ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಹಕರ ಮನೆಯಲ್ಲಿ 25 ಲಕ್ಷ ಮೌಲ್ಯದ ಚಿನ್ನಾಭರಣ ದೊಚ್ಚಿದ್ದ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಯಾಬ್ ಚಾಲಕ ಅಬ್ದುಲ್ ರೆಹಮಾನ್ ಬಂಧಿತ ಆರೋಪಿ. ಚಿನ್ನಾಭರಣ ಸಮೇತ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಫೆಬ್ರವರಿ 11 ಶಾಪಿಂಗ್ಗೆ ಮುಂಬೈಗೆ ಹೊರಟಿದ್ದ ದಂಪತಿ, ಹೆಬ್ಬಾಳದಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಸೈಯದ್ ಸಲ್ಮಾನ್ ಪತ್ನಿಗೆ ಮನೆಯಲ್ಲಿ ಚಿನ್ನಾಭರಣ ಇರುವ ಕಪಾಟು ಲಾಕ್ ಮಾಡಿದ್ದೀಯಾ ಎಂದು ಕೇಳಿದ್ದರು. ಮಾರ್ಗ ಮಧ್ಯೆ ಮೂರು ದಿನಗಳ ಕಾಲ ಮನೆಗೆ ವಾಪಾಸ್ ಬರಲ್ಲ ಎಂದು ಇವರು ಮಾತಾಡಿದ್ದನ್ನೂ ಸಹ ಆರೋಪಿ ಕೇಳಿಸಿಕೊಂಡಿದ್ದ.
ಸೈಯದ್ ಕುಟುಂಬವನ್ನು ಯಶವಂತಪುರಕ್ಕೆ ಡ್ರಾಪ್ ಮಾಡಿ ಹೆಬ್ಬಾಳಕ್ಕೆ ಬಂದಿದ್ದ ಅಬ್ದುಲ್ ರೆಹಮಾನ್, ಸೈಯದ್ ಸಲ್ಮಾನ್ ಮನೆಯಲ್ಲಿ ಕಳ್ಳತನ ನಡೆಸಿದ್ದ. ಈ ಸಂಬಂಧ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಕ್ಯಾಬ್ ಚಾಲಕ ಬಂದಿರೋದು ಪತ್ತೆಯಾಗಿದ್ದು, ಆತನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಈತ ಈ ಹಿಂದೆಯೂ ಇದೇ ರಿತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

