ಕು ಹಿಡಿಸುತ್ತಿರುವ ಜಮೀರ್ ಅಹ್ಮದ್ ರವರನ್ನು ರಾಜ್ಯಪಾಲರು ಸಂಪುಟದಿಂದ ವಜಾಗೊಳಿಸಲೆಂದು ಅವರು ಒತ್ತಾಯಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";