ವಿಸ್ತಾರದ ಅರಿವಿಲ್ಲದ ಜಾತಿ ಸಂಶೋಧನೆಗಳು,ಜನಪದದ ಆಶಯಗಳನ್ನೇ ನೇಪತ್ಯಕ್ಕೆ ಸರಿಸಿಬಿಡುತ್ತವೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ನೆಲದ ಮಾತು 64
ಬಾವಿಯೊಳಗಿನ ಕಪ್ಪೆಗೆ ಬಾವಿಯೇ ಪ್ರಪಂಚ,ವಿಸ್ತಾರದ ಅರಿವಿಲ್ಲದ ಜಾತಿ ಸಂಶೋಧನೆಗಳು,ಜನಪದದ ಆಶಯಗಳನ್ನೇ ನೇಪತ್ಯಕ್ಕೆ ಸರಿಸಿಬಿಡುತ್ತವೆ,ನಿಷಾದಪುರದ ರುದ್ರಮುನಿಯ ಐಕ್ಯ ಸ್ಥಳವನ್ನ,ಇಂದಿನ ನಾಯಕನಹಟ್ಟಿಯ, ಹೊರಮಠದ ತಿಪ್ಪಯ್ಯನ ಸಮಾಧಿಸ್ತರವಾಗಿರುವ, ಸ್ಥಳಕ್ಕೂ ಸಂಬಂಧ ಕಲ್ಪಿಸಿ, ಅವರೇ ಇವರೆನ್ನುವ ಲೇಖನಗಳು ಹುಟ್ಟಿಕೊಂಡಿವೆ.ಮಾದಿಗ ಮೂಲದ ಮಾದಪ್ಪನನ್ನು, ಹೊಲೆಯ ಮೂಲದ ಮಂಟಯ್ಯನನ್ನು,ಶೈವೀಕರಣ ಗೊಳಿಸಿರುವ ಹಾಗೆ,ಬೇಡ ಮೂಲದ ತಿಪ್ಪಯ್ಯನಿಗೆ, ಮಡಿವಂತಿಕೆಯ ಜಾಡು ಹಿಡಿಸಿರುವುದು,

ಕುಚೋದ್ಯದ ಸಂಗತಿಯಲ್ಲದೇ ಮತ್ತೇನು.ಇನ್ನೂ ಮುಂದುವರೆದೂ ಆ ಮಹಾ ಸಂಶೋಧಕ,ನಾನು ಹೇಳಿದ್ದೇ ಸತ್ಯವೆಂಬಂತೆ ಪ್ರತಿಪಾದಿಸಿ,ಶೂನ್ಯ ಪೀಠಕ್ಕೆ ತಳುಕು ಹಾಕಿ,ಮುರುಘ ಮಠದ ಪರಂಪರೆಯ ಗುರುಗಳಲ್ಲಿ, ಇವರೊಬ್ಬರೆನ್ನುವ ವಾದಕ್ಕೆ ಕೈ ಹಾಕುತ್ತಾರೆ.ಹೊರಮಠದ ಬೇಡ ಕುಲದ ಪೂಜಾರಿಕೆಗೆ, ಜಂಗಮ ಮಗಳ ಸಂಬಂಧ ಕಲ್ಪಿಸಿ,ಮ್ಯಾಸರ ಕುಲವನ್ನ ಅವಮಾನಿಸಿರುವ ಪ್ರಯತ್ನ ಈ ಸಂಶೋಧಕನದ್ದು. ದಾಖಲೆಗಳ ಪ್ರಕಾರ,ಹೊರಮಠಕ್ಕೂ ಒಳ ಗುಡಿಗೂ,150 ವರ್ಷಗಳ ಆಚೀಚೆಯ ಅಂತರವಿದೆ.1850 ರ ಸರಿ ಸುಮಾರಿನಲ್ಲಿ, ನಾಯಕನಹಟ್ಟಿ ಕೆಂಗಪ್ಪಗೌಡರ ಕಾಲದ, ಹೊಸಗುಡಿ ಎಂಬ ಉಲ್ಲೇಖ ಜನಪದದಲ್ಲಿ ಸಿಗುತ್ತದೆ.

