ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಳಮೀಸಲಾತಿ ಜಾರಿಗಾಗಿ 30 ವರ್ಷಗಳ ಹೋರಾಟ ಒಂದು ಭಾಗವಾಗಿದ್ದರೇ, ಈಗ ಜಾತಿಗಣತಿ ಸರ್ವೇ ಕಾರ್ಯದಲ್ಲಿ ಪಾಲ್ಗೊಳ್ಳುವುದು ಮತ್ತೊಂದು ಪ್ರಮುಖ ಭಾಗವಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ 3 ದಶಕದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಬಲ ಕೊಟ್ಟಿದೆ. ಈಗಾಗಲೇ ಆಂಧ್ರ, ತೆಲಂಗಾಣ, ಹರಿಯಾಣದಲ್ಲಿ ಜಾರಿಗೊಳಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು.
ಹೊಲೆ-ಮಾದಿಗರು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಬಹುದೊಡ್ಡ ಅಡ್ಡಿ. ಈ ಎರಡು ಜಾತಿಯವರು ಕೆಲವು ಜಿಲ್ಲೆಗಳಲ್ಲಿ ಎಕೆ, ಎಡಿ, ಆದಿಆಂಧ್ರ ಎಂಬ ಒಂದೇ ಜಾತಿಸೂಚಕ ಹೆಸರಿನಲ್ಲಿ ಗುರುತಿಸಿಕೊಂಡು ಗೊಂದಲ ಮೂಡಿಸಿದ್ದಾರೆ. ಆದ್ದರಿಂದ ಒಳಮೀಸಲಾತಿ ತುರ್ತು ಜಾರಿಗೊಳಿಸಲು ಸಮಸ್ಯೆ ಆಗಿದ್ದು, ಅದನ್ನು ಸರಿಪಡಿಸಿ ಎಸ್ಸಿಯಲ್ಲಿ 101 ಜಾತಿ ಜನರಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಹೇಳಿದರು.
ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ, ಯಾವುದೇ ಜಾತಿಗೂ ಅನ್ಯಾಯ ಆಗದ ರೀತಿ ಸಮಬಾಳು, ಸಮಪಾಲು ತತ್ವದಡಿ ಪರಿಶಿಷ್ಟರಿಗೆ ಮೀಸಲಾತಿ ಹಂಚಿಕೆ ಮುಂದಾಗಿದ್ದು, ಸ್ವಾತಂತ್ರ ಭಾರತದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಸರ್ವೇ ಮೂಲಕ ಸಾಹದ ಕಾರ್ಯಕ್ಕೆ ಕೈ ಹಾಕಿದ್ದು, ಇದಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.
ಒಳಮೀಸಲಾತಿ ಜಾರಿ ಪೂರ್ವ ರಾಜ್ಯದಲ್ಲಿ ಜಾತಿಗಣತಿ ಕಾರ್ಯ ಮೇ 5ರಂದು ಆರಂಭಗೊಂಡಿದ್ದು, ಅದರ ದಿನಾಂಕವನ್ನು ಮೇ 28ರ ವರೆಗೆ ವಿಸ್ತರಿಸಲಾಗಿದೆ. ಈ ಸರ್ವೇಯಲ್ಲಿ ಪರಿಶಿಷ್ಟ ಗುಂಪಿನಲ್ಲಿನ ಎಲ್ಲ ಜಾತಿ ಜನರು ಕಡ್ಡಾಯವಾಗಿ ಪಾಲ್ಗೊಂಡು, ತಮ್ಮ ಪಾಲಿನ ಮೀಸಲಾತಿ ಪಡೆಯಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಮೀಸಲಾತಿ ಸೌಲಭ್ಯ ಉಂಡಿರುವ ನೌಕರ ವರ್ಗ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಎಕೆ, ಎಡಿ, ಆದಿಆಂಧ್ರ ಯಾವುದೇ ಜಾತಿ ಸೂಚಕದಲ್ಲಿ ಗುರುತಿಸಿಕೊಂಡಿದ್ದರು ಕಡ್ಡಾಯವಾಗಿ 061-ಮಾದಿಗ ಎಂದು ಸ್ವಾಭಿಮಾನ, ಆತ್ಮಾಭಿಮಾನದಿಂದ ಹೇಳಬೇಕು. ಒಂದೊಮ್ಮೆ ಮೂಲ ಜಾತಿ ಬರೆಯಿಸದಿದ್ದರೇ ಎಲ್ಲ ಸೌಲಭ್ಯಗಳಿಂದಲೂ ಅಂತಹ ಕುಟುಂಬ ವಂಚಿತವಾಗಲಿದೆ. ಕಾರಣ ಪ್ರಸಕ್ತ ವರ್ಷದಲ್ಲಿಯೇ ಎಕೆ, ಎಡಿ, ಆದಿಆಂಧ್ರ ಪದವನ್ನೇ ಜಾತಿಪಟ್ಟಿಯಿಂದ ರಾಜ್ಯ ಸರ್ಕಾರ ಕೈಬಿಡಲಿದೆ. ಆದ್ದರಿಂದ ಮಾದಿಗ-ಛಲವಾದಿ ಸೇರಿ ಎಲ್ಲ ವರ್ಗದ ಜನರು ಕಡ್ಡಾಯವಾಗಿ ಮೂಲ ಜಾತಿ ಬರೆಯಿಸಬೇಕು ಎಂದರು.
