ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವು ತೀರ್ಮಾನ ಮಾಡಲಾಗಿದೆ.
ಸಂಪುಟ ಪುನಾರಚನೆ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ವಿವಿ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದ್ದು, ರಾಜ್ಯಪಾಲರ ಅಧಿಕಾರ ಹಿಂಪಡೆದ ಸಚಿವ ಸಂಪುಟವು ರಾಜ್ಯಪಾಲರ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಅನುಮೋದಿಸಿದೆ. ಇಷ್ಟು ದಿನ ರಾಜ್ಯಪಾಲರು ಚಾನ್ಸಲರ್ ಆಗಿದ್ದರು. ಇನ್ಮುಂದೆ ಮುಖ್ಯಮಂತ್ರಿ ಚಾನ್ಸಲರ್ ಆಗಲಿದ್ದಾರೆ. ಆ ಮೂಲಕ ರಾಜ್ಯಪಾಲರ ಬಳಿ ಇದ್ದ ಅಧಿಕಾರವನ್ನು ಹಿಂಪಡೆದು ಸಿಎಂಗೆ ನೀಡಲಾಗಿದೆ.
ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಕೆ.ಪಾಟೀಲ್, ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ನಿಷ್ಕ್ರಿಯ ಕೊಳವೆ ಬಾವಿ ಮುಚ್ಚುವುದು ಕಡ್ಡಾಯ. ಮುಚ್ಚದಿದ್ದರೆ ಶಿಕ್ಷೆ ಹಾಗೂ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶವಿದೆ. ಚಾಣಕ್ಯ ವಿವಿ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದಿಸಿದ್ದು, ಸರ್ಕಾರಿ ಅಧಿಕಾರಿ ಉಸ್ತುವಾರಿ ನೇಮಕಕ್ಕೆ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಬಿಬಿಎಂಪಿ 2ನೇ ತಿದ್ದುಪಡಿ ವಿಧೇಯಕ, ಪ್ರವಾಸೋದ್ಯಮ ರೋಪ್‌ವೇಸ್ ವಿಧೇಯಕ ಮತ್ತು ಕರ್ನಾಟಕ ಸರಕು ಮತ್ತು ಸೇವೆಗಳ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ಮುಂಬರುವ ಅಧಿವೇಶದಲ್ಲಿ 9 ಮಸೂದೆಗಳನ್ನು ಮಂಡಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ-2024, ಕಲ್ಯಾಣ ನಿಧಿ ಸಂಗ್ರಹದ ಮೊತ್ತ ಏರಿಸಲು ವಿಧೇಯಕದಲ್ಲಿ ತಿದ್ದುಪಡಿ ಮಾಡಲಾಗಿದೆ. ಕಾರ್ಮಿಕರಿಂದ 20, ಮಾಲೀಕರಿಂದ 40, ಸರ್ಕಾರದಿಂದ 20 ರೂ. ಬದಲು, 50-100-50 ರೂಪಾಯಿಗಳ ಸಂಗ್ರಹಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. 42 ಕೋಟಿ ರೂ. ವಂತಿಗೆ ಸಂಗ್ರಹ ಆಗುತ್ತಿತ್ತು, ಇದರ ಪ್ರಮಾಣ ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ನ ಕಾರ್ಯಾಚರಣೆ ನಿರ್ವಹಣೆ ದುರಸ್ಥತಿ ನವೀಕರಣ ಇವೆಲ್ಲವನ್ನು ಪಾರಂಪರಿಕ ಕಟ್ಟಡ ಸಂರಕ್ಷಸಿ ಹೆರಿಟೇಜ್ ಮಾನದಂಡ ಪ್ರಕಾರ ಮಾಡಲು ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.