ಹೊರಮಠ ಕಟ್ಟಡದ ಕಾಲ,ದುರ್ಗದ ಪಾಳೆಗಾರ ಭರಮಣ್ಣ ನಾಯಕರ ಆಳ್ವಿಕೆಯ,1700 ರ ಆಸುಪಾಸಿನದ್ದು.150 ವರ್ಷಗಳ ಅಂತರದಲ್ಲಿ,ಈ ಒಳಗುಡಿ ಸ್ಥಳ ಏನಾಗಿರಬಹುದು?ಈ ಸಂಶಯವಾದರೂ ಸಂಶೋಧಕನಿಗೆ ಬರಬೇಕಿತ್ತಲ್ಲ!ಕೆಳ ಸ್ಥರದವರನ್ನು, ಮೆಚ್ಚಿಸುವಂತಹ ಬರಹಗಳಿಂದ ಹೆಗಲಿಗೆ ಕೈ ಹಾಕುತ್ತಲೇ,ಪೂಜಾರಿಕೆಗೆ ಜಂಗಮ ಮಗಳ ಮದುವೆ ತೋರಿಸಿ,ಬೇಡರ ತಿಪ್ಪಯ್ಯನನ್ನ, ತಿಪ್ಪೇರುದ್ರಸ್ವಾಮಿ ಮಾಡಿರುವುದೊಂದು ಮಹಾ ಸಂಶೋದನೆ ಈತನದ್ದು.ಡಾ.ಮೀರಾಸಾಬಿಹಳ್ಳಿ ಶಿವಣ್ಣನವರು ಪ್ರಕಟಿಸಿಕೊಂಡಿರುವ ಹಾಗೆ, ನಾಯಕನಹಟ್ಟಿ ಪಾಳೇಗಾರರ ವಂಶಾವಳಿಯಲ್ಲಿ,

ಹೊರಜಾತಿಯ ಸಂಬಂಧಗಳನ್ನು ಬರೆದಿರುವ ಪ್ರಕಾರ,ಜಂಗಮ ಮಗಳನ್ನು ಬಿಂಬಿಸಬಹುದಿತ್ತಲ್ಲ? ಮಲ್ಲಪ್ಪ ನಾಯಕನ ಎರಡನೇ ಮಗ, ಚೆನ್ನಯ್ಯರಾಜನ ಹೆಂಡತಿ ಲಕ್ಷ್ಮಮ್ಮ,ರಡ್ಡೇರ ಪಾಲಯ್ಯನ ಮಗಳು. ಚಿಕ್ಕಮಲ್ಲಪ್ಪ ನಾಯಕನ ಹೆಂಡತಿ,ಭರಮಣ್ಣ ನಾಯಕನ ಮಗಳು ದ್ಯಾಮವ್ವನಾಗತಿ.ಇವರ ಮಗ ಪೆದ್ದಯ್ಯನ ಹೆಂಡತಿ, ಕುಂಚೊಕ್ಕಲಿಗರ ಮಗಳು ಅಂಕಮ್ಮ.(ಹೆಚ್ಚಿನ ವಿವರಗಳಿಗೆ ವಂಶಾವಳಿಯನ್ನ ಗಮನಿಸಬಹುದು)ಇಷ್ಟು ಸವಿಸ್ತಾರವಾಗಿ ಇರುವ ವಂಶಾವಳಿಯಲ್ಲಿ,ಜಂಗಮ ಮಗಳೇ ಇಲ್ಲದಿರುವುದು ಹಾಸ್ಯಸ್ಪದವಲ್ಲವೇ.

ಮ್ಯಾಸರಲ್ಲಿ ಬುಡಕಟ್ಟು ದೈವಗಳ ಮುದ್ರೆಯಾದವರಿಗೆ,ದೈವದ ಪ್ರತಿನಿಧಿಯಂತೆ ಗೌರವಿಸಿ, ಸ್ವಾಮಿಯಾಗಿ ಕರೆಯುವ ವಾಡಿಕೆಯಿದೆ.ಇವರು ಅನ್ನ ಆಹಾರಗಳನ್ನು ಹೊರಗಡೆ ಸೇವಿಸುವುದಿಲ್ಲ,ನಡೆದೇ ಓಡಾಡುತ್ತಾರೆ ವಾಹನಗಳಲ್ಲಿ ಪ್ರಯಾಣಿಸುವುದಿಲ್ಲ, ಕುಲದ ಯಾರ ಮನೆಗೆ ಬಂದರೂ ಹಾಲು,ಹಣ್ಣು ಹಂಪಲು, ಎಳನೀರುಗಳನ್ನ ಸೇವಿಸುತ್ತಾರೆ.ಈ ಸಾಮ್ಯತೆ ಕಾಡುಗೊಲ್ಲರಲ್ಲಿಯೂ ಕಂಡುಬರುತ್ತದೆ, ಮುದ್ರೆಯಾದ ಈ ಪೂಜಾರಿಗಳು,ಅವರವರ ಕುಲಗಳಿಗೆ ಜಂಗಮರೇ,ಪ್ರತಿ ಸಮುದಾಯಗಳಲ್ಲೂ ಇಂತಹ ಕುಲ ಜಂಗಮರಿದ್ದೇ ಇರುತ್ತಾರೆ.

