ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮ ತಾಲೂಕು ಕಛೇರಿ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶಾಸಕ ಧೀರಜ್ ಮುನಿರಾಜು ಮಾತನಾಡಿ,ವೇಮನರು ಸರಳ ಭಾಷೆಗಳಲ್ಲಿ ನುಡಿಗಟ್ಟುಗಳನ್ನು ರಚಿಸಿ ಜನರಿಗೆ ಮನವರಿಕೆ ಮಾಡಿಕೊಡುತ್ತಾ ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದ್ದರು, ಅವರ ವಚನಗಳಲ್ಲಿ ಬದುಕಿನ ಮೌಲ್ಯಗಳು ಅಡಗಿದ್ದು, ಇವುಗಳನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಅಗತ್ಯವಿದೆ ಎಂದರು.
ಆಚರಣೆಗಳಲ್ಲಿ ಅಧಿಕಾರಿಗಳನ್ನು ಭಾಗಿಯಾಗುವಂತೆ ತಿಳಿಸಿ – ಶಾಸಕ ಧೀರಜ್ ಮುನಿರಾಜು ಕಾರ್ಯಕ್ರಮದಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿ ರಾಗಿರುವುದನ್ನು ಗಮನಿಸಿದ ಶಾಸಕರು ರಜಾ ದಿನಗಳಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಹಾಗೂ ಈ ಕುರಿತು ತಾಲೂಕು ದಂಡಅಧಿಕಾರಿಗಳು ಪ್ರತಿ ಇಲಾಖೆ ಗಳಿಗೂ ಮನವರಿಗೆ ಮಾಡಿಕೊಡುವಂತೆ ತಿಳಿಸಿದರು.
ವೇಮನ ರೆಡ್ಡಿ ಜನಸಂಘದ ತಾಲೂಕು ಅಧ್ಯಕ್ಷ ಎಂ.ಜಗದೀಶ್ ರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳ ಮೂಲಕ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸಿದ ಸರ್ವಜ್ಞ ಕವಿಯಂತೆ ತೆಲುಗಿನಲ್ಲಿ ವೇಮನ ಕವಿ ತಮ್ಮ ವಚನಗಳಲ್ಲಿ ಬದುಕಿನ ಸಿದ್ಧಾಂತಗಳನ್ನು ತಿಳಿಸಿದ್ದರು. ಅವರ ತತ್ವಾದರ್ಶಗಳು ಸಮಾಜಕ್ಕೆ ದಾರಿ ದೀಪ ವಾಗಿವೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್ .ಹನುಮಂತ ರೆಡ್ಡಿ, ಮಾತನಾಡಿ, ರಾಜ ಮನೆತನದಲ್ಲಿ ಹುಟ್ಟಿ ಎಲ್ಲವನ್ನೂ ತ್ಯಜಿಸಿ, ಶ್ರೇಷ್ಠ ಸಂತರಾಗಿ, ದಾರ್ಶನಿಕ ರಾಗಿ, ಕವಿಯಾಗಿ ಮನುಕುಲದ ಏಳಿಗೆಗೆ ಸರಳ ಸಹಜವಾದ ಪ್ರಕೃತಿ ಧರ್ಮವನ್ನು ಉಪದೇಶಿಸಿದ ಶ್ರೀ ಮಹಾಯೋಗಿ ವೇಮನರು ಅನೇಕ ಸಾಮಾಜಿಕ ಅರ್ಥ ಗಾಂಭೀರ್ಯ ವನ್ನು ಹೊಂದಿರುವ ವಚನ ರಚಿಸಿದ್ದಾರೆ. ರೆಡ್ಡಿ ಸಮುದಾಯಕ್ಕೆ ಸಾಕಷ್ಟು ವರ್ಷಗಳ ಇತಿಹಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ರೆಡ್ಡಿ ಸಮುದಾಯದ ಬಿ.ಆನಂದರೆಡ್ಡಿ, ಪಿ.ವೆಂಕಟರಾಮರೆಡ್ಡಿ, ಎಂ.ನಾರಾಯಣ ರೆಡ್ಡಿ,ರಾಮಚಂದ್ರ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ದಯಾಕರರೆಡ್ಡಿ, ಪ್ರಭಾಕರರೆಡ್ಡಿ, ಶಿವಾರೆಡ್ಡಿ, ಕಸಬಾ ಗ್ರಾಮ ಲೆಕ್ಕಿಗ ಎಚ್.ಎಸ್.ರಾಜೇಂದ್ರ ಬಾಬು, ಗ್ರಾ.ಪಂ ಸದಸ್ಯೆ ನಾಗರತ್ನಮ್ಮ, ಕನ್ನಡ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ನಾಗರಾಜು ಮೊದಲಾದವರು ಭಾಗವಹಿಸಿದ್ದರು.