ಪರಿಶಿಷ್ಟ ಸಮುದಾಯದಲ್ಲಿನ ಎಲ್ಲರೂ ನೈಜ ಮಾಹಿತಿ ನೀಡಬೇಕು. ಪೂರ್ವಿಕರ ಕುಲಕಸುಬು, ಈಗ ನಮ್ಮ ವೃತ್ತಿಯ ಮಾಹಿತಿ ನೀಡಬೇಕು. ಆಗ ಮಾತ್ರ ಮೀಸಲಾತಿ ಸೌಲಭ್ಯ ಪಡೆಯಲು ಸಹಕಾರಿ ಆಗಲಿದೆ ಎಂದು ಹೇಳಿದರು.
ದೇಶದಲ್ಲಿಯೇ ಮೊದಲ ಪ್ರಯತ್ನವಾಗಿ ಆಪ್ ಮೂಲಕ ಜಾತಿಗಣತಿ ಕಾರ್ಯ ಕೈಗೊಂಡಿದ್ದು, ಆರಂಭದಲ್ಲಿ ಸಮಸ್ಯೆ ಆಗಿತ್ತು. ಈಗ ಸರಿದಾರಿಗೆ ಬಂದಿದೆ. ಏನಾದರೂ ಸಮಸ್ಯೆಗಳು ಕಂಡುಬಂದ ತಕ್ಷಣ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದು, ಅವರು ಸರಿಪಡಿಸುತ್ತಿದ್ದಾರೆ. ಆದರೂ ಕಾರ್ಯ ಪೂರ್ಣಗೊಂಡ ಬಳಿಕವೇ ವಾಸ್ತವಾಂಶ ಗೊತ್ತಾಗಲಿದೆ ಎಂದು ತಿಳಿಸಿದರು.
ಬೀದಿಬದಿ ಸ್ವಚ್ಛತೆ, ಚಪ್ಪಲಿ ಹೊಲಿಯುವುದು, ಹೋಟೆಲ್, ಕಟ್ಟಡ ನಿರ್ಮಾಣ ಸೇರಿ ವಿವಿಧ ಕ್ಷೇತ್ರದಲ್ಲಿ ಕೂಲಿಕಾರರಾಗಿರುವ ಮಾದಿಗರು ಬಹುಸಂಖ್ಯೆಯಲ್ಲಿ ಕೃಷಿಕಾರ್ಮಿಕರು. ಭೂತಾಯಿಗೆ ಹಸಿರು ಸೀರೆ ಉಡಿಸುವಲ್ಲಿ ಮುಂಚೂಣಿಯಲ್ಲಿರುವ ಶ್ರಮಿಕರು. ಈ ಮೂಲಕ ದೇಶದ ಕೃಷಿ ಕ್ಷೇತ್ರ ಬಲವರ್ಧನೆಗೆ ಶ್ರಮಿಸುತ್ತಿದ್ದು, ಬಸವಣ್ಣ ಸಾರಿದ ಕಾಯಕ ತತ್ವದ ರಾಯಭಾರಿಗಳು ಮಾದಿಗರು ಎಂದು ಬಣ್ಣಿಸಿದರು.