ಪಾಳೆಗಾರರ ಆಳ್ವಿಕೆಯ ಕಾಲವದು, ಹೆದರಿಕೆಯಿಂದ ಹಿಂಜರಿದು,ವಂಶಾವಳಿಯಲ್ಲಿ ಬರೆಯದೆ ಬಿಟ್ಟಿರಬಹುದು ಅನ್ನುವ,ಈ ಸಂಶಯಕಾರನ ಊಹೆಯ ಉತ್ತರ ಅದೆಷ್ಟು ಸರಿ? ಒಂದು ಸಮುದಾಯಕ್ಕೆ ಸೀಮಿತವಾಗಿರುವ,ಈತನ ಶೋಧನೆಯೇ ಒಂದು ಕಪೋಲ ಕಲ್ಪಿತ ಕಥೆ. ಕೇಳುವವರಿಲ್ಲವೆಂದು ಹೇಗೆ ಬೇಕೋ ಹಾಗೆ ತಿರುಚಿದರೆ ಸಂಶೋಧನೆ ಹೇಗಾಗುತ್ತೇ. ತಿಪ್ಪಯ್ಯ ಒಂದು ಕುಲಕ್ಕೆ ಸೀಮಿತವಲ್ಲ,ಸರ್ವ ಸಮುದಾಯದ ಗುರುಗಳು,

ಚಳ್ಳಕೆರೆ,ಮೊಳಕಾಲ್ಮೂರು ಭಾಗ,ಒಟ್ಟಾರೆ ಚಿತ್ರದುರ್ಗ ಜಿಲ್ಲೆ,ಹಾಗೂ ನಾಡಿನ ಸಾವಿರಾರು ಹಳ್ಳಿಗಳ ಪ್ರತಿ ಮನೆಯಲ್ಲಿಯೂ,ಮ್ಯಾಸ, ಗೊಲ್ಲ,ಉಪ್ಪಾರ,ಕುರುಬ, ಮಾದಿಗ,ಹೊಲೆಯ,ಒಕ್ಕಲಿಗ,ಲಿಂಗಾಯಿತ,ರೆಡ್ಡಿ ಇನ್ನೂ ಮುಂತಾದವರಲ್ಲಿ, ಅವರವರಿಗೆ ಅನುಗುಣವಾಗಿ,ಪ್ರತೀ ಮನೆಗಳಲ್ಲೂ,ಹೆಣ್ಣು ಗಂಡುಗಳ ಹೆಸರುಗಳು, ತಿಪ್ಪಯ್ಯನ ಹೆಸರಿನೊಂದಿಗೆ ಗೌರವಿಸಿವೆ.ಲಿಂಗಾಯಿತರು ತಿಪ್ಪಯ್ಯನನ್ನ ಗೌರವಿಸುತ್ತ, ರುದ್ರ,ಮುನಿ,ಸ್ವಾಮಿಯನ್ನ ಸಮೀಕರಿಸಿ,ತಮ್ಮ ಹೆಸರುಗಳಿಗೆ ಬಳಿಸಿ ಕೊಂಡಿರಬಹುದು,ಇದರಲ್ಲಿ ತಪ್ಪೇನಿದೆ.

