ಸಂಪುಟ ಪುನರ್​​​​ ರಚನೆಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಚರ್ಚೆ ಅಗತ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಸಂಪುಟ ಪುನರ್​​​​ ರಚನೆ ಬಗ್ಗೆ ಬೆಂಗಳೂರು ಮತ್ತು ದೆಹಲಿ ಮಟ್ಟದಲ್ಲಿ ಚರ್ಚೆ ಆಗಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಪುಟ ಬದಲಾದರೆ ಹಳಬರು ಹೋಗಿ, ಹೊಸ ಸಚಿವರು ಬಂದೇ ಬರುತ್ತಾರೆ. ಈ ಮುಂಚೆಯೇ 30 ತಿಂಗಳ ಬಳಿಕ ಮಾಡಬೇಕು ಅಂತಾ ಚರ್ಚೆ ನಡೆಯುತ್ತಿತ್ತು. ಈಗ ಅದು ಬಹುಶಃ ಅಂತಿಮ‌ಹಂತಕ್ಕೆ ಬಂದಿರಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚ್ಯವಾಗಿ ಹೇಳಿದರು.

- Advertisement - 

ಬೆಳಗಾವಿ ಜಿಲ್ಲೆಯಿಂದ ಯಾರಿಗೆ ಸಚಿವ ಸ್ಥಾನ ಕೊಡುತ್ತಾರೆ. ಸಂಪುಟದಿಂದ ಯಾರನ್ನು ಕೈ ಬಿಡುತ್ತಾರೆ ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಹಿರಿಯ ಸಚಿವರು ತಮ್ಮ ಸ್ಥಾನ ಬಿಟ್ಟು ಕೊಡುವ ಬಗ್ಗೆ ದೆಹಲಿಯಲ್ಲಿ ಹೈಕಮಾಂಡ್ ಹಂತದಲ್ಲಿ ಚರ್ಚೆ ಆಗಿರಬಹುದು. ಆದರೆ, ನಮ್ಮ ಹಂತದಲ್ಲಿ ಯಾವುದೇ ಮಾತುಕತೆ ಆಗಿಲ್ಲ. ಹಾಗಾಗಿ, ಅದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವರು ತಿಳಿಸಿದರು.

ಹೈಕಮಾಂಡ್​ ಹೇಳಿದರೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂಬ ಸಚಿವ ಕೃಷ್ಣಭೈರೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಪಾಲನೆ ಮಾಡಬೇಕಾಗುತ್ತದೆ. ಸಂಪುಟದಿಂದ ಕೈ ಬಿಟ್ಟವರು ಪಕ್ಷದ ಕೆಲಸಕ್ಕೆ ಹೋಗಲೇಬೇಕಾಗುತ್ತದೆ. ಮಂತ್ರಿ ಆಗಿ ಉಳಿದವರು ಪಕ್ಷದ ಕೆಲಸ ಮಾಡಬೇಕಾಗುತ್ತದೆ ಎಂದು ಸತೀಶ್ ಹೇಳಿದರು.

- Advertisement - 

ಯಾವ ಮಾನದಂಡದ ಆಧಾರದ ಮೇಲೆ ಸಚಿವರನ್ನು ಕೈ ಬಿಡುತ್ತಾರೋ ಅದು ನನಗೆ ಗೊತ್ತಿಲ್ಲ. ಮಾನದಂಡ ವಿಧಿಸುವವರು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಎಂದು ತಿಳಿಸಿದರು.

ನಿಮಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಚರ್ಚೆ ಆಗಿದೆಯಾ ಎಂಬ ಪ್ರಶ್ನೆಗೆ ಸತೀಶ್ ಜಾರಕಿಹೊಳಿ, ಇದಕ್ಕೆ ನನ್ನ ಬಳಿ ಉತ್ತರ ಇಲ್ಲ. ಪಕ್ಷ ಸಂಘಟನೆಯಲ್ಲಿ ನಾನು ತೊಡಗಬೇಕು ಎಂಬ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ ಎಂದರು.