ಇಂತಹ ವರ್ಗವನ್ನು ಮುಖ್ಯವಾಹಿನಿಗೆ ತರಲು ಒಳಮೀಸಲಾತಿಯೊಂದೇ ಪರಿಹಾರ. ಈ ಸತ್ಯವನ್ನು ಅರಿತು ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ರಾಜ್ಯದಲ್ಲಿ ಜಾತಿಗಣತಿದ ಸರ್ವೇ ಮೂಲಕ 101 ಜಾತಿ ಜನರ ಬದುಕಿನ ಸತ್ಯ ಅರಿತು, ಮೀಸಲಾತಿ ಹಂಚಿಕೆ ಮಾಡಲು ಮುಂದಾಗಿರುವುದು ಐತಿಹಾಸಿಕ ಘಟನೆ ಆಗಲಿದೆ ಎಂದರು.
ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗ ಈಗಾಗಲೇ ಸರ್ಕಾರಿ ಇಲಾಖೆ, ನಿಗಮ ಮಂಡಳಿ, ಸಹಕಾರ ಸಂಘ ಸೇರಿ ವಿವಿಧ ಕ್ಷೇತ್ರದಲ್ಲಿ ಯಾವ ಜಾತಿ ಜನರು ಇದ್ದಾರೆಂಬ ಮಾಹಿತಿ ಸಂಗ್ರಹಿಸಿದೆ. ಈ ಮೂಲ ಎಲ್ಲ ದತ್ತಾಂಶ ಪಡೆದು ಅನ್ಯಾಯಕ್ಕೆ ಒಳಗಾಗಿರುವ ಜಾತಿಯವರಿಗೆ ಹೆಚ್ಚು ಪ್ರಮಾಣದಲ್ಲಿ ಮೀಸಲಾತಿ ನೀಡಲಿದೆ ಎಂದು ಹೇಳಿದರು.
ಆದ್ದರಿಂದ ಜಾತಿಗಣತಿ ಸರ್ವೇ ಕಾರ್ಯ ನಮ್ಮ ಅಳಿವು-ಉಳಿವು ಪ್ರಶ್ನೇ ಆಗಿದ್ದು, ಸರ್ಕಾರಿ ನೌಕರರು, ಚಿಂತಕರು, ಹೋರಾಟಗಾರರು ಮಾದಿಗ ಸಮುದಾಯದಲ್ಲಿ 061-ಮಾದಿಗ ಎಂದು ಬರೆಯಿಸುವಂತೆ ಜಾಗೃತಿ ಮೂಡಿಸಬೇಕು. ಅದೇ ರೀತಿ ಇತರ ಜಾತಿಯವರು ಮಾಡಬೇಕು ಎಂದು ತಿಳಿಸಿದರು.
ಅಕ್ಟೋಬರ್ 28, 2024ರಂದು ಎಲ್ಲ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಿದ್ದರಾಮಯ್ಯ ಸರ್ಕಾರ ತಡೆವೊಡ್ಡಿದ್ದಾರೆ. ಈ ಮೂಲಕ ಒಳಮೀಸಲಾತಿ ಜಾರಿಗೆ ತಮ್ಮ ಬದ್ಧತೆಯನ್ನು ಮುಖ್ಯಮಂತ್ರಿ ಪ್ರದರ್ಶಿಸಿದ್ದಾರೆ ಎಂದರು.
ರಾಜ್ಯದ ಯಾವುದೇ ಮೂಲೆಯಲ್ಲಿ ಬೇಡಜಂಗಮರು ಇಲ್ಲ. ಆದರೂ ಲಿಂಗಾಯಿತರು, ಹಿಂದುಳಿದವರು ಸೇರಿ ನಮ್ಮೆಲ್ಲರ ಪಾಲಿಗೆ ಗುರು ಸ್ಥಾನದಲ್ಲಿರುವ ವೀರಶೈವ ಜಂಗಮರು ಬೇಡಜಂಗಮರು ನಾವೆಂದು ಸುಳ್ಳು ದಾಖಲು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು.
