ಆಡಳಿತಾತ್ಮಕವಾಗಿ ದುರ್ನಡತೆ ಆರೋಪ ಸಾಬೀತಾಗಿದ್ದಲ್ಲಿ ಸದಸ್ಯತ್ವ ರದ್ದು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಹೈಕೋರ್ಟ್ ಶುಕ್ರವಾರ ನೀಡಿರುವ ಆದೇಶ ಎಚ್ಚರಿಕೆ ಗಂಟೆಯಾಗಿದೆ. ಒಂದೇ ಆರೋಪದ ಸಂಬಂಧ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆ ಆಗದಿದ್ದರೂ, ಆಡಳಿತಾತ್ಮಕ ನಿಟ್ಟಿನಿಂದ ದುರ್ನಡತೆ ಆರೋಪ ಸಾಬೀತಾಗಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ವಜಾಗೊಳಿಸಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಗದಗ-ಬೇಟಗೇರಿ ಸಿಟಿ ಮುನಿಸಿಪಾಲಿಟಿಯ ಸದಸ್ಯರಾದ ಉಷಾ ಮಹೇಶ್ ದಾಸರ, ಅನಿಲ್ ಎಂ.ಅಬ್ಬಿಗೇರಿ ಮತ್ತು ಗುಳ್ಳಪ್ಪ ಎಸ್.ಮುಷಿಗೇರಿ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

- Advertisement - 

ಸಾರ್ವಜನಿಕ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಕೆಲವು ವ್ಯಕ್ತಿಗಳ ಜೊತೆ ಶಾಮೀಲಾಗಿ ಮುನಿಸಿಪಾಲಿಟಿ ಆಯುಕ್ತರ ಸಹಿ ನಕಲು ಮಾಡಿ, ಸುಳ್ಳು ನಿರ್ಣಯ ಸೃಷ್ಟಿಸಿ ಒತ್ತುವರಿದಾರರಿಗೆ ಭೂ ಸ್ವಾಧೀನ ಪತ್ರ ನೀಡಿದ್ದ ಆರೋಪದಲ್ಲಿ ತಮ್ಮನ್ನು ವಜಾಗೊಳಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಈ ಮೂವರು ಸದಸ್ಯರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಆರೋಪಿಗಳು ತಾವು ಅಮಾಯಕರು ಎಂದು ಹೇಳುತ್ತಿದ್ದು, ಇಂತಹ ಹೇಳಿಕೆಗಳನ್ನು ಕ್ರಿಮಿನಲ್ ಕೇಸುಗಳ ವಿಚಾರಣೆ ವೇಳೆ ಪರಿಗಣಿಸಬಹುದು. ಆದರೆ ಇದು ಆಡಳಿತಾತ್ಮಕ ಕ್ರಮ ಕೈಗೊಳ್ಳುವುದಕ್ಕೆ ಅಡ್ಡಿಯಾಗದು. ಸಾಕಷ್ಟು ಸಾಕ್ಷ್ಯಾಧಾರಗಳನ್ನು ಆಧರಿಸಿ ಕರ್ನಾಟಕ ಮುನಿಸಿಪಾಲಿಟಿಗಳ ಕಾಯಿದೆ 1964ರ ಸೆಕ್ಷನ್ 41ರ ಅನ್ವಯ ಸದಸ್ಯರನ್ನು ವಜಾಗೊಳಿಸಿರುವ ಸರ್ಕಾರದ ಕ್ರಮಲ್ಲಿ ಯಾವುದೇ ದೋಷಗಳಿಲ್ಲ ಎಂದು ಪೀಠ ಹೇಳಿದೆ.

