ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಪುಟ ಪುನಾರಚನೆ ಸುದ್ದಿ ಹರಡುತ್ತಿರುವ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಎದ್ದಿರುವ ಸುದ್ದಿಗೆ ಮಾಜಿ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯೆ ನೀಡಿ ಮಾತನಾಡಿ, ಪಕ್ಷದ ಹೈಕಮಾಂಡ್ ನಿರ್ಧಾರವೇ ಎಲ್ಲದಕ್ಕೂ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ, ಶಾಸಕರು, ಮಂತ್ರಿಮಂಡಲದ ಸದಸ್ಯರು ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಪ್ರತಿಯೊಬ್ಬರಿಗೂ ಹೈಕಮಾಂಡ್ ನಿರ್ಧಾರವೇ ಅನ್ವಯಿಸುತ್ತದೆ ಎಂದು ಸುರೇಶ್ ಮಾರ್ಮಿಕವಾಗಿ ತಿಳಿಸಿದ್ದಾರೆ.
ಹಿಂದೆ ಮುಖ್ಯಮಂತ್ರಿ ಕುರ್ಚಿಗೆ ಸ್ಪರ್ಧಿಸಿದ್ದವರು ಈಗ ಹಿಂದೆ ಸರಿದಿದ್ದಾರೆ. ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು.
ಸಚಿವ ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಹೈಕಮಾಂಡ್ ಅಪ್ಪಣೆ ಪಡೆದು ಅವರು ಕಾರ್ಯನಿರ್ವಹಿಸುತ್ತಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪಕ್ಷದ ಸಂಘಟನೆಗೆ ಅಗತ್ಯ ಸಲಹೆಗಳನ್ನು ಹೈಕಮಾಂಡ್‌ಗೆ ನೀಡುತ್ತಾರೆ ಎಂದು ಹೇಳಿದರು.

