ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯು ಜಾತಿ ಗಣತಿ ಎಂದೇ ಹೆಚ್ಚು ಚರ್ಚೆಯಲ್ಲಿದೆ. ಸಚಿವ ಸಂಪುಟವು ಈ ವರದಿಯನ್ನು ಪರಿಶೀಲಿಸಲಿದೆ ಮತ್ತು ಈ ಬಗ್ಗೆ ಚರ್ಚಿಸಲಿದೆ ಹಾಗೂ ವಾಸ್ತವಾಂಶಗಳ ಆಧಾರದ ಮೇಲೆ ಎಲ್ಲರಿಗೂ ನ್ಯಾಯ ಒದಗಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿಎಂ ಶಿವಕುಮಾರ್ ಹೇಳಿದರು.
ಬೆಳಗಾವಿ ಮತ್ತು ಮಂಗಳೂರಿಗೆ ನಿನ್ನೆ ಭೇಟಿ ನೀಡಿದ್ದರಿಂದ ನಾನು ಇನ್ನೂ ವರದಿ ನೋಡಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಬೇಕು. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಈ ವರದಿಯನ್ನು ಶುಕ್ರವಾರ ಸಚಿವ ಸಂಪುಟದ ಮುಂದೆ ಇಡಲಾಗಿದ್ದು, ಏಪ್ರಿಲ್ 17ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಲಿದೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಕಳೆದ ವರ್ಷ ಫೆಬ್ರವರಿ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿಯನ್ನು ಸಲ್ಲಿಸಿತ್ತು. ವರದಿಯ ಬಗ್ಗೆ ಸಮಾಜದ ಕೆಲವು ವರ್ಗಗಳು ಆಕ್ಷೇಪಣೆ ಎತ್ತಿವೆ ಹಾಗೂ ಆಡಳಿತಾರೂಢ ಕಾಂಗ್ರೆಸ್ನ ಒಳಗಿನಿಂದಲೇ ವರದಿಯ ವಿರುದ್ಧ ಮಾತುಗಳು ಕೇಳಿ ಬಂದಿವೆ.
2015ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಒಟ್ಟು 5.98 ಕೋಟಿ ನಾಗರಿಕರ ಪೈಕಿ, ಸುಮಾರು 70 ಪ್ರತಿಶತ ಅಥವಾ 4.16 ಕೋಟಿ ಜನ ವಿವಿಧ ಒಬಿಸಿ ವರ್ಗಗಳ ಅಡಿಯಲ್ಲಿ ಬರುತ್ತಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಬಿಸಿ ಕೋಟಾವನ್ನು ಪ್ರಸ್ತುತ ಶೇಕಡಾ 32 ರಿಂದ 51 ಕ್ಕೆ ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ ಎಂದು ಮೂಲಗಳು ಹೇಳಿವೆ.
ಎಸ್ಸಿಗಳಿಗೆ ಈಗಿರುವ ಶೇಕಡಾ 17 ಮತ್ತು ಎಸ್ಟಿಗಳಿಗೆ ಶೇಕಡಾ 7ರಷ್ಟು ಮೀಸಲಾತಿಯೊಂದಿಗೆ ಒಬಿಸಿಗಳಿಗೆ ಶೇಕಡಾ 51ರಷ್ಟು ಮೀಸಲಾತಿ ಕೋಟಾ ನೀಡುವ ಮೂಲಕ, ವರದಿಯ ಪ್ರಕಾರ ರಾಜ್ಯದ ಒಟ್ಟು ಮೀಸಲಾತಿಯು ಶೇಕಡಾ 75ಕ್ಕೆ ಏರಿಕೆಯಾಗಬಹುದು.
ಒಟ್ಟಾಗಿ 1.52 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್/ಎಸ್ಟಿ) ರಾಜ್ಯದ ಅತಿದೊಡ್ಡ ಸಮುದಾಯವಾಗಿದೆ ಎಂದು ವರದಿಯಲ್ಲಿ ಹೇಳಿರುವುದಾಗಿ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಬಿಸಿಗಳ ಜಾತಿವಾರು ವಿಭಜನೆ ಇನ್ನೂ ವರದಿಯಿಂದ ಲಭ್ಯವಿಲ್ಲವಾದರೂ, ಒಬಿಸಿಯ ಪ್ರವರ್ಗ-2ಬಿ ಅಡಿಯಲ್ಲಿ ಬರುವ ಮುಸ್ಲಿಮರು 75.25 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದರೆ, ಸಾಮಾನ್ಯ ವರ್ಗವು 29.74 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿದು ಬಂದಿದೆ.