ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಜನ ಗಣತಿ ಮತ್ತು ಜಾತಿ ಗಣತಿಯನ್ನು ಒಟ್ಟಿಗೆ ನಡೆಸಲಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.
ದೇಶಾದ್ಯಂತ ಎರಡು ಹಂತಗಳಲ್ಲಿ ಜಾತಿ ಮತ್ತು ಜನ ಗಣತಿ ಕಾರ್ಯ ಮಾಡಲಾಗುತ್ತದೆ. 2026ರ ಅಕ್ಟೋಬರ್-1 ರಿಂದ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಹಿಮಚಾದಿತ ಪ್ರದೇಶಗಳಲ್ಲಿ ಮತ್ತು 2027ರ ಮಾರ್ಚ್-1 ರಿಂದ ದೇಶದ ಉಳಿದ ಭಾಗಗಳಲ್ಲಿ ಜನ ಗಣತಿಯೊಂದಿಗೆ ಜಾತಿ ಗಣತಿ ನಡೆಸಲಾಗುವುದು ಎಂದು ಸಚಿವಾಲಯ ಪ್ರಕಟಿಸಿದೆ.
ಜನಗಣತಿ-2027ನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಇದರೊಂದಿಗೆ ಜಾತಿ ಗಣತಿ ನಡೆಸಲು ನಿರ್ಧರಿಸಲಾಗಿದೆ. 2027ರ ಮಾರ್ಚ್ 1 ರಿಂದಲೇ ಗಣತಿ ಕಾರ್ಯ ಪ್ರಾರಂಭವಾಗಲಿದೆ. ಈ ಸಂಬಂಧ ಜನಗಣತಿ ಕಾಯ್ದೆ 1948ರ ಸೆಕ್ಷನ್ 3ರ ನಿಬಂಧನೆಯಂತೆ 16.06,2025 ರಂದು ತಾತ್ಕಾಲಿಕವಾಗಿ ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ.