ಇವಿಎಂ ರದ್ದುಪಡಿಸಿ ಬ್ಯಾಲೆಟ್ ಮತದಾನ ವ್ಯವಸ್ಥೆ ಜಾರಿಗೆ ತನ್ನಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಇ.ವಿ.ಎಂ ಚುನಾವಣಾ ಪದ್ದತಿಯನ್ನು ರದ್ದುಪಡಿಸಿ ಬ್ಯಾಲೆಟ್ ನಮೂನೆ ಜಾರಿಗೆ ತರುವಂತೆ ಸಮಾಜವಾದಿ ಪಾರ್ಟಿ ರಾಜ್ಯಾಧ್ಯಕ್ಷ ಎನ್.ಮಂಜಪ್ಪ ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಪ್ಪರ್‌ಭದ್ರಾ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಬೇಕು. ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಾಂತರಾಜ್ ವರದಿಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕೆಂದು ಮನವಿ ಮಾಡಿದರು.

- Advertisement - 

ಇ.ವಿ.ಎಂ.ಮತದಾನದಿಂದ ಅಕ್ರಮಗಳು ನಡೆಯುವ ಸಾಧ್ಯತೆಯಿರುತ್ತದೆ. ಹಾಗಾಗಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಯಲ್ಲಿ ಮತದಾನವಾಗಬೇಕು. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿ.ಬಿ.ಎಂ.ಪಿ. ನಗರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಲಾಗುವುದು. ಬೇರೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಎನ್.ಮಂಜಪ್ಪ ತಿಳಿಸಿದರು.

ಅಪ್ಪರ್‌ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಬೇಕು. ಅತಿಥಿ ಶಿಕ್ಷಕರು, ಉಪನ್ಯಾಸಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹೊರ ಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವವರನ್ನು ಸರ್ಕಾರ ಖಾಯಂಗೊಳಿಸಬೇಕು. ಕಾಡುಗೊಲ್ಲ, ಕೋಳಿ ಸಮಾಜ, ಉಪ್ಪಾರ, ಬೆಸ್ತರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಎನ್.ಮಂಜಪ್ಪ ಆಗ್ರಹಿಸಿದರು.

- Advertisement - 

ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ ಮಾತನಾಡಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಪರಮಾಧಿಕಾರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಗುರುಮೂರ್ತಿ, ಭಾಷಾ, ಹೇಮಣ್ಣ, ಜಯಣ್ಣ, ಚಂದ್ರಣ್ಣ, ತಿಪ್ಪೇಸ್ವಾಮಿ, ಪಿ.ಪಾಪಣ್ಣ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

 

Share This Article
error: Content is protected !!
";