- Advertisement - 

ಸಾಕ್ಷ್ಯ ಸಾಕು:
ಕ್ರಿಮಿನಲ್ ಪ್ರಕರಣಗಳಲ್ಲಾದರೆ ಆರೋಪಗಳನ್ನು ಯಾವುದೇ ಸಂದೇಹಕ್ಕೆ ಆಸ್ಪದವಿಲ್ಲದ ರೀತಿ ಸಾಬೀತು ಮಾಡಬೇಕಾಗುತ್ತದೆ. ಆಡಳಿತಾತ್ಮಕ ಕ್ರಮ ಕನಿಷ್ಠ ಮಾನದಂಡ ಆಧರಿಸಿದೆ. ಹಾಗಾಗಿ ಚುನಾಯಿತ ಪ್ರತಿನಿಧಿಗಳನ್ನು ವಜಾಗೊಳಿಸುವ ಅಥವಾ ಸದಸ್ಯ ಸ್ಥಾನದಿಂದ ಪದಚ್ಯುತಗೊಳಿಸಲು ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಯಾಗಿರಬೇಕೆಂದು ಇಲ್ಲ. ದುರ್ನಡತೆ ಸಾಬೀತಾಗಲು ಸಾಕಷ್ಟು ದಾಖಲೆಗಳ ಸಾಕ್ಷ್ಯವಿದ್ದರೆ ಸಾಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರ ಆರೋಪಿಗಳು ನಡೆಸಿದ್ದಾರೆನ್ನಲಾದ ನಿರ್ಣಯ ನಕಲು ಮಾಡಿರುವುದು ಕೆಎಂಸಿ ಕಾಯಿದೆ ಸೆಕ್ಷನ್-41ರಡಿ ಸ್ಪಷ್ಟವಾಗಿ ದುರ್ನಡತೆ ವ್ಯಾಪ್ತಿಗೆ ಒಳಪಡುತ್ತದೆ.

ಆರೋಪಿಗಳ ವಿರುದ್ದದ ಆರೋಪದ ಕೃತ್ಯದ ಕುರಿತು ಎಲ್ಲಾ ಮುನಿಸಿಪಲ್ ದಾಖಲೆಗಳನ್ನು ಮತ್ತು ಸ್ವತಂತ್ರ ಪರಿಶೀಲನೆ ನಂತರ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡಿದ ನಂತರವೇ ಅವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿದೆ. ಹಾಗಾಗಿ, ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಗದಗ-ಬೆಟಗೇರಿ ನಗರದ ಮಧ್ಯಭಾಗದಲ್ಲಿರುವ ನೂರಾರು ಕೋಟಿ ಬೆಲೆಬಾಳುವ 30ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಲೀಸ್ ನೀಡಲು ಮಾಡಿದ್ದ 378ನೇ ನಿರ್ಣಯವನ್ನು ಮೂವರು ಸದಸ್ಯರು ನಕಲಿ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿತ್ತು.

ಈ ಹಿಂದೆ ನಗರಸಭೆ ಆಯುಕ್ತರಾಗಿದ್ದ ಪ್ರಶಾಂತ ವರಗ್ಗಪ್ಪನ್ನವರ ಅವರು ತಮ್ಮ ಸಹಿ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದರು.
ಪ್ರಕರಣದಲ್ಲಿ ಕಾನೂನು ಹೋರಾಟ ನಡೆದು ಮೂವರು ಬಿಜೆಪಿ ನಗರಸಭೆ ಸದಸ್ಯರನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದರು.

ಪ್ರಾದೇಶಿಕ ಆಯುಕ್ತರ ಆದೇಶದ ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಮತ್ತು ಸದಸ್ಯೆ ಉಷಾ ಮಹೇಶ್ ದಾಸರ, ಅನಿಲ್ ಎಂ.ಅಬ್ಬಿಗೇರಿ ಮತ್ತು ಗುಳ್ಳಪ್ಪ ಎಸ್.ಮುಷಿಗೇರಿ ಅವರು ಮೇಲ್ಮನವಿ ಸಲ್ಲಿಸಿದ್ದರು.
ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಪ್ರಾದೇಶಿಕ ಆಯುಕ್ತರ ಆದೇಶ ಎತ್ತಿ ಹಿಡಿದು
, ಸದಸ್ಯರ ಅಜಿರ್ಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.

 

 

Share This Article
error: Content is protected !!
";