ತಳ ಸಮುದಾಯಗಳು, ಭಕ್ತಿಯಿಂದ ದೇವಾಲಯಗಳಿಗೆ ಹೋದರೆ,ಬಟ್ಟೆ ಬಿಚ್ಚಿಸಿ ಮಾನವೀಯತೆಯನ್ನು ಕೆಣಕುವ ಮಡಿವಂತಿಕೆ ದೇವಾಲಯಗಳು,ಹಾಗೇ ಇಂತಹ ಅನೇಕ ಜಾತಿ ಸಂಶೋಧಕರಿಗೂ,ಇದು ಗೊತ್ತಿದೆಯೋ!ಗೊತ್ತಿಲ್ಲವೋ?

ಪ್ರತಿ ಸಮುದಾಯಗಳಲ್ಲೂ ಶೈವ ವೈಷ್ಣವರಿದ್ದಾರೆ.ಹತ್ತಿರಕ್ಕೂ ಬಿಟ್ಟುಕೊಳ್ಳದ ನಿಮ್ಮಂತಹ ಮಡಿವಂತಿಕೆಯ ನೀಚರಿಂದ ದೂರವಿರಬಹುದು ಅಷ್ಟೇ. ಯಾವುದೇ ಶರಣ ಸಂತ ಅವಧೂತ ಇಂತಹ ಜಾತಿಗಳಿಂದಲೇ ಹುಟ್ಟಬೇಕೆನ್ನುವ ಕರಾರಿನ ದೈವಲಿಕಿತವೇನಾದರೂ ಇದೆಯೇ.ವರ್ತಮಾನದಲ್ಲಿ ಸತ್ಯವನ್ನು ಒಪ್ಪಿಕೊಳ್ಳುವ ಕೆಲಸಗಳಾಗಬೇಕೆ ವಿನಃ ಸಮುದಾಯಗಳಿಗೆ ಕೊಳ್ಳಿ ಇಡುವ ಕೆಲಸಗಳಾಗಬಾರದು. ಇತ್ತೀಚೆಗೆ ಪತ್ರಿಕೆಗಳಲ್ಲಿ ಕಂಡ ಹಾಗೆ ಹಟ್ಟಿ ಮಲ್ಲಪ್ಪ ನಾಯಕನ ಸಮಾಧಿಯನ್ನು ನೆಲಸಮ ಮಾಡಿ ನಿವೇಶನ ಮಾಡುವ ಹುನ್ನಾರ, ಸದ್ದಿಲ್ಲದೆ ನಡೆಯುತ್ತಿದೆಯೆಂಬ, ಸುದ್ದಿಗಳು ಹರಿದಾಡುತ್ತಿವೆ.

ಇಂದಿನ ದಿನಮಾನಗಳಲ್ಲಿ ಯಾರದ್ದೋ ಆಸ್ತಿ,ಯಾರ ಪಾಲಿಗೋ ಬಂದಿರಬಹುದು, ಅದು ನಾಯಕನಹಟ್ಟಿ ಕಟ್ಟಿದ ವಂಶಸ್ಥನ ಸಮಾಧಿಯಲ್ಲವೇ,ಊರು ಅದಕ್ಕೊಂದು ಗೌರವ ಸಲ್ಲಿಸಬೇಕಲ್ಲವೇ,ಆ ಸಮಾಧಿ ನಾಯಕನ ಹಟ್ಟಿಯ ಪ್ರತಿಯೊಬ್ಬ ನಾಗರೀಕನ ಸ್ವತ್ತು,ಇತಿಹಾಸದ ದಾಖಲೆ ಅಳಿಸಿದರೆ,ಭವಿಷ್ಯದಲ್ಲಿ ತಿಪ್ಪಯ್ಯ ಕಳೆದು ಹೋಗುತ್ತಿರುವ ಹಾಗೆ, ಹೊರಮಠಕ್ಕೂ ಲಿಂಗಧಾರಣೆಯಾಗಿ,ಮ್ಯಾಸರ ಪೂಜಾರಿಕೆ,ಕೈ ತಪ್ಪುವ ದಿನವೂ ದೂರವಿಲ್ಲ.

ಹಾಗೆಯೇ ಮಲ್ಲನಾಯಕನ ಹಟ್ಟಿಯೂ ಕಳೆದು ಹೋಗಿ, ಶ್ರೀ ತಿಪ್ಪೇರುದ್ರನಹಟ್ಟಿ ಎಂಬುದಾಗಿ ಬದಲಾದರೂ ಸಂದೇಹ ಪಡಬೇಕಿಲ್ಲ.
ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.

- Advertisement -  - Advertisement - 
Share This Article
error: Content is protected !!
";