ಬಯಲುಸೀಮೆಗೆ ಗೋಡಂಬಿ ಸೂಕ್ತ ಬೆಳೆ-ರಜನೀಕಾಂತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಡಿಮೆ ನೀರು ಮತ್ತು ಕಡಿಮೆ ನಿರ್ವಹಣೆಯ ಗೋಡಂಬಿ ಬೆಳೆ ಬಯಲುಸೀಮೆಗೆ ಸೂಕ್ತವಾಗಲಿದೆ ಎಂದು ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನೀಕಾಂತ ಹೇಳಿದರು.

ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ ರೈತರಿಗೆ ಗೋಡಂಬಿ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

- Advertisement - 

ಜಿಲ್ಲೆಯಲ್ಲಿ ಗೋಡಂಬಿ ಬೆಳೆಯಲು ಸೂಕ್ತ ವಾತವರಣವಿದ್ದು, ಇದನ್ನು ಸಾಧಾರಣ ಫಲವತ್ತತೆಯ ಭೂಮಿಯಲ್ಲಿ ಕಡಿಮೆ ವೆಚ್ಚ, ಕಡಿಮೆ ನೀರು ಮತ್ತು ಕಡಿಮೆ ನಿರ್ವಹಣೆಯಲ್ಲಿ ಉತ್ತಮ ಇಳುವರಿ ಪಡೆಯಲು ಇಂದಿನ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದರು.

ಇರುವಕ್ಕಿಯ ಮುಖ್ಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಸದಾಶಿವ ನಡುಕೇರಿ ಮಾತನಾಡಿ, ಗೊಡಂಬಿ ಹಣ್ಣು ಮತ್ತು ಬೀಜ ಒಳ್ಳೆಯ ಸತ್ವಯುತ ಆಹಾರವಾಗಿದ್ದು, ಇದರ ಹಣ್ಣು ಅಧಿಕ ಪ್ರಮಾಣದ ಶರ್ಕರಗಳು ಹಾಗು ಸಿ ಜೀವಸತ್ವಗಳಿಂದ ಕೂಡಿದ್ದು, ಗೋಡಂಬಿ ಬೀಜದ ಹೆಚ್ಚಿನ ಜಿಡ್ಡು, ಪ್ರೋಟೀನ್, ಖನಿಜ ಹಾಗೂ ಜೀವಸತ್ವಗಳನ್ನು ಒಳಗೊಂಡಿರುತ್ತದೆಂದರು. ಇಲ್ಲಿನ ಹವಾಗುಣಕ್ಕೆ ಹಾಗೂ ಗುಣಮಟ್ಟದ ಗೋಡಂಬಿ ಪಡೆಯಲು ವೆಂಗುರ್ಲಾ-7 ಮತ್ತು ಭಾಸ್ಕರ ಉತ್ತಮ ತಳಿಯಾಗಿವೆ.

- Advertisement - 

ಗೋಡಂಬಿ ಬೆಳೆಯನ್ನು ಎಲ್ಲಾ ವಿಧವಾದ ಮಣ್ಣುಗಳಲ್ಲೂ ಬೆಳೆಯಬಹುದು. ಆದರೆ ಜೇಡಿ ಮಣ್ಣು ಮತ್ತು ಚೌಳು ಹಾಗೂ ಜೌಗು ಪ್ರದೇಶಗಳಲ್ಲಿ ಈ ಬೆಳೆ ಚೆನ್ನಾಗಿ ಬರುವುದಿಲ್ಲ. ನೀರು ಬಸಿದು ಹೋಗುವಂತಹ ಕೆಂಪು ಗೋಡು, ಜಂಬಿಟ್ಟಿಗೆ ಮತ್ತು ಮಧ್ಯಮ ಕಪ್ಪು ಮಣ್ಣುಗಳು ಈ ಬೆಳೆಗೆ ಹೆಚ್ಚು ಸೂಕ್ತವಾಗಿದೆ. ಗೋಡಂಬಿ ಬೆಳೆ ವಾತಾವರಣದಲ್ಲಿ ಹೆಚ್ಚು ತೇವಾಂಶ ಮತ್ತು ಉಷ್ಣಾಂಶವಿರುವ ತೀರ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯಬಲ್ಲದೆಂದರು. ಇದನ್ನು ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಬಹುದಾಗಿದೆ.

