ಚಂದ್ರವಳ್ಳಿ ನ್ಯೂಸ್, ದೆಹಲಿ:
ಎಲ್ಲಾ ಗೊಂದಲಗಳಿಂದ ಮುಕ್ತವಾದ ಮನಸ್ಸೇ ಯೋಗ ಎಂದು ಪತಂಜಲಿ ಮಹರ್ಷಿಗಳು ಹೇಳಿರುವಂತೆ ಈಗಿನ ಕಾಲಘಟ್ಟಕ್ಕೆ ಯೋಗವು ಎಲ್ಲರಿಗೂ ತುಂಬಾ ಅವಶ್ಯಕವಾಗಿದೆ. ಏಕೆಂದರೆ ಈಗಿನ ಅವಿಶ್ರಾಂತ ಕೆಲಸ ಕಾರ್ಯದಿಂದ ಸದಾ ಮನಸ್ಸಿನಲ್ಲಿ ದುಗುಡ ತುಂಬಿಕೊಂಡಂತಹ ಎಲ್ಲರಿಗೂ ಯೋಗ ತುಂಬಾ ಉಪಯುಕ್ತ.
ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ಒಗ್ಗೂಡಿಸುತ್ತದೆ. ಯೋಗಾಭ್ಯಾಸವು ದೇಹವನ್ನು ಬಲಪಡಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆತ್ಮದೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಈ ಯೋಗವನ್ನು ನಮ್ಮ ಭಾರತ ದೇಶವು ಇಡೀ ವಿಶ್ವಕ್ಕೆ ಪರಿಚಯಿಸಿ ವಿಶ್ವಕ್ಕೆ ನಾವು ನೀಡಿದ ಅತಿದೊಡ್ಡ ಕೊಡುಗೆ “ಯೋಗ” ಎಂದರೆ ಅತಿಶಯೋಕ್ತಿಯಾಗಲಾರದು.
69ನೇ ವಿಶ್ವ ಸಂಸ್ಥೆಯಲ್ಲಿ ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಯೋಗದ ಮಹತ್ವದ ಬಗ್ಗೆ ಪ್ರಸ್ಥಾಪಿಸಿ 177 ರಾಷ್ಟ್ರಗಳ ಒಮ್ಮತದಿಂದ ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ದೊಡ್ಡ ದಿನವಾದ “ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಲಾಯಿತು ಮತ್ತು ಅಂದಿನಿಂದ ಜೂನ್ 21ನ್ನು ವಿಶ್ವದ ಎಲ್ಲಾ ದೇಶಗಳು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಾರೆ.
ದಿನಾಂಕ 21/6/2025 ರಂದು ದೆಹಲಿ ಕರ್ನಾಟಕ ಸಂಘವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಭಾಗಿತ್ವದಲ್ಲಿ ಕೇಂದ್ರ ಆಯೂಷ್ ಮಂತ್ರಾಲಯದ “ಹರಿತ್ ಯೋಗ” ಎಂಬ ಪರಿಕಲ್ಪನೆಯಲ್ಲಿ ಸಂಘದ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಅಚ್ಚುಕಟ್ಟಾಗಿ ಆಚರಿಸಲಾಯಿತು.
ಯೋಗದ ಆರಂಭಕ್ಕೂ ಮೊದಲು ದೆಹಲಿ ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಪೂಜಾ ಪಿ ರಾವ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಭಾಗವಹಿಸಿದ್ದ ದೆಹಲಿ ಕನ್ನಡಿಗರಿಂದ ಸಸಿಯನ್ನು ನೆಟ್ಟು ಯೋಗದಿನದ ಆರಂಭ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಾಕಷ್ಟು ದೆಹಲಿ ಕನ್ನಡಿಗರು ಭಾಗವಹಿಸಿ ತಮ್ಮ ದೇಹವನ್ನು ದಂಡಿಸಿ ಯೋಗದ ಲಾಭ ಪಡೆದರು. ಕೊನೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಪೂಜಾ ಪಿ ರಾವ್ ಹಾಗೂ ಅಭಿಮತ ಪ್ರಧಾನ ಸಂಪಾದಕರಾದ ಕೆ.ಎಸ್. ಮೂರ್ತಿ ಮತ್ತು ಸಂಘದ ಸದಸ್ಯರಾದ ಅರುಣ್ ಚರಾಪ ಅವರು ಯೋಗದ ಮಹತ್ವದ ಬಗ್ಗೆ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.
ನಂತರ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯಿಂದ ಬಂದಂತ ಯೋಗ ಗುರುಗಳಿಗೆ ಸನ್ಮಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಗೆ ಮಿನಿಸ್ಟ್ರಿ ಆಫ್ ಆಯುಷ್ ಅವರ ಕಡೆಯಿಂದ ಉಚಿತ ಯೋಗ ಮ್ಯಾಟ್ ಮತ್ತು ಟೀ-ಶರ್ಟನ್ನು ಉಚಿತವಾಗಿ ವಿತರಿಸಲಾಯಿತು.
ಅಲ್ಲದೆ ಭಾಗಿಯಾಗಿದ್ದ ಎಲ್ಲರಿಗೂ ಸಂಘವು ಚೌಚೌ ಬಾತ್ ಉಪಹಾರ ಕೂಟವನ್ನು ಏರ್ಪಡಿಸಿದ್ದರು ಮತ್ತು ಎಲ್ಲರೂ ಅದರ ರುಚಿ ಸವಿದರು.
ಲೇಖನ-ವೆಂಕಟೇಶ.ಹೆಚ್, ಚಿತ್ರದುರ್ಗ (ನವ ದೆಹಲಿ).

