ಜಾತಿ ಗಣತಿ ವರದಿ ಮಂಡನೆ, ಕಾಡುಗೊಲ್ಲ ಸಮಾಜ ಅಭಿನಂದನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸನ್ಮಾನ್ಯ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಜಯಪ್ರಕಾಶ್ ಹೆಗ್ಡೆ ಯವರು ನೀಡಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಶೈಕ್ಷಣಿಕ ವರದಿಯು ಮಂಡನೆಯಾಗಿರುವುದನ್ನು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘವು ಸ್ವಾಗತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಅಭಿನಂದಿಸಿದೆ.

ಬಹು ದಿನಗಳ ಬಹು ಜನಗಳ ಬಹು ಸಮಾಜಗಳ ಬೇಡಿಕೆಯಾಗಿತ್ತು. ರಾಜ್ಯದ ಹಿಂದುಳಿದ ವರ್ಗಗಳ ಬೇಡಿಕೆ ಈಡೇರುವ ಸಮಯ ಬಂದಿದೆ.

ಕೆಲ ಬಲಿಷ್ಠ ಪಟ್ಟಾಭದ್ರಾ ಶಕ್ತಿಗಳು ವರದಿಯಲ್ಲಿ ಏನು ಇದೆ ಎಂಬುದು ತಿಳಿಯದಿದ್ದರೂ  ವರದಿಯ ಬಗ್ಗೆ ತಳಬುಡ ಗೊತ್ತಿಲ್ಲದಿದ್ದರೂ ಕಿಡಿಗೇಡಿಗಳಂತೆ ವರದಿ ವಿರೋದಿಸುತ್ತಿದ್ದಾರೆ. ಜೊತೆಗೆ ಇದು ಜಾತಿ ಜನಗಣತಿಯ ವರದಿ ಎಂದು ಬಿಂಬಿಸುತ್ತಿದ್ದಾರೆ. ಜನಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂಬ ಸಾಮಾನ್ಯ ಜ್ಞಾನವು ಈ ಮುಖಂಡರಿಗೆ ಇಲ್ಲದಂತಾಗಿದೆ.

ದೇಶದಲ್ಲಿ ಆರ್ಥಿಕ ಸಾಮಾಜಿಕ ಮತ್ತು ಸ್ಥಾನಮಾನವನ್ನು ನಿರ್ದರಿಸಲು ದೇಶದ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವ ಕಾರ್ಯಕ್ಕೆ ಇಂತಹ ವರದಿಯು ಪೂರಕ ವಾಗಿರುತ್ತದೆ. ಬಹುಮುಖ್ಯವಾಗಿ ರಾಜ್ಯದ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ ಚುನಾವಣಾ ನಡೆಸಲು ಮತ್ತು ಚುನಾವಣೆಯಲ್ಲಿ ಮೀಸಲು ನಿಗದಿಪಡಿಸಲು ಸಹ ಇಂತಹ ವರದಿಗಳು ಅತಿಮುಖ್ಯವಾಗುತ್ತವೆ‌.

ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸದರಿ ವರದಿಯನ್ನು ತಮ್ಮ ಸಚಿವ ಸಂಪುಟದಲ್ಲಿ ಮಂಡಿಸಿದ್ದಾರೆ. ಜೊತೆಗೆ ಅದರ ಬಗ್ಗೆ ಚರ್ಚಿಸಲು ಏಪ್ರಿಲ್-17 ರಂದು ಪ್ರತ್ಯೇಕ ಸಚಿವ ಸಂಪುಟ ಸಭೆ ಕರೆದಿರುವುದು ಸಮಾಜದ ನ್ಯಾಯದ ಪರಿಕಲ್ಪನೆಯಾಗಿದೆ.

ಈಗ ವರದಿಯು ಬಹಿರಂಗವಾಗಿರುವುದರಿಂದ ಅದರಲ್ಲಿ ಇರುವ ವಿಷಯಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಚರ್ಚಿಸಬಹುದು. ಸದರಿ ವರದಿಯನ್ನು ಓದದೆ ತಿಳಿಯದೆ ವಿರೋಧ ಮಾಡುವವರು ದಯವಿಟ್ಟು ಒಂದೊಂದು ವರದಿಯ ಪ್ರತಿ ಪಡೆದು ಅಧ್ಯಯನ ಮಾಡಲಿ. ಅದನ್ನು ಬಿಟ್ಟು ಎತ್ತು ಕರು ಹಾಕಿತು ಎಂದರೆ ಕೊಟ್ಟಿಗೆಗೆ ಕಟ್ಟಿ ಎನ್ನುವಂತಾಗಬಾರದು ಎಂದು ಕಾಡುಗೊಲ್ಲ ಸಮಾಜ ತಿಳಿಸಿದೆ.

ಸದರಿ ವರದಿಯನ್ನು ತಯಾರು ಮಾಡಲು ಲಕ್ಷಾಂತರ ಸರ್ಕಾರಿ ನೌಕರರು ಹಗಲು ರಾತ್ರಿ ಕಷ್ಟ ಪಟ್ಟು ಪ್ರತಿ ಮನೆ ಮನೆಗೂ ತೆರಳಿ ಮಾಹಿತಿ ಸಂಗ್ರಹಿಸಿ ಈ ವರದಿ ತಯಾರು ಮಾಡಿದ್ದಾರೆ. ಈ ವರದಿಯನ್ನು ತಯಾರಿಸಲು ಸರ್ಕಾರದ ಸುಮಾರು 175 ಕೋಟಿ ಹಣ ವ್ಯಯವಾಗಿರುತ್ತದೆ. ಸರ್ಕಾರದ ಹಣ ಸಾರ್ವಜನಿಕರ ಹಣವಾಗಿರುತ್ತದೆ. ಸರ್ಕಾರದ ಹಣ ಸರ್ಕಾರಿ ನೌಕರರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ ಆಗಿರುತ್ತದೆ.

ಆದ್ದರಿಂದ ಶೋಷಿತ ಸಮುದಾಯಗಳ ಮತ್ತು ಹಿಂದುಳಿದ ವರ್ಗಗಳ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವರದಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ನೀಡಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಆಶಾಕಿರಣವಾಗಬೇಕು. ನಿಮ್ಮೊಂದಿಗೆ ರಾಜ್ಯದ ಹಿಂದುಳಿದ ವರ್ಗಗಳು ಸದಾ ಬೆನ್ನಿಗೆ ನಿಲ್ಲುತ್ತವೆ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿಯ ಸಂಘದ ರಾಜ್ಯಾಧ್ಯಕ್ಷ ಸಿ ಶಿವು ಯಾದವ್ ತಿಳಿಸಿದ್ದಾರೆ.

Share This Article
error: Content is protected !!
";