ಸಂಪುಟ ಪುನರ್ ರಚನೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಸಂಪುಟ ಪುನರ್ ರಚನೆ ಸರ್ಕಾರಕ್ಕೆ ಎಷ್ಟರಮಟ್ಟಿಗೆ ಅನೂಕೂಲ ಆಗಬಹುದು ಎಂಬುದಕ್ಕೆ ಮುಂಚೆಯೇ ಈ ಚರ್ಚೆ ಕೇಳಿ ಬರುತ್ತಿತ್ತು. ನಾವು ಅರ್ಧ ಮಾಡಬೇಕು. ನೀವು ಅರ್ಧ ಮಾಡಬೇಕು ಅಂತಾ.

ಆ ಪಾಲಿಸಿಯಲ್ಲಿ ಮಾಡಬಹುದು. ಬೆಳಗಾವಿ ಜಿಲ್ಲೆಯಿಂದ ಯಾರೆಲ್ಲಾ ಮಂತ್ರಿ ಆಗಬಹುದು ಎಂಬುದಕ್ಕೆ ನಮ್ಮಲ್ಲಿ ನಾಲ್ಕು, ಐದು ಬಾರಿ ಶಾಸಕರಾದ ಹಿರಿಯರು ಬಹಳಷ್ಟು ಜನರಿದ್ದಾರೆ. ಹೈಕಮಾಂಡ್ ಯಾವ ರೀತಿ ನಿರ್ಧಾರ ಮಾಡುತ್ತದೆ ಎಂಬುದು ಅವರಿಗೆ ಬಿಟ್ಟಿದ್ದು. ನಾವು ಇವರೇ ಆಗುತ್ತಾರೆ ಅಂತಾ ಹೇಳುವುದು ಕಷ್ಟ ಆಗುತ್ತದೆ ಎಂದು ತಿಳಿಸಿದರು.

ಹಿಂದೆ ಬೆಳಗಾವಿ ಜಿಲ್ಲೆಯ ಐವರು ಸಚಿವರಿದ್ದರು ಎಂಬ ಮಾಧ್ಯಮಗಳ ಪ್ರಶ್ನೆಗೆ, ಆಗ ಯಾವುದೇ ನಿರ್ಬಂಧ ಇರಲಿಲ್ಲ. ಈಗ 34ಕ್ಕಿಂತ ಹೆಚ್ಚು ಸಚಿವರನ್ನು ಮಾಡಲು ಬರುವುದಿಲ್ಲ. ಎಷ್ಟೇ ಹಿರಿತನ ಇದ್ದರೂ ಸಂಪುಟದಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಸತೀಶ್​ ಜಾರಕಿಹೊಳಿ ಅವರು ಸಚಿವ ಸ್ಥಾನ ಸಿಗುವ ಬಗ್ಗೆ ಪರೋಕ್ಷವಾಗಿ ಲಕ್ಷ್ಮಣ ಸವದಿ ಮಾತನಾಡಿರುವುದಕ್ಕೆ ಎಲ್ಲರೂ ಬೇಡಿಕೆ ಇಡುತ್ತಾರೆ. ಯಾಕೆಂದರೆ ನಮ್ಮ ಜಿಲ್ಲೆ ಸೇರಿ ಬೇರೆ ಜಿಲ್ಲೆಗಳಲ್ಲೂ ಹಿರಿಯ ಶಾಸಕರು ಬಹಳಷ್ಟಿದ್ದಾರೆ. ಅಂತಿಮವಾಗಿ ಯಾರಿಗೆ ಲಕ್ಷ್ಮೀ ಒಲಿಯುತ್ತಾಳೆ ಅಂತಾ ನೋಡೋಣ ಎಂದರು.

 

 

Share This Article
error: Content is protected !!
";