ಚಂದ್ರವಳ್ಳಿ ನ್ಯೂಸ್, ಚಿಕ್ಕೋಡಿ:
ನಾವ್ಯಾರು ಜಾತಿ ಗಣತಿಗೆ ವಿರೋಧ ಮಾಡಲ್ಲ, ಆದರೆ ಆಧಾರ್ ಲಿಂಕ್ ಮಾಡಿ ವೈಜ್ಞಾನಿಕ ರೀತಿಯಲ್ಲಿ ಗಣತಿ ಮಾಡಬೇಕು ಎಂದು ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಜಗದ್ಗುರು ಡಾ. ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ಶುಕ್ರವಾರ ಚಿಕ್ಕೋಡಿಯ ಯಡೂರ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಪ್ರಬಲವಾದ ಯಾವುದೇ ಒಂದು ಜಾತಿ ಕ್ರಮೇಣ ಬೆಳೆಯುತ್ತಾ ಹೋಗುತ್ತದೆ. ಪ್ರಬಲ ಕಾರಣ ಇಲ್ಲದೇ ಕುಂಠಿತವಾಗುವುದಿಲ್ಲ. ಅಂತಹ ಪ್ರಬಲ ಯಾವುದೇ ಕಾರಣ ಇಲ್ಲದೇ ವೀರಶೈವರ ಸಂಖ್ಯೆ ವರದಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಕೋಟಿಗೂ ಹೆಚ್ಚು ಇರಬೇಕಾಗಿತ್ತು. ಆದರೆ 60 ಲಕ್ಷಕ್ಕೆ ಸೀಮಿತ ಮಾಡಿರುವ ವರದಿ ಸರಿಯಾದ ವರದಿಯಲ್ಲ. ಮರು ಗಣತಿ ಮಾಡಿ ಜಾರಿ ಮಾಡಲಿ ಎಂದು ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಜಗದ್ಗುರು ಡಾ. ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸರ್ಕಾರಜಾತಿಗಣತಿ ವರದಿಯನ್ನು ಜಾರಿ ಮಾಡಲು ಹೊರಟಿದೆ. ಜಾತಿಗಣತಿ ಪ್ರಾಮಾಣಿಕತೆಯಿಂದ ಕೂಡಿಲ್ಲ ಹಾಗೂ ಅವೈಜ್ಞಾನಿಕವಾಗಿದೆ. ಯಾವುದೇ ಆಧಾರವಿಲ್ಲದ ಜಾತಿಗಣತಿ ಇದು. ಮನೆ ಮನೆಗೆ ತೆರಳಿ ಜಾತಿಗಣತಿ ಮಾಡಿಲ್ಲ. ಸರ್ಕಾರ ಜಾತಿಗಣತಿಯನ್ನು ಜಾರಿ ಮಾಡಿದರೆ ಕೈ ಸುಟ್ಟಕೊಳ್ಳುತ್ತದೆ. ವೀರಶೈವ ಸಮಾಜಕ್ಕೆ ಅನ್ಯಾಯವಾಗದಂತೆ ಸಮಾಜದ ಶಾಸಕರು ಸಚಿವರು ನೋಡಿಕೊಳ್ಳಬೇಕು ಎಂದು ಶಾಸಕರಿಗೆ ಸ್ವಾಮೀಜಿ ಎಚ್ಚರಿಕೆ ನೀಡಿದರು.
ವೀರಶೈವ ಲಿಂಗಾಯತ ಸಮುದಾಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿಗಣತಿ ಜಾರಿಯಾಗದಂತೆ ನೋಡಿಕೊಳ್ಳಿ. ಜನಸಂಖ್ಯೆ ಬೆಳವಣಿಗೆ ಆಗುತ್ತದೆಯೇ ಹೊರತು ಕಡಿಮೆ ಆಗಲ್ಲ. ಜಾತಿ ಗಣತಿಯಲ್ಲಿ ವೀರಶೈವರ ಸಂಖ್ಯೆ 1 ಕೋಟಿಗಿಂತ ಹೆಚ್ಚಿರಬೇಕಿತ್ತು. ಕೇವಲ 65 ಲಕ್ಷಕ್ಕೆ ಸೀಮಿತಗೊಳಿಸಿದ್ದಾರೆ. ಈ ಜಾತಿಗಣತಿಯನ್ನು ಕೈಬಿಟ್ಟು ಆಧಾರ್ ಲಿಂಕ್ ಮಾಡಿ ಮರು ಜಾತಿ ಗಣತಿಗೆ ಸರ್ಕಾರ ಮುಂದಾಗಬೇಕು ಎಂದು ಸ್ವಾಮೀಜಿಗಳು ಸಲಹೆ ನೀಡಿ ಒತ್ತಾಯಿಸಿದರು.