ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ(ಜಾತಿ ಗಣತಿ)ಯಲ್ಲಿ ಕುಂಚಿಟಿಗ ಜಾತಿಯನ್ನು ಸಂಪೂರ್ಣ ಸಮೀಕ್ಷೆಯಿಂದ ಹೊರಗಿಟ್ಟು ಅಧ್ಯಯನ ಮಾಡಲಾಗಿದೆ, ಕುಂಚಿಟಿಗ ಜಾತಿ ರಾಜ್ಯದಲ್ಲಿ ಎಲ್ಲಿದೆ ಎಂದು ಬ್ಯಾಟರಿ ಹಾಕಿ ಹುಡುಕುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಹೆಚ್.ಕಾಂತರಾಜ್ ವರದಿ ಅವೈಜ್ಞಾನಿಕವಾಗಿದ್ದು ಜಾತಿ ಗಣತಿಯಲ್ಲಿ ಬಹಿಷ್ಕೃತ ಕುಂಚಿಟಿಗರಾಗಿದ್ದೇವೆ ಎಂದು ಕೂನಿಕೆರೆ ಗ್ರಾಪಂ ಸದಸ್ಯರು ಹಾಗೂ ಕುಂಚಿಟಿಗ ಸಮಾಜ ಮುಖಂಡರಾದ ಹುಚ್ಚವ್ವನಹಳ್ಳಿ ಮೋಹನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ಕುಂಚಿಟಿಗ ಜಾತಿ ಸೇರಿದಂತೆ ಎಲ್ಲ ಜಾತಿಯ ಗಣತಿಯನ್ನು ಆಧಾರ್ ಲಿಂಕ್ ಮಾಡುವುದರೊಂದಿಗೆ ಮರು ಅಧ್ಯಯನ ಮಾಡಬೇಕು, ಕಾಂತರಾಜ್ ವರದಿಯಲ್ಲಿ ಸಾಕಷ್ಟು ಲೋಪ ದೋಷಗಳನ್ನು ಕಾಣಬಹುದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕುಂಚಿಟಿಗ ಜಾತಿಯವರು ಎಂದೂ ಜಾತಿ ಗಣತಿಯ ವಿರೋಧಿಗಳಲ್ಲ, ಆದರೆ ನಿರ್ದಿಷ್ಟವಾಗಿ ವೈಜ್ಞಾನಿಕ ರೀತಿಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿ ಒಂದು ಮನೆಗಳನ್ನ ಬಿಡದಂತೆ ಅಧ್ಯಯನ ಮಾಡಬೇಕು ಎಂದು ಮೋಹನ್ ಅವರು ಒತ್ತಾಯಿಸಿದ್ದಾರೆ.
ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುಂಚಿಟಿಗ ಜಾತಿಯವರು ರಾಜ್ಯದ ಇತರೆ 18 ಜಿಲ್ಲೆಗಳಲ್ಲಿ ಸುಮಾರು 45 ವಿಧಾನಸಭಾ ಕ್ಷೇತ್ರಗಳಲ್ಲಿ ಚದುರಿದಂತೆ ನೆಲೆಕಂಡುಕೊಂಡಿದ್ದಾರೆ. ಇಂತಹ ಜಾತಿಯ ಜನ ಸಂಖ್ಯೆ ಕನಿಷ್ಠ ಎಂದರೂ 10 ಲಕ್ಷ ಮೇಲಿರಬೇಕಿತ್ತು. ಆದರೆ ಲಭ್ಯ ಇರುವ ಮಾಹಿತಿ ಪ್ರಕಾರ ಕುಂಚಿಟಿಗ ಒಕ್ಕಲಿಗ ಎಂದು ಬರೆಸಿಕೊಂಡಿರುವವರು ಕೇವಲ 52 ಸಾವಿರ ಮಾತ್ರ ಇರುವುದು ಕಂಡು ಬಂದಿದೆ. ಆದರೆ ಕುಂಚಿಟಿಗ ಜಾತಿ ಒಂದು ಪ್ರತ್ಯಕ ಹಿಂದುಳಿದ ಬುಡಕಟ್ಟಿಗೆ ಸೇರಿದೆ. ಈ ಜಾತಿಯನ್ನ ವ್ಯವಸ್ಥಿತವಾಗಿ ಸರ್ಕಾರ ಮುಗಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಮೈಸೂರು ವಿಶ್ವ ವಿದ್ಯಾಲಯವು 2018ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಆ ವರದಿಯಲ್ಲಿ ಕುಂಚಿಟಿಗ ಜಾತಿ ಅತ್ಯಂತ ಹಿಂದುಳಿದಿದ್ದು ಪ್ರವರ್ಗ-1ರ ಮೀಸಲಾತಿಗೆ ಶಿಫಾರಸ್ಸು ಮಾಡಿದೆ. ಇದನ್ನ ಪರಿಗಣಿಸದ ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗವು ಕುಂಚಿಟಿಗ ಜಾತಿಗೆ ಪರಮ ಅನ್ಯಾಯ ಮಾಡಿದೆ ಎಂದು ಮೋಹನ್ ಕಿಡಿ ಕಾರಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗವು ಕುಂಚಿಟಿಗ ಜಾತಿಯ ಜನ ಸಂಖ್ಯೆಯನ್ನು ನಿರ್ದಿಷ್ಟವಾಗಿ ದಾಖಲು ಮಾಡಿಲ್ಲದಿದ್ದರೆ ಮತ್ತು ಕುಂಚಿಟಿಗ ಜಾತಿಯನ್ನು ಪ್ರವರ್ಗ-1ಕ್ಕೆ ಶಿಫಾರಸ್ಸು ಮಾಡಿಲ್ಲದಿದ್ದರೆ ಉಗ್ರ ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವ ಮೋಹನ್ ಅವರು ಎಚ್ಚರಿಸಿದ್ದಾರೆ.