ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕುರಿತಂತೆ ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದೆ.
ಸಂಪುಟಸಭೆಯಲ್ಲಿ ಹಲವು ಸಚಿವರು ವಿರೋಧ ಮಾಡಿದ್ದರಿಂದ ಸಚಿವ ಸಂಪುಟ ಮುಂದೂಡಲಾಗಿದೆ.
ಜಾತಿ ಗಣತಿ ವರದಿ ಕಳೆದ ಸಂಪುಟ ಸಭೆಯಲ್ಲಿ ಮಂಡನೆಯಾಗಿತ್ತು. ಬಳಿಕ ಸಂಪುಟದ ಎಲ್ಲ ಸದಸ್ಯರಿಗೂ ವರದಿಯ ದತ್ತಾಂಶ, ಪ್ರಮುಖ ಶಿಫಾರಸು ಒಳಗೊಂಡ ಪ್ರತಿ ನೀಡಲಾಗಿತ್ತು. ಆ ಬಳಿಕ ಏ.17 ರ ಗುರುವಾರ ವಿಶೇಷ ಸಚಿವ ಸಂಪುಟ ನಡೆಸುವುದಾಗಿ ತಿಳಿಸಲಾಗಿತ್ತು. ವರದಿಯ ಬಗ್ಗೆ ಅಧ್ಯಯನ ನಡೆಸಿಕೊಂಡು ತಮ್ಮ ತಮ್ಮ ಸಮುದಾಯಗಳ ಜತೆ ಚರ್ಚೆ ಮಾಡಿ ಬಂದ ಸಚಿವರು ಸಂಪುಟ ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಒಪ್ಪಿಕೊಳ್ಳಬೇಕೋ ಅಥವಾ ನಿರಾಕರಣೆ ಮಾಡಬೇಕೋ ಎಂಬ ನಿಟ್ಟಿನಲ್ಲಿ ತೀರ್ಮಾನ ಆಗಲಿದೆ ಎಂದು ಹಲವು ಸಚಿವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಮುಂದಿನ ಸಚಿವ ಸಂಪುಟದಲ್ಲಿ ಮತ್ತೆ ಜಾತಿ ಗಣತಿ ವರದಿ ಜಾರಿ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.
ವಿರೋಧ?
ಜಾತಿ ಗಣತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟ ಜಾತಿ ಸಚಿವರು ಜಾತಿ ಗಣತಿ ಸ್ಪಷ್ಟವಾಗಿಲ್ಲ, ವೈಜ್ಞಾನಿಕ ರೀತಿಯಲ್ಲಿ ಆಧಾರ್ ಲಿಂಕ್ ಮಾಡಿ ಮರು ಜಾತಿ ಗಣತಿ ಮಾಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.
ಜಾತಿ ಗಣತಿ ಬಗ್ಗೆ ವಿವಿಧ ಸಮುದಾಯಗಳ ಹಲವು ಸಚಿವರು ಅಪಸ್ವರ ವ್ಯಕ್ತಪಡಿಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಸಚಿವರುಗಳ ಬಳಿ ಮಾತನಾಡಿದರು ಎನ್ನಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಗಣಿ, ತೋಟಗಾರಿಕೆ ಸಚಿವ ಎಸ್‌ಎಸ್‌ಮಲ್ಲಿಕಾರ್ಜುನ ಅವರು, ಜಾತಿ ಗಣತಿ ವರದಿ ಕುರಿತು ಯಾವುದೇ ತೀರ್ಮಾನ ಆಗಿಲ್ಲ. ಹಲವು ಸಚಿವರಿಗೆ ಗೊಂದಲಗಳಿವೆ. ಆ ಗೊಂದಲಗಳ ಬಗ್ಗೆ ಪ್ರಶ್ನೆ ಮಾಡಿ ಗೊಂದಲ ನಿವಾರಿಸುವಂತೆ ಕೋರಿದ್ದೇವೆ. ನಮ್ಮ ತಂದೆಯವರಿಗೆ ಜಾತಿ ಗಣತಿಗೆ ವಿರೋಧವೇನಿಲ್ಲ. ಅವರು ಕೂಡ ಹಲವು ಪ್ರಶ್ನೆಗಳನ್ನು ಮಾಡಿ ವರದಿ ಬಗ್ಗೆ ಗೊಂದಲ ಪರಿಹಾರ ಪಡೆದುಕೊಳ್ಳುತ್ತಿದ್ದಾರಷ್ಟೇ ಎಂದು ಮಲ್ಲಿಕಾರ್ಜುನ್ ಅವರು ಮಾಧ್ಯಮಗಳಿಗೆ ತಿಳಿಸಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಜಾತಿ ಗಣತಿ ವರದಿ ಕುರಿತು ಯಾವುದೇ ಗುಡ್‌ನ್ಯೂಸ್‌ಏನಿಲ್ಲ. ಸದ್ಯಕ್ಕೆ ನಿರ್ಧಾರ ಕೈಗೊಂಡಿಲ್ಲ. ಮತ್ತಷ್ಟು ಚರ್ಚೆ ಬಳಿಕ ತೀರ್ಮಾನ ಮಾಡಲಾಗುತ್ತದೆ. ಯಾರ ವಿರೋಧವೂ ಇಲ್ಲ. ಸಾಕಷ್ಟು ಚರ್ಚೆಯಾಗಿದೆ ಎಂದು ತಿಳಿಸಿದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಬಗ್ಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಸಚಿವರು ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರಮಾಧ್ಯಮದವರೊಂದಿಗೆ ಮಾತನಾಡಿ, ಹಲವು ಸಚಿವರು ಜಾತಿ ಗಣತಿ ವರದಿಯ ದತ್ತಾಂಶಗಳ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದಾರೆ. ತಾಂತ್ರಿಕ ಅಂಶಗಳು ಅವಶ್ಯ ಎಂದು ಭಾವಿಸಿ, ಹಿರಿಯ ಅಧಿಕಾರಿಗಳಿಗೆ ತಾಂತ್ರಿಕ ದತ್ತಾಂಶ ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.
ಜಾತಿ ಗಣತಿ ವರದಿ ಕುರಿತು ಮಹತ್ವದ ಚರ್ಚೆ ಆಗಿದ್ದರೂ ಅದು ಅಪೂರ್ಣವಾಗಿದೆ ಕೆಲ ಸಚಿವರು ತಾಂತ್ರಿಕ ಮಾಹಿತಿ ನೀಡಬೇಕೆಂದು ಕೋರಿದ್ದಾರೆ. ಸಚಿವರುಗಳು ಕೇಳಿರುವ ತಾಂತ್ರಿಕ ಮಾಹಿತಿ ಒದಗಿಸಲಾಗುವುದು. ಇಲಾಖೆ ಸಚಿವನಾಗಿ ಮಾಹಿತಿ ಒದಗಿಸುತ್ತೇನೆ. ಮೇ 2 ರಂದು ನಡೆಯುವ ಸಚಿವ ಸಂಪುಟ ಸಭೆಗೆ ವರದಿಯ ವಿಷಯ ಚರ್ಚೆಗೆ ಬರಲಿದ್ದು, ವಿಸ್ತೃತವಾದ ಚರ್ಚೆ ನಡೆಯಲಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಯಾರು ಕೂಡ ಏರು ಧ್ವನಿಯಲ್ಲಿ ಮಾತನಾಡಿಲ್ಲ, ಅದೆಲ್ಲವೂ ಕೇವಲ ಊಹಾಪೋಹಗಳು ಎಂದು ಪ್ರಶ್ನೆಯೊಂದಕ್ಕೆ ಸಚಿವ ಶಿವರಾಜ್ ತಂಗಡಗಿ ಅವರು ಸ್ಪಷ್ಟಪಡಿಸಿದರು.