6 ರಿಂದ 12 ತಿಂಗಳು ವಯಸ್ಸಿನ ಕಸಿ ಗಿಡಗಳನ್ನು 8 ಮೀ. * 8 ಮೀ. ಅಥವಾ 4 ಮೀ. * 4 ಮೀ. ಅಂತರದಲ್ಲಿ 75 * 75 * 75 ಸೆಂ.ಮೀ. ಅಳತೆಯ ಗುಣಿ ತೆಗೆದು, ಈ ಗುಣಿಗಳನ್ನು ಮೇಲ್ಮಣ್ಣು ಮತ್ತು 25 ಕಿ.ಗ್ರಾಂ ಸಾವಯವ ಗೊಬ್ಬರದ ಮಿಶ್ರಣದಿಂದ ತುಂಬಿ, ಮುಂಗಾರಿನ ಸಮಯದಲ್ಲಿ ಗುಣಿಗಳ ಮಧ್ಯದಲ್ಲಿ ಕಸಿಗಿಡ ನಾಟಿ ಮಾಡಬೇಕು. ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಮೇ-ಜೂನ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಗಿಡಗಳಿಗೆ ಒದಗಿಸಬೇಕೆಂದರು.

ನಾಟಿಮಾಡಿದ ನಂತರದ ಪ್ರಾರಂಭಿಕ ವರ್ಷಗಳಲ್ಲಿ ಗಿಡಗಳು ನೇರವಾಗಿ ಬೆಳೆಯಲು ಕೆಳಗಿನ ರೆಂಬೆಗಳನ್ನು ತೆಗೆದು ಸ್ಥಳೀಯ ಹವಾಗುಣ ಮತ್ತು ಭೂಗುಣಗಳಿಗೆ ಸೂಕ್ತವಾದ ತರಕಾರಿ, ದ್ವಿದಳ ಧಾನ್ಯ ಮತ್ತು ಹುಲ್ಲಿನ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದೆಂದರು. ನಂತರ ಗೋಡಂಬಿಯಲ್ಲಿ ಬರುವ ಪ್ರಮುಖ ಕೀಟಗಳಾದ ಕಾಂಡ ಕೊರೆಕ, ಟೀ ಸೊಳ್ಳೆ, ಸುರಂಗ ಕೀಟ ಮತ್ತು ಪ್ರಮುಖ ರೋಗಗಳಾದ ಗಿಡ ಒಣಗುವಿಕೆ ಹಾಗೂ ಎಲೆ ಚುಕ್ಕಿ ರೋಗಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ನಾಟಿ ಮಾಡಿದ ಮೂರನೇ ವರ್ಷದಿಂದ ಇಳುವರಿ ಪ್ರಾರಂಭಗೊಂಡು ಸುಮಾರು 8-10 ವರ್ಷದ ಪ್ರತಿ ಮರದಿಂದ ವರ್ಷವೊಂದಕ್ಕೆ ಸರಾಸರಿ 8-10 ಕಿ.ಗ್ರಾಂ ಗೇರು ಬೀಜವನ್ನು ಪಡೆಯಬಹುದು. ಪ್ರತಿ ಹೆಕ್ಟೇರಿಗೆ 1.5 ರಿಂದ 1.7 ಟನ್ ಗೋಡಂಬಿ ಬೀಜ ಪಡೆಯಬಹುದು. ಬಿದ್ದ ಹಣ್ಣುಗಳಿಂದ ಬೀಜಗಳನ್ನು ಬಿಡಿಸಿ ಎರಡರಿಂದ ಮೂರು ದಿವಸ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸುಮಾರು 6 ತಿಂಗಳವರೆಗೆ ಸಂಗ್ರಹಣೆ ಮಾಡಬಹುದೆಂದರು. ಚಳ್ಳಕೆರೆ ವಿಭಾಗದ ಉಪಕೃಷಿ ನಿರ್ದೇಶಕ ಉಮೇಶ್ ಡಿ ಮಾತನಾಡಿ ಗೋಡಂಬಿ ಬೆಳೆಯು ಬಯಲು ಸೀಮೆ ಪ್ರದೇಶದಲ್ಲಿ ಕಡಿಮೆ ಫಲವತ್ತತೆ ಇರುವ ಜಮೀನಿನಲ್ಲಿಲೂ ಉತ್ತಮ ಇಳುವರಿಯನ್ನು ಕೊಡುವ ಆಶದಾಯಕ ಬೆಳೆಯಾಗಬಹುದೆಂದರು.