ಆಂಧ್ರಮೂಲದಿಂದ ರಾಜ್ಯಕ್ಕೆ ವಲಸೆ ಬಂದಿದ್ದ ಬೇಡಜಂಗರ ಭಾಷೆ ತೆಲುಗು, ಸತ್ತ ಹಂದಿ-ಧನದ ಮಾಂಸ ಅವರ ಆಹಾರ. ಹೊಟ್ಟೆ ತುಂಬ ಮದ್ಯ ಸೇವಿಸುವ ಜನರು. ಮಾದಿಗರ ಬಳಿ ಬೇಡಿಕೊಂಡು ಬದುಕು ನಡೆಸುತ್ತಿದ್ದ ವರ್ಗ. ಈ ಜಾತಿ ಜನರು ರಾಜ್ಯದಲ್ಲಿ ನಶಿಸಿದೆ ಎಂದರು.
ಎಸ್ಸಿ ಪಟ್ಟಿಯಲ್ಲಿನ 101 ಜಾತಿಯಲ್ಲಿನ ಬೇಡಜಂಗಮರು ಒಂದಾಗಿದ್ದು, ಇದನ್ನೇ ದುರ್ಬಳಕೆ ಮಾಡಿಕೊಂಡು ಪರಿಶಿಷ್ಟ ತಟ್ಟೆಯಲ್ಲಿನ ಅನ್ನಕ್ಕೆ ಕನ್ನ ಹಾಕುವ ಕೆಲಸ ವೀರಶೈವರಲ್ಲಿನ ಕೆಲವರು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ವೇಳೆ ಬಹಳಷ್ಟು ಮಂದಿ ನಾವು ಬೇಡಜಂಗಮರು ಎಂದು ಬರೆಯಿಸುತ್ತಿದ್ದು, ಅಂತಹವ ವಿರುದ್ಧ ನ್ಯಾ.ನಾಗಮೋಹನ್ ದಾಸ್ ಆಯೋಗ ಕ್ರಮಕೈಗೊಳ್ಳಬೇಕು. ಜೊತೆಗೆ ಬೇಡಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವ ತಹಸೀಲ್ದಾರ್‍ಗಳನ್ನು ಜೈಲಿಗೆ ಹಾಕಬೇಕೆಂದು ಎಂದು ಆಗ್ರಹಿಸಿದರು.
ಬೇಡಜಂಗಮ ಪದವನ್ನೇ ಎಸ್ಸಿ ಪಟ್ಟಿಯಿಂದ ಕೈಬಿಡಲು ಮುಖ್ಯಮಂತ್ರಿ ಮುಂದಾಗಬೇಕು. ಈ ಕಾರ್ಯಕ್ಕೆ ಎಲ್ಲ ಪಕ್ಷಗಳು ಕೈಜೋಡಿಸಬೇಕು ಎಂದು ಕೋರಿದರು.
ಒಳಮೀಸಲಾತಿ ಜಾರಿಗೊಳ್ಳುವವರೆಗೂ ಸರ್ಕಾರಿ ಉದ್ಯೋಗ ನೇಮಕಾತಿಗೆ ತಡೆವೊಡ್ಡಲಾಗಿದೆ. ಇದೇ ರೀತಿ ಬ್ಯಾಕ್‍ಲಾಗ್ ಹುದ್ದೆ ಭರ್ತಿ ಮಾಡುತ್ತಿಲ್ಲ. ಒಂದೊಮ್ಮೆ ಮುಂದಾದರೆ ಅಧಿಕಾರಿಗಳ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಾತಿಗಣತಿ ಸಮೀಕ್ಷೆ ಕಾರ್ಯ ಆರಂಭದಲ್ಲಿ ಕುಂಟುತ್ತಾ ಸಾಗುತ್ತಿತ್ತು. ಈಗ ಸರಿದಾರಿಗೆ ಬಂದಿದೆ. ಏನಾದರೂ ಲೋಪ ಕಂಡುಬಂದಲ್ಲಿ ಆಯೋಗಕ್ಕೆ ದೂರು ನೀಡುತ್ತಿದ್ದು, ಅವರ ತಕ್ಷಣ ಸರಿಪಡಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಅನಿಲ್ ಕೋಟಿ, ಸಮರ್ಥರಾಯ್, ವಕೀಲರಾದ ಶರಣಪ್ಪ, ರವಿಚಂದ್ರ ಇತರರು ಉಪಸ್ಥಿತರಿದ್ದರು.