ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಾದ್ಯಂತ ಇಂದು ಈದ್‌ಉಲ್‌ಫಿತರ್(ರಂಜಾನ್) ಹಬ್ಬವನ್ನು ಮುಸ್ಲಿಂ ಬಂಧುಗಳೆಲ್ಲರೂ ಸೇರಿ ಸಂಭ್ರಮ – ಸಡಗರದಿಂದ ಆಚರಿಸಿದರು. ಕಳೆದ ಒಂದು ತಿಂಗಳಿನಿಂದ ಉಪವಾಸ ಆಚರಣೆ ನಡೆಸಿದ್ದ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನ ಮತ್ತು ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಳ್ಳಾರಿ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಜಯನಗರ(ಹೊಸಪೇಟೆ), ದಾವಣಗೆರೆ ಶಿವಮೊಗ್ಗ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ಸೇರಿದಂತೆ ಇತರೆ ಕಡೆ ಮುಸಲ್ಮಾನ್ ಬಾಂಧವರು ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಿದರು.
ರಾಜ್ಯದ ವಿವಿಧ ಈದ್ಗಾ ಮೈದಾನದಲ್ಲಿ ಸಾಮೂಹಿಕಪ್ರಾರ್ಥನೆ ಸಲ್ಲಿಕೆ ಬಳಿಕ ಪರಸ್ಪರರು ಅಪ್ಪಿಕೊಂಡು ಶುಭಾಶಯ ವಿನಿಯಮ ಮಾಡಿಕೊಂಡರು. ಬಳಿಕ ತಮ್ಮ ಮನೆಗೆ ತೆರಳಿ ಸಿಹಿ ಸೇವಿಸಿ ಸಂಭ್ರಮಿಸಿದರು. ಜೊತೆಗೆ ಸ್ನೇಹಿತರು, ಬಂಧುಗಳು ಮತ್ತು ನೆರೆ ಹೊರೆಯವರನ್ನು ಮನೆಗೆ ಆಹ್ವಾನಿಸಿ ಹಬ್ಬವನ್ನು ಆಚರಿಸಿದರು.
ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ದಾನ – ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಅಪ್ಪಿಕೊಂಡು ಸೋದರತ್ವ ಮೆರೆದರು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬಳ್ಳಾರಿ ಸಂಭ್ರಮ: ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು. ಬೆಳಗ್ಗೆಯಿಂದಲೇ ನಗರದ ಎಪಿಎಂಸಿ ಬಳಿಯ ಈದ್ಗಾ ಮೈದಾನಕ್ಕೆ ತೆರಳಿದ ಬಾಂಧವರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೃದ್ದರಿಂದ ಹಿಡಿದು ಚಿಕ್ಕಮಕ್ಕಳು ಕೂಡ ಭಾಗವಹಿಸಿದ್ದರು.
ಪ್ರಾರ್ಥನಾ ಸ್ಥಳದಲ್ಲಿ ಸಂಸದ ತುಕರಾಂ, ಶಾಸಕ ಭರತ್ ರೆಡ್ಡಿ ಭಾಗವಹಿಸಿ ಹಬ್ಬದ ಶುಭಾಶಯ ಕೋರಿದರು. ಹಬ್ಬದ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್‌ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.