ಕಬ್ಬಿನ ದರ ನಿಗದಿ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರತಿ ಟನ್ ಕಬ್ಬಿಗೆ ಎಷ್ಟು ದರ ನಿಗದಿ ಮಾಡಬೇಕು ಎನ್ನುವ ವಿಚಾರ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದ್ದು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ಧಾರೆ.

ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ರೈತರು 3,500 ರೂಪಾಯಿ ನೀಡಬೇಕು ಎಂದು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹೋರಾಟ ನಡೆಸುತ್ತಿದ್ದು ಹೋರಾಟ ತೀವ್ರಗೊಂಡಿದೆ. ಆಯಾ ಜಿಲ್ಲೆಗಳ ಬಹುತೇಕ ಎಲ್ಲ ತಾಲೂಕುಗಳಲ್ಲಿ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ.

- Advertisement - 

ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಸಕ್ಕರೆ ಸಚಿವರು ಸೇರಿದಂತೆ ಆ ಭಾಗದ ಸಚಿವರು ಕೂಡ ಚರ್ಚೆ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಅಂತಿಮ ನಿರ್ಧಾರ ಕೈಗೊಂಡರೂ ಕೇಂದ್ರ ಸರ್ಕಾರವೇ ಕಬ್ಬಿನ ದರ ನಿಗದಿಪಡಿಸಬೇಕಿದೆ ಎಂದು ಸಚಿವರು ತಿಳಿಸಿದರು.

ರೈತರ ಹೋರಾಟಕ್ಕೆ ಮೊದಲ ಬಾರಿಗೆ ಶಾಸಕರಾಗಿರುವ ಬಿ.ವೈ.ವಿಜಯೇಂದ್ರ ಬೆಂಬಲ ನೀಡಿದ್ಧಾರೆ. ಅವರಿಗೆ ಮಾಹಿತಿ ಕೊರತೆ ಇದೆ. ಈ ಹಿಂದೆ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರ್.ಅಶೋಕ್​ಗೆ ಗೊತ್ತಿಲ್ಲವೇ? ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಬ್ಬು ಬೆಳೆಗಾರರಿಗೆ ಎಷ್ಟು ಪರಿಹಾರ ಕೊಟ್ಟರು? ಎಂಬುದನ್ನು ಪ್ರಶ್ನಿಸಬೇಕಿದೆ ಎಂದು ತಿಳಿಸಿದರು.

- Advertisement - 

5 ಲಕ್ಷ ರೂ ಪರಿಹಾರ:
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಕೆ.ಆರ್.ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಮಂಜೇಗೌಡ (55) ಅವರ ಕುಟುಂಬಕ್ಕೆ ಸಚಿವರು 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ನಗರದ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ತೆರಳಿದ ಮೃತ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಹೆಚ್ಚುವರಿ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದರು.

ಮತಗಳ್ಳತನವಾಗಿದೆ ಎಂದು ಕೇಂದ್ರ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಮತಗಳ್ಳತನವಾಗಿರುವುದು ಸತ್ಯವಲ್ಲವೇ? ಕೇಂದ್ರ ಚುನಾವಣಾ ಆಯೋಗವು ಹೊಸ ಪಟ್ಟಿ ಬಿಡುಗಡೆ ಮಾಡಲು ಹೊರಟಿದೆ. ಇದರರ್ಥ ಏನೋ ತಪ್ಪಾಗಿದೆ ಅಂಥಲ್ಲವೇ? ಇದರ ವಿರುದ್ಧ ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತೇನೆ ಎಂದರು.

 

Share This Article
error: Content is protected !!
";