ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಬೆಳೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಸಿದ್ದಮ್ಮ ಸೇರಿದ ಐದು ಎಕರೆ ಜಮೀನಿನಲ್ಲಿ ನಿರೀಕ್ಷೆಗೂ ಮೀರಿದ ಸೇವಂತಿ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಅವರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಸೇವಂತಿಹೂ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಬಬ್ಬೂರು ಕೃಷಿ ವಿಜ್ಞಾನ ಓಂಕಾರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲ್ಲೂಕಿನಾದ್ಯಂತ ಸುಮಾರು ೩೫೦ ಎಕರೆಯಲ್ಲಿ ಹೂ ಬೆಳೆಯನ್ನು ಬೆಳೆಯಲಾಗಿದೆ. ಆದರೆ, ನಾರಾಯಣಪುರ ಗ್ರಾಮದ ಸಿದ್ದಮ್ಮನವರ ಜಮೀನಿನಲ್ಲಿ ಅವರ ಪುತ್ರ ಮೌನೇಶ್ ಸಹಕಾರದೊಂದಿಗೆ ಹೆಚ್ಚು ಬೆಳೆಯನ್ನು ಬೆಳೆಯುವ ಮೂಲಕ ಹೂಬೆಳೆಗಾರರಿಗೆ ಮಾರ್ಗದರ್ಶಕರಾಗಿದ್ಧಾರೆ. ಪ್ರತಿನಿತ್ಯ ೧೦ ಕ್ವಿಂಟಾಲ್ ಸೇವಂತಿ ಹೂವನ್ನು ಮಾರಾಟ ಮಾಡಲಾಗುತ್ತಿದೆ. ಸರಾಸರಿ ಪ್ರತಿದಿನ ೧೦ಸಾವಿರ ಮೌಲ್ಯದ ಹೂಗಳ ಮಾರಾಟ ನಡೆಸುತ್ತಿದೆ. ೨೦ಕ್ಕೂ ಹೆಚ್ಚು ಕಾರ್ಮಿಕರು ತೋಟದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಬಾರಿ ತಾಲ್ಲೂಕಿನಾದ್ಯಂತ ಹೂವಿನ ಬೆಳೆ ಉತ್ತಮವಾಗಿದೆ. ಹೂವಿನಲ್ಲೂ ಉತ್ತಮ ಬೆಳೆ ಬೆಳೆಯಲು ಸಾವಯವ ಗೊಬ್ಬರ ಮತ್ತು ಜೀವಾಮೃತವನ್ನು ರೈತರು ಹೆಚ್ಚು ಬಳಸಬೇಕು. ಇದರಿಂದ ರೈತರಿಗೆ ಅಧಿಕ ಲಾಭವಾಗಲಿದೆ ಎಂದರು.
ಹಿರಿಯ ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ, ಬಯಲುಸೀಮೆಯ ಈ ಬೆಂಗಾಡಿನಲ್ಲಿ ಬಿಸಿಲಿನಲ್ಲಿ ರೈತರು ಕೆಲಸ ನಿರ್ವಹಿಸುವುದೇ ಕಷ್ಟವಾದ ಸಂದರ್ಭದಲ್ಲಿ ಸಿದ್ದಮ್ಮ ಮತ್ತು ಅವರ ಪುತ್ರ ಬೆಳಗ್ಗೆಯಿಂದ ಸಂಜೆವರೆಗೂ ಕೂಲಿಯವರ ಜೊತೆಗೆ ಜಮೀನಿನಲ್ಲಿ ಸೇವಂತಿ ಬೆಳೆಯನ್ನು ಆರೈಕೆ ಮಾಡುತ್ತಿದ್ದು, ಉತ್ತಮ ಲಾಭದತ್ತ ಹೆಜ್ಜೆ ಇಟ್ಟಿದ್ಧಾರೆ. ಸೇವಂತಿಯನ್ನು ಹೊರತು ಪಡಿಸಿದರೆ ತಾಲ್ಲೂಕಿನಾದ್ಯಂತ ಸುಮಾರು ೩೫೦ ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ಇದೆ. ರೈತ ಹೂ ಬೆಳೆಯನ್ನು ಬೆಳೆದು ಲಾಭಪಡೆಯಬದು. ಪ್ರತಿಯೊಬ್ಬ ರೈತರು ತಮ್ಮ ಬೆಳೆಯ ಬಗ್ಗೆ ಕೃಷಿ ವಿಜ್ಞಾನಿಗಳಿಂದ ಸೂಕ್ತ ಮಾರ್ಗದರ್ಶನ ಪಡೆಯಿರಿ ಎಂದರು.
ಇದೇ ಸಂದರ್ಭದಲ್ಲಿ ಸೇವಂತಿ ಬೆಳೆಗಾರರಾದ ಸಿದ್ದಮ್ಮ, ಮೌನೇಶ್‌ರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಅಧಿಕಾರಿಗಳಾದ ಪ್ರವೀಣ್‌ಕುಮಾರ್, ವೀರೇಶ್, ರೈತರಾದ ಪ್ರಸನ್ನ, ಸಿದ್ದೇಶ್, ಪ್ರಹ್ಲಾದ್, ಮಂಜುನಾಥ, ಬಿ.ವಿ.ಸತ್ಯನಾರಾಯಣ, ಜಿ.ಗೋವಿಂದಪ್ಪ, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.
“ಸೇವಂತಿ ಹೂವಿನಲ್ಲಿ ಹೆಚ್ಚುಲಾಭವಿಲ್ಲವೆಂದು ಬಹಳಷ್ಟು ರೈತರು ಮಾತನಾಡುತ್ತಿದ್ದರು. ಆದರೆ, ನನಗೆ ಕೇವಲ ಮೂರು ಎಕರೆ ಜಮೀನಿದೆ, ಹೆಚ್ಚುವರಿಯಾಗಿ ಎರಡು ಎಕರೆ ಜಮೀನನ್ನು ಕೋರಿಗೆ ಪಡೆದು ಒಟ್ಟು ಐದು ಎಕರೆ ಪ್ರದೇಶದಲ್ಲಿ ಸೇವಂತಿ ಬೆಳೆ ಬೆಳೆದೆ. ಇಡೀ ಕುಟುಂಬ ನನ್ನಗೆ ಆಸರೆಯಾಯಿತು. ಅಧಿಕಾರಿಗಳು ಮಾರ್ಗದರ್ಶನ ನೀಡಿದರು. ಪ್ರತಿನಿತ್ಯ ಈಗ ೧೦ ಕ್ವಿಂಟಾಲ್ ಹೂಗಳನ್ನು ೧೦೦ರೂ ಕೆಜಿಯಂತೆ ಮಾರುಕಟ್ಟೆಗೆ ಕಳಿಸಲಾಗುತ್ತದೆ. ದಿನಾಲು ೧೦ ಸಾವಿರ ವರಮಾನ ಬರುತ್ತಿದೆ. ಸೇವಂತಿ ಬೆಳೆ ಆರ್ಥಿಕವಾಗಿ ನನ್ನನ್ನು ಸದೃಢಗೊಳಿಸಿದೆ”. ಸಿದ್ದಮ್ಮ ರೈತ ಮಹಿಳೆ.

