ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ದೇಶದ ವಿವಿಧ 60 ಪ್ರದೇಶಗಳಲ್ಲಿ ಶೋಧ ನಡೆಸಿ ಮಾಹಿತಿ ಸಂಗ್ರಹ ಮಾಡಿದೆ.
ಸಿಬಿಐ ಗೇನ್‌ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಹಗರಣದ ಭಾಗವಾಗಿ ದೆಹಲಿ ಎನ್‌ಸಿಆರ್, ಪುಣೆ, ಚಂಡೀಗಢ, ನಾಂದೇಡ್, ಕೊಲ್ಹಾಪುರ, ಬೆಂಗಳೂರು ಸೇರಿದಂತೆ ವಿವಿಧ ನಗರಗಳ 60ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ.
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳು, ಅವರ ಸಹಚರರು ಮತ್ತು ಆದಾಯವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿರುವ ಶಂಕಿತ ಸಂಸ್ಥೆಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಸಂಸ್ಥೆ ಶೋಧ ನಡೆಸಿದೆ ಎಂದು ಸಿಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಏನಿದು ಬಿಟ್ ಕಾಯಿನ್ ಹಗರಣ:
2015ರಲ್ಲಿ ಈಗಾಗಲೇ ಮೃತಪಟ್ಟಿರುವ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್ ಮತ್ತಿತರರು ಗೇನ್‌ಬಿಟ್ ಕಾಯಿನ್ ಎಂಬ ಪಾಂಜಿ ಸ್ಕೀಂ ಪ್ರಾರಂಭಿಸಿದ್ದರು. ವೇರಿಯಬಲ್‌ಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಹೆಸರಿನಲ್ಲಿ ವಿವಿಧ ವೆಬ್‌ಸೈಟ್‌ಗಳ ಮೂಲಕ ಕಾರ್ಯಾರಂಭ ಮಾಡಿದ್ದ ಗೇನ್ ಬಿಟ್‌ಕಾಯಿನ್ ಕಂಪನಿ, 18 ತಿಂಗಳವರೆಗೆ ಬಿಟ್ ಕಾಯಿನ್‌ನಲ್ಲಿ ಮಾಸಿಕ ಶೇ.10 ರಷ್ಟು ಲಾಭದ ಭರವಸೆ ನೀಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿತ್ತು ಎನ್ನಲಾಗಿದೆ.
ಬಿಟ್ ಕಾಯಿನ್ ಖರೀದಿಸಲು ಮತ್ತು “ಕ್ಲೌಡ್ ಮೈನಿಂಗ್” ಒಪ್ಪಂದಗಳ ಮೂಲಕ ಗೇನ್‌ಬಿಟ್ ಕಾಯಿನ್‌ನೊಂದಿಗೆ ಹೂಡಿಕೆ ಮಾಡಲು ಹೂಡಿಕೆದಾರರನ್ನು ಪ್ರೋತ್ಸಾಹಿಸಲಾಗಿತ್ತು. ಆರಂಭದಲ್ಲಿ ಹೂಡಿಕೆದಾರರಿಗೆ ಲಾಭ ನೀಡಿದ್ದ ಗೇನ್‌ಬಿಟ್ ಕಾಯಿನ್‌ಕಂಪನಿಗೆ, 2017ರ ವೇಳೆಗೆ ಹೊಸ ಹೂಡಿಕೆಗಳು ಕಡಿಮೆಯಾಗಲಾರಂಭಿಸಿದ್ದವು. ಕುಸಿತದ ಹಂತ ತಲುಪಿದ್ದ ಕಂಪನಿ, ಕಂಪನಿಯ ನಷ್ಟ ಮುಚ್ಚಿಹಾಕುವ ಪ್ರಯತ್ನದಲ್ಲಿ ಏಕಪಕ್ಷೀಯವಾಗಿ ಪಾವತಿಗಳನ್ನು ಕಡಿಮೆ ಮೌಲ್ಯದ ತನ್ನ ಆಂತರಿಕ ಕ್ರಿಪ್ಟೋಕರೆನ್ಸಿಯಾದ ಎಂಸಿಎಪಿ(MCAP)ಗೆ ಬದಲಾಯಿಸಲಾಗಿತ್ತು.
ಏಕಾಏಕಿ ಬದಲಾಯಿಸಿದ್ದು ಹೂಡಿಕೆದಾರರ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಭಾರಿ ಪ್ರಮಾಣದ ವಂಚನೆ ಮತ್ತು ಹಣ ವರ್ಗಾವಣೆ ಆರೋಪದಡಿ ಗೇನ್ ಬಿಟ್‌ಕಾಯಿನ್ ಕಂಪನಿಯ ವಿರುದ್ಧ ದೇಶದ ವಿವಿಧೆಡೆ ಎಫ್‌ಐಆರ್‌ಗಳು ದಾಖಲಾಗಿದ್ದವು. ಹಗರಣದ ವ್ಯಾಪಕ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು.
ಇದುವರೆಗೂ ಗೇನ್ ಬಿಟ್‌ಕಾಯಿನ್ ಕಂಪನಿಗೆ ಸೇರಿದ ಕ್ರಿಪ್ಟೋ ವ್ಯಾಲೆಟ್‌ಗಳು, ಡಿಜಿಟಲ್ ಸಾಕ್ಷ್ಯಗಳು, ಡಿಜಿಟಲ್ ಸಾಧನಗಳು, ಇಮೇಲ್‌ಗಳು/ ಕ್ಲೌಡ್ ಸ್ಟೋರೇಜ್‌ಗಳನ್ನು ವಶಪಡಿಸಿಕೊಂಡಿರುವ ಸಿಬಿಐ ತನ್ನ ತನಿಖೆ ಮುಂದುವರೆಸಿದೆ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.