ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ

News Desk

ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಎಐಸಿಸಿ ಮುಂದೆ ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾವನೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

- Advertisement - 

ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ನವದೆಹಲಿಯಲ್ಲಿ ತಮ್ಮನ್ನು ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಕರ್ನಾಟಕದಲ್ಲಿನ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಖರ್ಗೆ ಅವರು ತಿಳಿಸಿದರು.

- Advertisement - 

ಜಾತಿ ಸಮೀಕ್ಷೆ ಚರ್ಚೆ:
ಆರ್ ಸಿಬಿ ವಿಜಯೋತ್ಸವ ಸಂದರ್ಭದಲ್ಲಿನ ಕಾಲ್ತುಳಿತ ಹಾಗೂ ಜಾತಿ ಸಮೀಕ್ಷೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಕಾಲ್ತುಳಿತದ ಘಟನೆ ಕಾಂಗ್ರೆಸ್ ಸೇರಿದಂತೆ ಎಲ್ಲರನ್ನೂ ಆಘಾತಕ್ಕೀಡುಮಾಡಿದೆ. ಇಂತಹ ಘಟನೆಗಳು ನಡೆಯದಂತೆ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೂಚಿಸಿದ್ದೇವೆ. ಪೊಲೀಸ್ ಅಧಿಕಾರಿಗಳ ಅಮಾನತು, ಮ್ಯಾಜಿಸ್ಟ್ರೇಟ್ ತನಿಖೆ ಮತ್ತು ನ್ಯಾಯಾಂಗ ತನಿಖೆಗೆ ಆದೇಶ ಮತ್ತು ನೊಂದವರಿಗೆ ಪರಿಹಾರ ಮತ್ತಿತರ ಕ್ರಮಗಳ ಬಗ್ಗೆ ಸಿಎಂ ಮತ್ತು ಉಪ ಮುಖ್ಯಮಂತ್ರಿ ವಿವರಿಸಿದ್ದಾರೆ ಎಂದು ಖರ್ಗೆ ಅವರು ತಿಳಿಸಿದರು.

ಕಾಲ್ತುಳಿತದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯ ಬೇಡಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಪ್ರಯಾಗ್‌ರಾಜ್ ಕುಂಭಮೇಳದ ವೇಳೆ ಕಾಲ್ತುಳಿತ ಸಂಭವಿಸಿದಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಿದ್ರಾ?, ಕುಂಭಮೇಳದಲ್ಲಿ ಕಾಲ್ತುಳಿತದ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಅವರು ನನ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಖರ್ಗೆ ಹೇಳಿದರು.

- Advertisement - 

ಮರು ಸಮೀಕ್ಷೆ:
ಜಾತಿ ಗಣತಿ ಮರು ಸಮೀಕ್ಷೆ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ
, 10 ವರ್ಷಗಳ ಹಿಂದೆ ಸಮೀಕ್ಷೆ ನಡೆಸಲಾಗಿತ್ತು. ವಿವಿಧ ಸಮುದಾಯಗಳ ಅನೇಕ ಮುಖಂಡರು, ಪ್ರತಿನಿಧಿಗಳು ಮರು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಕಾಂತರಾಜ್ ಆಯೋಗ ನೀಡಿರುವ ಸಮೀಕ್ಷಾ ವರದಿಯನ್ನು ತಿರಸ್ಕರಿಸದೆ ಮರು ಸಮೀಕ್ಷೆ ನಡೆಸುವಂತೆ ಸಿಎಂ ಹಾಗೂ ಡಿಸಿಎಂಗೆ ಸೂಚಿಸಿದ್ದೇವೆ ಎಂದು ಖರ್ಗೆ ಹೇಳಿದರು.

ಒಬಿಸಿ ಸೇರಿದಂತೆ ಹಿಂದಿನ ಸಮೀಕ್ಷೆಯಲ್ಲಿ ಸೇರಿಸದ ಜಾತಿಗಳು ಮತ್ತು ಉಪ-ಜಾತಿಗಳನ್ನು ಸೇರಿಸಲು ಮರು ಸಮೀಕ್ಷೆ ಮಾಡಲಾಗುತ್ತದೆ. ಸಮೀಕ್ಷೆ ನಡೆಸುವ ಜನರು ಮನೆ ಮನೆಗೆ ಭೇಟಿ ನೀಡುತ್ತಾರೆ. ಹೊಸ ಮಾಹಿತಿ ಸೇರಿಸಲಾಗುವುದು ಎಂದು ಹೇಳಿದರು.

ಇಡಿ ದಾಳಿ:
ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮನೆ ಸೇರಿದಂತೆ ಇತರರ ಮೇಲೆ ಇಡಿ ದಾಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ಖರ್ಗೆ
, ಹಲವು ವರ್ಷಗಳಿಂದ ಇಡಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಂಸದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದಾಳಿ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಒಡೆಯುವುದು ಎನ್‌ಡಿಎ ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರುವುದರಿಂದ ಅದು ಸಾಧ್ಯವಿಲ್ಲ. ಚುನಾವಣಾ ಸಮಯದಲ್ಲಿ ಇಡಿ ಹಲವು ರಾಜಕೀಯ ಪಕ್ಷಗಳ ಮುಖಂಡರ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ವಶಪಡಿಸಿಕೊಂಡ ಹಣ ಎಲ್ಲಿ ಹೋಗಿದೆ ಎಂಬುದು ನಮಗೆ ತಿಳಿದಿಲ್ಲ ಎಂದು ಖರ್ಗೆ ಟೀಕಿಸಿದರು.

 

Share This Article
error: Content is protected !!
";