ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಳಮೀಸಲಾತಿಗಾಗಿ ಮೂರು ದಶಕಗಳ ಹೋರಾಟ ನಡೆಸಿದ್ದ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಸಂತಸದ ಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿ ಸೀಮಿತಗೊಳಿಸಿ ಜಾತಿಗಣತಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದು ಉತ್ತಮ ನಿರ್ಧಾರವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿನ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಸರ್ಕಾರದ ದಿಟ್ಟ ನಡೆ ಕೈಗೊಂಡಿದ್ದು, ಏಪ್ರಿಲ್, ಮೇ ಈ ಎರಡು ತಿಂಗಳಲ್ಲಿ ಜಾತಿಗಣತಿ ನಡೆಸಿ, ಜೂನ್ ತಿಂಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಕೈಗೊಂಡಿರುವ ನಿರ್ಧಾರ ಸ್ವಾಗತರ್ಹವಾಗಿದೆ ಎಂದಿದ್ದಾರೆ.
30 ವರ್ಷಗಳ ಹೋರಾಟದ ಫಲ, ಒಳಮೀಸಲು ಜಾರಿಗೊಳಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂಬ ಸುಪ್ರೀಂಕೋರ್ಟ್ ತೀರ್ಪು ಬಳಿಕ ಕಾನೂನು ತೊಡಕು ಆಗದ ರೀತಿ ಎಚ್ಚರಿಕೆ ಹೆಜ್ಜೆಯಿಟ್ಟಿದ್ದ ಸಿದ್ದರಾಮಯ್ಯ ಸರ್ಕಾರ, ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಿತ್ತು.
ಆಯೋಗವೂ ಮಧ್ಯಂತರ ವರದಿ ಸಲ್ಲಿಸಿದ್ದು, ನಮ್ಮಗಳ ಕೂಗಿನಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ನಡೆಸಿ, ಎಂಪೋರಿಕಲ್ ದತ್ತಾಂಶ ಪಡೆದು ಜಾರಿಗೊಳಿಸುವುದರಿಂದ ಸುಪ್ರೀಂ ಕೋರ್ಟ್ ಮೇಲ್ಮನವಿ ಸಲ್ಲಿಸುವುದು ಸೇರಿ ಯಾವುದೇ ರೀತಿ ಕಾನೂನು ತೊಡಕು ಎದುರಾಗದು ಎಂಬ ಸಲಹೆ ಮೇರೆಗೆ ತಕ್ಷಣವೇ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಜಾತಿಗಣತಿಗೆ ಒಪ್ಪಿಗೆ ನೀಡಿದೆ. ಈ ಮೂಲಕ ನೊಂದ ಜನರ ಪರವಾಗಿರುವ ಸಿದ್ದರಾಮಯ್ಯ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಒಳಮೀಸಲಾತಿ ಜಾರಿಗೆ ರಾಜ್ಯದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬ ಕೂಗು ಜೋರಾಗಿತ್ತು. ಆದರೆ, ಎಂಪೋರಿಕಲ್ ದತ್ತಾಂಶ ಇಲ್ಲದೆ ಒಳಮೀಸಲಾತಿ ಜಾರಿ ಕಷ್ಟವೆಂಬ ಸತ್ಯ ಅರಿತಿದ್ದ ಸಿದ್ದರಾಮಯ್ಯ, ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚಿಸಿದ್ದರು. ಆದರೆ, ದತ್ತಾಂಶ ಸಂಗ್ರಹ ಸ್ಪಷ್ಟವಾಗಿ ದೊರೆಯದ ಕಾರಣ ಒಳಮೀಸಲಾತಿ ಜಾರಿ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಕಷ್ಟಸಾಧ್ಯವಾಗಿದೆ ಎಂದು ಆಯೋಗ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದೆ.
ಈ ಮಧ್ಯೆ ನಾನು ಸೇರಿದಂತೆ ಮಾದಿಗ ಸಮುದಾಯದ ಅನೇಕ ಮುಖಂಡರು ಯಾವುದೇ ರೀತಿ ಸಮಸ್ಯೆ ಆಗದಂತೆ ಒಳಮೀಸಲಾತಿ ಜಾರಿಗೊಳಿಸಲು ಜಾತಿಗಣತಿ ನಡೆಸಬೇಕು. ರಾಜ್ಯದ ಪ್ರತಿ ಪರಿಶಿಷ್ಟರ ಮನೆಗೆ ಭೇಟಿ ನೀಡಿ, ಜಾತಿ ಮತ್ತು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಜೊತೆಗೆ ಅವರು ಹೊಂದಿರುವ ಭೂಮಿ, ವಾಹನ, ಉದ್ಯೋಗ ಸೇರಿದಂತೆ ಎಲ್ಲ ದಾಖಲೆ ಸಂಗ್ರಹಿಸಬೇಕು. ಇದನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ, ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿತ್ತು.
ನಮ್ಮ ಕೂಗಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ಸರ್ಕಾರ ತಕ್ಷಣ ಜಾತಿಗಣತಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಜತೆಗೆ ಜೂನ್ ತಿಂಗಳಲ್ಲಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ಹೋರಾಟಗಾರರು, ಮುಖಂಡರು, ಚಿಂತಕರು ತಕ್ಷಣ ಎಲ್ಲೆಡೆ ಜಾಗೃತಿ ಮೂಡಿಸಬೇಕು. ತಮ್ಮ ಮನೆ ಬಾಗಿಲಿಗೆ ಬಂದಾಗ ಆಧಾರ್ ಕಾರ್ಡ್ ಸಂಖ್ಯೆ ಜೊತೆಗೆ ತಮ್ಮ ಜೀವನ ಪರಿಸ್ಥಿತಿ, ಶಿಕ್ಷಣ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಮುಖಂಡರು, ಹೋರಾಟಗಾರರು ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಎರಡು ತಿಂಗಳಲ್ಲಿ ಜಾತಿಗಣತಿ ಪೂರ್ಣಗೊಂಡು ಜೂನ್ ಮೊದಲ ವಾರದಲ್ಲಿ ಸರ್ಕಾರದ ಕೈ ಸೇರಲಿದ್ದು, ಜೂನ್ ತಿಂಗಳಲ್ಲಿಯೇ ಒಳಮೀಸಲಾತಿ ಜಾರಿಗೊಳ್ಳಲಿದೆ. ಆದ್ದರಿಂದ ನಾವೆಲ್ಲರೂ ಅಂದು ಯುಗಾದಿ ಹಬ್ಬವನ್ನು ಆಚರಿಸೋಣಾ. ಅಲ್ಲಿಯವರೆಗೆ ನಾವೆಲ್ಲರೂ ಜಾತಿಗಣತಿ ಸಮೀಕ್ಷೆಗೆ ಸಹಕರಿಸಬೇಕು. ಸಮುದಾಯದವರಲ್ಲಿ ಜಾಗೃತಿ ಮೂಡಿಸೋಣಾ ಎಂದು ಕೋರಿದ್ದಾರೆ.