ಚಂದ್ರವಳ್ಳಿ ನ್ಯೂಸ್, ಕೊಡಗು:
ಕೆ.ಆರ್.ಎಸ್‌ಡ್ಯಾಂನಲ್ಲಿ ಮುಂದಿನ ದಿನಗಳಲ್ಲಿ ಕಾವೇರಿ ಆರತಿ ಮಾಡುವ ಉದ್ದೇಶ ಇದೆ. ಈ ಕಾರ್ಯಕ್ಕಾಗಿ ಹಣ ಮೀಸಲಿಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಹೇಳಿದರು.
ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿಶ್ವ ಜಲದಿನದೊಂದು ಬೆಂಗಳೂರಿನ ಸ್ಯಾಂಕಿಟ್ಯಾಂಕಿ ಬಳಿ ಕಾವೇರಿ ಪೂಜೆ ಹಾಗೂ ಕಾವೇರಿ ಆರತಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ನಮ್ಮ ನೀರು- ನಮ್ಮ ಹಕ್ಕು ಎಂದು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದೆವು. ಅದೇ ರೀತಿ ಈಗ ಕಾವೇರಿ ಐದನೇ ಹಂತ ಕಾರ್ಯರೂಪಕ್ಕೆ ಬಂದಿದೆ. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಮುನ್ನ ಕಾವೇರಿ ತಾಯಿ ಉಗಮ ಸ್ಥಾನ ಭಾಗಮಂಡಲದಲ್ಲಿ ತಾಯಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.
ಕಾವೇರಿ ಉಗಮ ಸ್ಥಾನ ಭಾಗಮಂಡಲದಲ್ಲಿ ಕಾವೇರಿ ನದಿಯ ನೀರನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕೆ.ಆರ್.ಎಸ್.ಡ್ಯಾಂ ನಲ್ಲೂ ಕಾವೇರಿ ಆರತಿ ಮಾಡುವ ಗುರಿಯಿದೆ. ಇದಕ್ಕಾಗಿ ಹಣ ಮೀಸಲಿಡಲಾಗಿದೆ” ಎಂದರು.
“ನೀರು ಉಳಿಸಿ” ಅಭಿಯಾನಕ್ಕೆ ಕರೆ ನೀಡಿದ ಉಪ ಮುಖ್ಯಮಂತ್ರಿ, ನಾನು ನೀರನ್ನು ಉಳಿಸುತ್ತೇನೆ, ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ವಯಂ ಪ್ರೇರಿತರಾಗಿ ಪ್ರತಿಜ್ಞೆ ಮಾಡಿ, ವಿಡಿಯೋ ಮಾಡಿ, ಜಾಲತಾಣಗಳಲ್ಲಿ ಹಂಚಿಕೊಳ್ಳಿ, ಕಾವೇರಿ ಉಳಿಸಿ ಎಂದು ಅವರು ಕೇಳಿಕೊಂಡರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ಅವರು ಕರೆದಿರುವ ಸಭೆಗೆ ಭಾಗವಹಿಸಲು ನಾನು ಮತ್ತು ನಮ್ಮ ಪಕ್ಷದ ನಾಯಕರು ಹೋಗುತ್ತಿದ್ದೇವೆ. ರಾಜ್ಯಕ್ಕೆ ಹಾಗೂ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಈ ಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ರೆಡ್ಡಿ ಸಹ ಭಾಗವಹಿಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಪುಣ್ಯ ಸ್ನಾನ: ಡಿ.ಕೆ.ಶಿವಕುಮಾರ್ ಅವರು ಕೊಡಗು ಜಿಲ್ಲೆಯ ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲ ಹಾಗೂ ಕಾವೇರಿ, ಸುಜ್ಯೋತಿ, ಕನ್ನಿಕಾ ನದಿಗಳ ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ ಪವಿತ್ರ ತೀರ್ಥ ಸಂಗ್ರಹಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದ ಕಾವೇರಿ ಆರತಿಯ ಪುಣ್ಯ ಕಾರ್ಯಕ್ರಮದ ವೇಳೆ ಸಾರ್ವಜನಿಕರಿಗೆ ಈ ತೀರ್ಥ ವಿತರಿಸಲಾಯಿತು. ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.