ಗೋಡಂಬಿ ಬೀಜಗಳನ್ನು ಪಾಯಸ ಮತ್ತಿತರೆ ಸಿಹಿ ತಿನಿಸುಗಳನ್ನು ತಯಾರಿಸಲು ಬಳಸುತ್ತಿದ್ದು, ವಿದೇಶಗಳಲ್ಲಿ ಇದರ ಹಣ್ಣನ್ನು ವೈನ್ ತಯಾರಿಸಲು ಮತ್ತು ಗೋವಾದಲ್ಲಿ ಫೆನ್ನಿ ತಯಾರಿಸಲು ಸಹ ಬಳಸುತ್ತಾರೆಂದರು. ರೈತರು ಉತ್ಕೃಷ್ಟವಾಗಿ ಬೆಳೆ ಬೆಳೆಯಲು ನೇರವಾಗಿ ಕೊಟ್ಟಿಗೆ ಗೊಬ್ಬರ ಬಳಸುವ ಬದಲಾಗಿ, ಲಘುಪೋಷಕಾಂಶ ಮತ್ತು ಅಣು ಜೀವಿಗೊಬ್ಬರಗಳಿಂದ ಪುಷ್ಟಿಕರಿಸಿದ ಕೊಟ್ಟಿಗೆ ಗೊಬ್ಬರವನ್ನು ಬಳಸುವುದು ಸೂಕ್ತವೆಂದರು.

ಹಿರಿಯೂರು ತಾಲ್ಲೂಕಿನ ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕರಾದ ಶ್ರೀನಿವಾಸ್ ಅವರು ಗೋಡಂಬಿ ಪ್ರದೇಶ ವಿಸ್ತರಣೆ ಯೋಜನೆ ಕುರಿತು ಮಾಹಿತಿ ನೀಡಿದರು.

ಹರಿಯಬ್ಬೆ ಗ್ರಾಮದ ಪ್ರಗತಿಪರ ರೈತರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಎಸ್ ರಘುನಾಥ ಮಾತನಾಡಿ, ರೈತರು ತಮ್ಮ ಎಲ್ಲಾ ಜಮೀನಿನಲ್ಲಿ ಅಡಿಕೆ ಮತ್ತು ತೆಂಗು ಬೆಳೆಯೊಂದನ್ನೆ ಹಾಕದೆ ಗೋಡಂಬಿಯನ್ನು ಕಡಿಮೆ ನೀರು ಮತ್ತು ನಿರ್ವಹಣೆಯಲ್ಲಿ ಯಶಸ್ವಿಯಾಗಿ ಬೆಳೆಯಬಹುದೆಂದರು.

ಮೀರಸಾಬಿಹಳ್ಳಿ ಗ್ರಾಮದ ಗೋಡಂಬಿ ಬೆಳೆಗಾರ ದಯಣ್ಣ ಬಿ.ಕೆ ಮಾತನಾಡಿ, ಕನಿಷ್ಟ ನಿರ್ವಹಣೆಯಲ್ಲಿ ತಾವು ಉತ್ತಮ ಇಳುವರಿ ಪಡೆಯುತ್ತಿರುವ ಬಗ್ಗೆ ರೈತರಿಗೆ ಮಾಹಿತಿ ನಿಡಿದರು.
ಚಿಕ್ಕಚೆಲ್ಲೂರು ಗ್ರಾಮದ ಕೃಷಿಕ ಎನ್. ತಿಪ್ಪೇಸ್ವಾಮಿ ಗೋಡಂಬಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಸೀತಾಫಲ ಬೆಳೆಯನ್ನು ಯಶಸ್ವಿಯಾಗಿ ಬೆಳೆದಿರುವ ಕುರಿತು ತಿಳಿಸಿದರು.

ತರಬೇತಿಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು (ರೈತ ಮಹಿಳೆ), ಕರ್ನಾಟಕ ರಾಜ್ಯ ರೈತ ಸಂಘ ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ಎಂ ಲಕ್ಷ್ಮಿಕಾಂತ್ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಆಸಕ್ತ 80 ಜನ ರೈತಭಾಂದವರು ಭಾಗವಹಿಸಿದ್ದರು.

 

 

 

Share This Article
error: Content is protected !!
";